83 ವರ್ಷದ ವೃದ್ಧೆಗೆ ಮಗ, ಸೊಸೆಯಿಂದ ಕಿರುಕುಳ; ಸಂಕಷ್ಟದ ಸ್ಥಿತಿಯಲ್ಲಿದ್ದ ತಾಯಿಯ ರಕ್ಷಣೆ
ವೃದ್ಧೆ ಮಳೆಗೆ, ಸರಿಯಾದ ಬಟ್ಟೆ ಇಲ್ಲದೆ ಮಳೆಯಲ್ಲಿ ಮಲಗಿದ್ದರು. ಸೂಕ್ಷ್ಮವಾಗಿ ಗಮನಿಸಿದಾಗ ಹಣೆಯಲ್ಲಿ ಗಾಯವಾಗಿರುವುದು ಕೂಡ ತಿಳಿದುಬಂತು. ಆ ಬಳಿಕ, ಪೊಲೀಸರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಮಾಹಿತಿ ನೀಡಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಉಡುಪಿ: ಅಬಲ ವೃದ್ಧೆಯೊಬ್ಬರನ್ನು ಸ್ವಂತ ಮಗ ಹಾಗೂ ಆತನ ಪತ್ನಿ ಸೇರಿ ಕಿರುಕುಳ ನೀಡುತ್ತಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿ, 83 ವರ್ಷದ ವೃದ್ಧೆಯನ್ನು ಗುರುವಾರ ರಕ್ಷಿಸಲಾಗಿದೆ. ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ಮತ್ತು ಕಾರ್ಕಳ ಗ್ರಾಮೀಣ ವಿಭಾಗ ಪೊಲೀಸರು ವೃದ್ಧೆಯನ್ನು ರಕ್ಷಿಸಿದ್ದಾರೆ.
ಕಾರ್ಕಳ ಕಲ್ಯ ಗ್ರಾಮದ ವೃದ್ಧ ಮಹಿಳೆಗೆ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು ಎಂಬ ಬಗ್ಗೆ ಸುಳಿವು ಸಿಕ್ಕಿತು. ಈಗ ಲಾಕ್ಡೌನ್ ಇರುವ ಕಾರಣ ಫುಡ್ ಕಿಟ್ ವಿತರಣೆಯನ್ನು ಯುವಜನ ಫಾರ್ ಸೇವಾ ಎಂಬ ಗ್ರೂಪ್ ಮುಖಾಂತರ ನಡೆಸುತ್ತಿದ್ದೇವೆ. ಹಾಗಾಗಿ, ಫುಡ್ ಕಿಟ್ ನೀಡುವ ನೆಪದಲ್ಲಿ ನಾವು ಆ ಮನೆಗೆ ಭೇಟಿ ಕೊಟ್ಟೆವು ಎಂದು ರಮಿತಾ ತಿಳಿಸಿದ್ದಾರೆ.
ಅಲ್ಲಿ ವೃದ್ಧ ಮಹಿಳೆಯ ಪರಿಸ್ಥಿತಿ ಕಂಡು ಆಶ್ವರ್ಯವಾಯಿತು. ವೃದ್ಧೆ ಮಳೆಗೆ, ಸರಿಯಾದ ಬಟ್ಟೆ ಇಲ್ಲದೆ ಮಳೆಯಲ್ಲಿ ಮಲಗಿದ್ದರು. ಸೂಕ್ಷ್ಮವಾಗಿ ಗಮನಿಸಿದಾಗ ಹಣೆಯಲ್ಲಿ ಗಾಯವಾಗಿರುವುದು ಕೂಡ ತಿಳಿದುಬಂತು. ಆ ಬಳಿಕ, ಪೊಲೀಸರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಮಾಹಿತಿ ನೀಡಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ರಮಿತಾ ಮಾಹಿತಿ ನೀಡಿದ್ದಾರೆ.
ವೃದ್ಧ ಮಹಿಳೆಯ ಬಳಿ ಇರುವ ಚಿನ್ನವನ್ನು ಮಗ ಮತ್ತು ಸೊಸೆ ಕಸಿದುಕೊಂಡಿದ್ದಾರೆ. ಆ ಬಳಿಕ, 2.5 ಎಕರೆ ಜಾಗ ಮತ್ತು ಮನೆಗೂ ಬೇಡಿಕೆ ಇಟ್ಟಿದ್ದಾರೆ. ವೃದ್ಧೆಯ ಗಂಡ ಸುಮಾರು 5 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಆ ನಂತರ ವೃದ್ಧೆಗೆ ಮನೆಯಲ್ಲಿ ಕಿರುಕುಳ ನೀಡುತ್ತಲೇ ಬಂದಿದ್ದಾರೆ ಎಂಬ ವಿವರಗಳು ವೃದ್ಧೆಯನ್ನು ಈ ಬಗ್ಗೆ ಕೇಳಿದಾಗ ತಿಳಿದುಬಂದಿದೆ.
ಈಗ ವೃದ್ಧೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯ ಕೊವಿಡ್-19 ವರದಿ ಕೂಡ ಪಾಸಿಟಿವ್ ಬಂದಿದೆ. ಊಟ ಕೇಳಿದಾಗ ಮಗ ಥಳಿಸಿದ್ದಾನೆ ಎಂದು ಪೊಲೀಸರಿಗೆ ವೃದ್ಧೆ ಹೇಳಿಕೊಂಡಿದ್ದಾರೆ. ಇದೀಗ ಈ ಬಗ್ಗೆ ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು ಹೋಮ ಕುಂಡ ಹತ್ಯೆ! ಅಂದು ನಡೆದ ಘಟನೆಗಳೇನು?
ಪತಿಗೆ ಕೆಲಸ ನೀಡಿ ಎಂದಿದ್ದಕ್ಕೆ ಗ್ರಾಮ ಪಂಚಾಯತಿ ಸದಸ್ಯೆ ಗಂಡನಿಂದ ಲೈಂಗಿಕ ಕಿರುಕುಳ; ಮಹಿಳೆಯಿಂದ ದೂರು ದಾಖಲು
Published On - 8:05 pm, Tue, 8 June 21