ಬೆಳಗಾವಿ: ಅಗ್ನಿಪಥ್ ಯೋಜನೆ (Agneepath Project) ಖಂಡಿಸಿ ಜೂನ್ 20ರಂದು ಬೆಳಗಾವಿ ಬಂದ್ಗೆ ಕರೆ ನೀಡಲಾಗಿದೆ. ಬಂದ್ಗೆ ಕರೆ ನೀಡಿರುವ ಯುವಕರು, ಹೆದ್ದಾರಿ ತಡೆದು ಪ್ರತಿಭಟನೆ (Protest) ಮಾಡಲು ನಿರ್ಧರಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಾಲ್ಕು ಬೆಂಗಳೂರು ಮುಂಬೈ ಹೆದ್ದಾರಿ ತಡೆದು ಧರಣಿ ನಡೆಸಲು ಯಮಕನಮರಡಿ ಮತ್ತು ಗೋಕಾಕ್ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಯುವಕರು ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಟಿವಿ9ಗೆ ಹೇಳಿಕೆ ನೀಡಿರುವ ಶಾಸಕಿ ಅಂಜಲಿ ನಿಂಬಾಳ್ಕರ್, ಜೂನ್ 20ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ಬಂದ್ಗೆ ಕರೆ ನೀಡಲಾಗಿದೆ. ಕೇಂದ್ರ ಸರ್ಕಾರ ಯಾವುದೇ ಉದ್ಯೋಗವನ್ನು ಸೃಷ್ಟಿಸುತ್ತಿಲ್ಲ. ಅಗ್ನಿಪಥ್ ಯೋಜನೆ ಜಾರಿಗೆ ತಂದು ನಮ್ಮ ತಾಲೂಕಿನ 3 ಸಾವಿರ ಯುವಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಯೋಜನೆ ಜಾರಿ ಆಗಲು ಬಿಡಲ್ಲ. ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದರು.
ಇಂದು ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಅಗ್ನಿಪಥ್ ಯೋಜನೆ ವಿರೋಧಿಸಿ ಯುವಕರು ಪ್ರತಿಭಟನೆ ನಡೆಸಿದ್ದಾರೆ. ತಹಶೀಲ್ದಾರ್ ಕಚೇರಿ ಮುಂದೆ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದಾರೆ. ಧರಣಿಯಲ್ಲಿ ಯುವಕರು ರಸ್ತೆಯಲ್ಲೇ ಡಿಪ್ಸ್ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರತಿಭಟನೆಯಲ್ಲಿ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಭಾಗಿಯಾಗಿದ್ದರು. ತಾಲೂಕು ಕ್ರೀಡಾಂಗಣದಿಂದ ತಹಶೀಲ್ದಾರ್ ಕಚೇರಿವರೆಗೆ ಱಲಿ ನಡೆಸಿದರು. ಈ ಸಂದರ್ಭದಲ್ಲಿ ಯುವಕರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಧರಣಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ 1 ಡಿಎಸ್ಪಿ, 4 ಸಿಪಿಐ, 4 ಪಿಎಸ್ಐ, 50 ಸಿಬ್ಬಂದಿ, ಡಿಆರ್ ವ್ಯಾನ್ ನಿಯೋಜನೆ ಮಾಡಲಾಗಿದೆ.
ರಾಯಚೂರಿನಲ್ಲಿ ಸರ್ಪಗಾವಲು:
ಬಿಹಾರ್, ತೆಲಂಗಾಣದಲ್ಲಿ ರೈಲುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದರಿಂದ ರಾಯಚೂರು ನಗರ ರೈಲ್ವೆ ನಿಲ್ದಾಣದಲ್ಲಿ ಖಾಕಿಯಿಂದ ಸರ್ಪಗಾವಲು ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಭದ್ರತೆಗೆ 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿ, ರೈಲು ನಿಲ್ದಾಣಕ್ಕೆ ಆಗಮಿಸುವ ಅನುಮಾನಾಸ್ಪದರ ಮೇಲೆ ನಿಗಾ ವಹಿಸಲಾಗಿದೆ.
ಪ್ರತಿಭಟನೆಗೆ ಮುಂದಾಗಿದ್ದ 230ಕ್ಕೂ ಹೆಚ್ಚು ಯುವಕರು ವಶಕ್ಕೆ:
ಧಾರವಾಡದಲ್ಲೂ ಬಸ್ ಗಾಜು ಒಡೆದು ಧರಣಿ ನಡೆಸಲು ಮುಂದಾಗಿದ್ದ, 25ಕ್ಕೂ ಹೆಚ್ಚು ಯುವಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹು-ಧಾ ಪೊಲೀಸ್ ಕಮಿಷನರ್ ಲಾಬೂರಾಮ್, ಪ್ರಕರಣ ಸಂಬಂಧ ಒಟ್ಟು 30 ಜನರನ್ನು ವಶಕ್ಕೆ ಪಡೆಯಲಾಗಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Sat, 18 June 22