Nothing Is Impossible: ಯಾವುದೂ ಅಸಾಧ್ಯವಲ್ಲ; ಕೊಪ್ಪಳದ ಈ ಹುಡುಗ ಲಾಕ್​ಡೌನ್​ನಲ್ಲಿ ಕಾಲು, ಬಾಯಿಂದಲೂ ಚಿತ್ರ ಬಿಡಿಸುವುದು ಕಲಿತ!

| Updated By: preethi shettigar

Updated on: Jul 16, 2021 | 8:01 AM

ಸಾಮಾನ್ಯವಾಗಿ ಕೈಯಿಂದ ಕಲೆ ಬಿಡಿಸೋ ಕಲಾವಿದರ ಮಧ್ಯೆ ಹಜರತ್ ಡಿಫರೆಂಟ್ ಆಗಿದ್ದಾನೆ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕಲಿತ ಈತನ ಕಲೆಗೆ ಸಹೃದಯರ ಪ್ರೋತ್ಸಾಹದ ಅಗತ್ಯವಿದೆ.

Nothing Is Impossible: ಯಾವುದೂ ಅಸಾಧ್ಯವಲ್ಲ; ಕೊಪ್ಪಳದ ಈ ಹುಡುಗ ಲಾಕ್​ಡೌನ್​ನಲ್ಲಿ ಕಾಲು, ಬಾಯಿಂದಲೂ ಚಿತ್ರ ಬಿಡಿಸುವುದು ಕಲಿತ!
ಹರ್ಜತ್​ನ ಚಿತ್ರಕಲಾ ಕೌಶಲ
Follow us on

ಕೊಪ್ಪಳ: ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬ ಮಾತಿದೆ. ಅದು ನಿಜ! ಛಲ ಇದ್ದಲ್ಲಿ ಏನನ್ನಾದರೂ ಸಾಧಿಸಬಹುದು. ಅದರಂತೆ ಇಲ್ಲೋರ್ವ ಪದವಿ ವಿದ್ಯಾರ್ಥಿ ಕೊರೊನಾ ಲಾಕ್​ಡೌನ್​ನಲ್ಲಿ ಕಾಲು ಹಾಗೂ ಬಾಯಿಂದ ಚಿತ್ರ ಬಿಡಿಸುವ ಕೌಶಲವನ್ನು ತನ್ನದಾಗಿಸಿಕೊಂಡಿದ್ದಾನೆ. ಈಮೂಲಕ ವಿಭಿನ್ನತೆ ಮೆರೆದಿದ್ದಾನೆ. ಅಂತಹ ವಿಶಿಷ್ಟ ಸಾಧಕ ಹರ್ಜತ್ ಬಳಿಗಾರ ಕುರಿತು ಟಿವಿ9 ಕನ್ನಡ ಡಿಜಿಟಲ್ ಕೊಪ್ಪಳ ವರದಿಗಾರ ಶಿವಕುಮಾರ್ ಪತ್ತಾರ್ ಬರೆದ ವಿಶೇಷ ವರದಿ ಇಲ್ಲಿದೆ.

ನಾವು ಹೇಳುತ್ತಿರುವ ಕೊಪ್ಪಳದ ಈ ಹುಡುಗ ಅತ್ಯಂತ ವಿಭಿನ್ನ. ಕೊಪ್ಪಳದ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿಯ ನಿವಾಸಿ ಹರ್ಜತ್ ಬಳಿಗಾರ ಇದೀಗ ಬಿಎ ಪ್ರಥಮ ವರ್ಷದಲ್ಲಿ ಓದುತ್ತಿದ್ದಾನೆ.‌ ಈ ಹುಡುಗನ ಟ್ಯಾಲೆಂಟ್ ಎಲ್ಲರೂ ಫಿದಾ ಆಗುವಂತಿದೆ. ತಾನು ಕಲಿತಿರುವ ಚಿತ್ರಕಲೆಯನ್ನು ವಿಭಿನ್ನವಾಗಿ ಬಿಡಿಸುತ್ತಾನೆ. ಕೈಯಲ್ಲಿ ಬಾಲ್ ಇದ್ರೆ ಬಾಲ್​ನಿಂದ, ಬಾಯಿಂದ, ಕಾಲಿಂದ್, ಬ್ಯಾಟ್, ಡಂಬಲ್ಸ್ ನಿಂದ, ಉಲ್ಟಾ ಮಲಗಿ, ಬಾಯಿಂದ ಹಾಗೂ ಕಾಲಿನಿಂದ ಪೇಂಟಿಂಗ್ ಮಾಡುತ್ತಾನೆ.

