ಮಂಡ್ಯ, ಡಿಸೆಂಬರ್ 18: ಮೂವತ್ತು ವರ್ಷಗಳ ಬಳಿಕ ಈ ಬಾರಿ ಸಕ್ಕರಿನಗರಿ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (Kannada Sahitya Sammelana) ಮಂಡ್ಯದಲ್ಲಿ ನಡೆಯಲಿದೆ. ಈ ನುಡಿಜಾತ್ರೆಯನ್ನು ಸಾಕಷ್ಟು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಣೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಡಿ.20 ಮತ್ತು 21ರಂದು ರಜೆ ಘೋಷಿಸಿ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಬುಧವಾರ ಆದೇಶ ಹೊರಡಿಸಿದ್ದಾರೆ.
ಡಿ.20ರಿಂದ 22ರವರೆಗೂ 3 ದಿನ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನಲೆ ಗಣ್ಯರು ಮತ್ತು ನೊಂದಾಯಿತ ಪ್ರತಿನಿಧಿಗಳು ಮಂಡ್ಯಕ್ಕೆ ಆಗಮಿಸಲಿದ್ದಾರೆ. ಅವರಿಗೆ ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತೆ.
ಇದನ್ನೂ ಓದಿ: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಈ ಬಾರಿ ಹೊಸ ಗೋಷ್ಠಿಗಳ ಹಬ್ಬ: ಪ್ರಕೃತಿ ವಿಕೋಪ, ಸಾಹಿತ್ಯದಲ್ಲಿ ರಾಜಕೀಯದ ಚರ್ಚೆ
ಅಲ್ಲದೇ ನಾಡು-ನುಡಿ ಬಗ್ಗೆ ಅಭಿಮಾನ ಮೂಡಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಭಾಗಿಯಾಗಬೇಕು. ಆ ನಿಟ್ಟಿನಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ಡಿ.20, 21 ಎರಡು ದಿನ ರಜೆ ಘೋಷಣೆ ಮಾಡಲಾಗಿದೆ.
ಈ ನುಡಿಜಾತ್ರೆಯನ್ನ ಸಾಕಷ್ಟು ಅರ್ಥಪೂರ್ಣವಾಗಿ ನಡೆಸಲು ರಾಜ್ಯ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಂಡ್ಯ ಜಿಲ್ಲಾಡಳಿತ ಈಗಾಗಲೇ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಮಂಡ್ಯ ಹೊರವಲಯದ ಶ್ರೀನಿವಾಸ್ ಪುರದ ಬಳಿ ಸುಮಾರು 60 ಎಕರೆ ಪ್ರದೇಶದಲ್ಲಿ ನುಡಿಹಬ್ಬವನ್ನ ಆಚರಣೆ ಮಾಡಲು ತಯಾರಿ ಮಾಡಲಾಗಿದೆ.
ಇದನ್ನೂ ಓದಿ: ಎಸ್‌ಎಂ ಕೃಷ್ಣ ಬರೆದ ಕೊನೆಯ ಪತ್ರ ಲಭ್ಯ: ಮಂಡ್ಯ ಸಾಹಿತ್ಯ ಸಮ್ಮೇಳನದ ಬಗ್ಗೆ ಏನು ಬರೆದಿದ್ದರು ನೋಡಿ
ಅಲ್ಲದೇ ಈಗಾಗಲೇ ಸಮ್ಮೇಳನದ ಗೌರವಾಧ್ಯಕ್ಷರಾಗಿ ಗೊರಾ ಚನ್ನಬಸವ ಅವರನ್ನ ಕೂಡ ಆಯ್ಕೆ ಮಾಡಲಾಗಿದೆ. ಸಮ್ಮೇಳನದ ಅಂಗವಾಗಿ ಮನೆ ಮನೆಗೆ ಬಾವುಟ ನೀಡುವ ಕಾರ್ಯಕ್ರಮವನ್ನು ಇತ್ತೀಚೆಗೆ ಮಾಡಲಾಗಿದೆ. ಮಂಡ್ಯ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪ್ರತಿ ಮನೆಗಳ ಮೇಲೆ ಬಾವುಟ ಹಾರಿಸಲು ಕರೆ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ ನೀಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:03 pm, Wed, 18 December 24