ಬೆಂಗಳೂರು: ಬಿಎಂಡಬ್ಲ್ಯು ಕಾರ್ನಲ್ಲಿ ಬಂದಿದ್ದ ಯುವಕ ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದ ಘಟನೆ ನಗರದ ನಾಯಂಡಹಳ್ಳಿಯಲ್ಲಿ ನಡೆದಿದೆ. ಪೊಲೀಸರಿಗೆ ಆವಾಜ್ ಹಾಕಿದ ಬಿಎಂಡಬ್ಲ್ಯು ಕಾರಿನಲ್ಲಿದ್ದ ಯುವಕನಿಗೆ ಮಹಿಳಾ ಪೊಲೀಸ್ ಕಪಾಳಮೋಕ್ಷ ಮಾಡಿದ್ದಾರೆ. ಕಾರಿನಲ್ಲಿ ಬಂದು ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದಿದ್ದ ಯುವಕ ಮೊದಲು ಕಾರಿನಿಂದ ಕೆಳಗಿಳಿಯಲು ಕೇಳಿಲ್ಲ. ಆತನನ್ನು ಕಾರಿನಿಂದ ಕೆಳಗಿಳಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.
ಬಳಿಕ, ಶತಾಯಗತಾಯ ಯುವಕನನ್ನು ಕೆಳಗಿಳಿಸಿದ ಪೊಲೀಸರು ಕಾರು ಜಪ್ತಿ ಮಾಡಿ ಯುವಕನನ್ನ ಠಾಣೆಗೆ ಕರೆದೊಯ್ದಿದ್ದಾರೆ. ಮಾಸ್ಟರ್ ಶೆಫ್ ಎಂದು ಕಾರಿನ ಮುಂದೆ ನಾಮಫಲಕ ಹಾಕಿದ್ದು ಕಂಡುಬಂದಿದೆ. ಯುವಕ ಮದ್ಯ ಸೇವಿಸಿ ಬಿಎಂಡಬ್ಲ್ಯು ಕಾರು ಚಲಾಯಿಸುತ್ತಿದ್ದ ಶಂಕೆ ವ್ಯಕ್ತವಾಗಿದೆ.
ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ
ಕೊರೊನಾ ಎರಡನೇ ನಿಯಂತ್ರಿಸುವ ಸಲುವಾಗಿ ಸೋಮವಾರದಿಂದ (ಮೇ 10) ರಾಜ್ಯಾದ್ಯಂತ ಕಠಿಣ ನಿಯಮಾವಳಿಗಳು ಜಾರಿಯಾಗಲಿವೆ ಎಂದು ರಾಜ್ಯ ಸರ್ಕಾರ ಈಗಾಗಲೇ ತಿಳಿಸಿದೆ. ಮೇ 10 ರಿಂದ ಮೇ 24ರ ವರೆಗೆ ಲಾಕ್ಡೌನ್ ಮಾದರಿಯ ಕಠಿಣ ಕ್ರಮ ಅಸ್ತಿತ್ವದಲ್ಲಿ ಇರಲಿದ್ದು ಆ ಸಂದರ್ಭದಲ್ಲಿ ಯಾರೂ ಕೂಡಾ ನಿಯಮ ಉಲ್ಲಂಘನೆ ಮಾಡುವಂತಿಲ್ಲ ಎಂದು ಸರ್ಕಾರ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದೆ. ರಾಜ್ಯಾದ್ಯಂತ ಸೋಮವಾರದಿಂದ ನಿಯಮಗಳು ಅನ್ವಯವಾಗಲಿವೆಯಾದರೂ ಬೆಂಗಳೂರು ಪೊಲೀಸರು ಇಂದು (ಮೇ.8) ಬೆಳಗ್ಗೆ 10 ಗಂಟೆಯಿಂದಲೇ ಬಿಗಿಕ್ರಮಗಳನ್ನು ಅನುಷ್ಠಾನಗೊಳಿಸಲು ಸಜ್ಜಾಗಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಯ ನಂತರ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳ ಮೇಲೆ ಪ್ರಕರಣ ದಾಖಲಿಸಿ, ಜಪ್ತಿ ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ನೀಡಿದ್ದಾರೆ. ಕಠಿಣ ನಿಯಮಾವಳಿಗಳನ್ನು ನಿಯಂತ್ರಿಸಲು ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದ್ದು, ಮೆಡಿಕಲ್ ಎಮರ್ಜೆನ್ಸಿ ಹೊರತಾಗಿ ಯಾವುದೇ ಕಾರಣಕ್ಕೂ ಜನರು ರಸ್ತೆಗಿಳಿಯುವಂತಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ. ಹೀಗಾಗಿ ಸಂಚಾರ ನಿರ್ಬಂಧಿಸಲು ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಮತ್ತಷ್ಟು ಕಣ್ಗಾವಲಿಡಲು ಪೊಲೀಸರು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ ಯಶಸ್ವಿಗೊಳಿಸಲು, ಕೊರೊನಾ ಸೋಂಕಿತರಿಗೆ ಸಹಾಯ ಮಾಡಲು ನಾವು ಸಿದ್ಧ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಳಿಕೆ
ಎಲ್ಲೂ ಬೆಡ್ ಸಿಗದೆ ಮುಖ್ಯಮಂತ್ರಿ ನಿವಾಸದ ಬಳಿಗೆ ಆಗಮಿಸಿದ ಕೊರೊನಾ ಸೋಂಕಿತ; ಘಟನೆ ಬಳಿಕ ಕುಮಾರಕೃಪಾ ರಸ್ತೆ ಬಂದ್
Published On - 5:00 pm, Sat, 8 May 21