ಹರ್ಜತ್​ಗೆ ಬಾಲ್ಯದಿಂದಲೇ ಚಿತ್ರಕಲೆಯ ಹುಚ್ಚು. ಶಿಕ್ಷರಿಗೆ ಅಚ್ಚುಮೆಚ್ಚಿನ ವಿದ್ಯಾರ್ಥಿ, ತಂದೆ ಚಾಂದ್ ಭಾಷಾ ಕೃಷಿ ಕೆಲಸ ಮಾಡುತ್ತಾರೆ. ತಾಯಿ ಅಲ್ಲಾಬಿ ಬಳೆ ಮಾರುತ್ತಾರೆ. ಇಮಾಮ್ ಎನ್ನುವ ಒಬ್ಬ ತಮ್ಮ ಇದ್ದಾನೆ. ಚಿಕ್ಕ ಹಾಗೂ ಬಡತನ ಕುಟುಂಬ, ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ಹರ್ಜತ್, ಅಲ್ಪಸಂಖ್ಯಾತರ ವಸತಿನಿಲಯದಲ್ಲಿ ಇರುತ್ತಾನೆ. ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿ ಭಿನ್ನವಾಗಿ ಕಲೆಯನ್ನು ಬಿಡಿಸುವ ಅಭ್ಯಾಸ ಮಾಡಿಕೊಂಡಿದ್ದಾನೆ. ಓದುವುದರಲ್ಲಿ ಎಷ್ಟು ಶ್ರದ್ಧೆ ಇದೆಯೋ, ಅಷ್ಟೆ ಶ್ರದ್ಧೆ ತಾನು ಕಲಿತ ಕಲೆಯಲ್ಲಿ ಇದೆ. ತಾನು ಭಿನ್ನವಾಗಿ ಕಲೆಯಲ್ಲಿ ಗುರುತಿಸಿಕೊಳ್ಳಬೇಕು ಎನ್ನುವುದು ಹರ್ಜತ್ ಆಸೆ.

ಈಗಾಗಲೇ ಸ್ವಾತಂತ್ರ್ಯ ಹೋರಾಟಗಾರರ, ಕ್ರೀಡಾ ಪಟುಗಳ ಹಾಗೂ ಸಾಧಕರ ಚಿತ್ರಗಳನ್ನು ಬಿಡಿಸಿದ್ದಾನೆ. ವಿಶೇಷವಾಗಿ ಅಬ್ದುಲ್ ಕಲಾಂ, ಬಾಬಾ ಸಾಹೇಬ್ ಅಂಬೇಡ್ಕರ್ ಧೋನಿ, ವಿರಾಟ್ ಕೊಹ್ಲಿ ಅವರ ಚಿತ್ರಗಳನ್ನು ಭಿನ್ನ ರೀತಿಯಾಗಿ ಬಿಡಿಸಿದ್ದಾನೆ. ಅದರಲ್ಲೂ ಪೊಲೀಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಚಿತ್ರವು ಸಹ ಈ ಹುಡುಗನಿಂದ ಭಿನ್ನವಾಗಿ ಮೂಡಿದೆ. ಇದೀಗ ಈ ಹುಡುಗನ ಚಿತ್ರಗಳು ಇನ್ಸ್​ಸ್ಟಾಗ್ರಾಂನಲ್ಲಿ ಸಖತ್ ಸದ್ದು ಮಾಡುತ್ತಿವೆ. ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಾಲು ಮೇಲೆ ಮಾಡಿ- ತಲೆ ಕೆಳಗೆ ಮಾಡಿ ಚಿತ್ರ ಬಿಡಿಸೋ ಈ ಯುವಕ ನಿಜಕ್ಕೂ ಅಚ್ಚರಿ ಮೂಡಿಸುತ್ತಿದ್ದಾನೆ. ಹಜರತ್ ಪ್ರತಿಭೆ ಬಗ್ಗೆ ಆತನ ಸ್ನೇಹಿತರಿಗೆ ಹೆಮ್ಮೆ ಮೂಡುತ್ತಿದೆ.

ಸಾಮಾನ್ಯವಾಗಿ ಕೈಯಿಂದ ಕಲೆ ಬಿಡಿಸೋ ಕಲಾವಿದರ ಮಧ್ಯೆ ಹಜರತ್ ಡಿಫರೆಂಟ್ ಆಗಿದ್ದಾನೆ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕಲಿತ ಈತನ ಕಲೆಗೆ ಸಹೃದಯರ ಪ್ರೋತ್ಸಾಹದ ಅಗತ್ಯವಿದೆ.

ವಿಶೇಷ ವರದಿ: ಶಿವಕುಮಾರ್ ಪತ್ತಾರ್

ಇದನ್ನೂ ಓದಿ: 

Field Report: ಆನಂದಯ್ಯನ ಕೊರೊನಾ ಔಷಧ ಪರಿಣಾಮ ಬೀರುವುದೇ? ಔಷಧ ಸೇವಿಸಿದ ಕೊಪ್ಪಳದ ಜನರು ಹೇಳುವುದೇನು?

ರೈತರ ಹೊಲ ಗದ್ದೆ ಕಾಯಲೂ ಸೈ, ಕರಾವಳಿಯ ಬಂದರಿಗೂ ಜೈ; ಈ ಕತ್ತಾಳೆ ನಾರಿನ ಬಗ್ಗೆ ನಿಮಗೆಷ್ಟು ಗೊತ್ತು?

( A boy from Koppal learned to draw a foot and mouth in the lock down)