ಹಿಂದೂ ಬಾಲಕಿಯನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ರಮೇಶ್ ಹೆಸರಿನ ಸೈಯದ್
ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕನೊಬ್ಬ 'ರಮೇಶ್' ಎಂದು ಸುಳ್ಳು ಹೆಸರು ಹೇಳಿ ಹಿಂದೂ ಬಾಲಕಿಯನ್ನು ಪರಿಚಯಿಸಿಕೊಂಡಿದ್ದಾನೆ. ಇಷ್ಟಕ್ಕೆ ಬಿಡದೇ ಬಾಲಕಿಯನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಯುವಕನನ್ನು ಹಿಡಿದು ಪ್ರಶ್ನಿಸಿದಾಗ ರಮೇಶ್ ಹೆಸರಿನ ಸೈಯದ್ ನ ರಾಸಲೀಲೆಗಳು ಬಟಾಬಯಲಾಗಿವೆ.

ಹುಬ್ಬಳ್ಳಿ, (ಅಕ್ಟೋಬರ್ 10): ಹಿಂದೂ (Hindu) ಧರ್ಮದ ಬಾಲಕಿಯನ್ನ ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮುಸ್ಲಿಂ ಯುವಕನೋರ್ವ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಘಟನೆ ಹುಬ್ಬಳ್ಳಿಯ (Hubballi) ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೈಯದ್ ಎನ್ನುವ ಮುಸ್ಲಿಂ ಯುವಕನೋರ್ವ ‘ರಮೇಶ್’ ಎಂದು ಸುಳ್ಳು ಹೆಸರು ಹೇಳಿ ಹಿಂದೂ ಬಾಲಕಿಯನ್ನು ಪರಿಚಯಿಸಿಕೊಂಡಿದ್ದಾನೆ. ಬಳಿಕ ಬಾಲಕಿಯೊಂದಿಗೆ ಕಾಮದಾಹ ತೀರಿಸಿಕೊಳ್ಳಲು ನಿರ್ಜನ ಪ್ರದೇಶಕ್ಕೆ ಕರೆಕೊಂಡು ಹೋಗಿದ್ದ ವೇಳೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಂತರ ಆತನ ಮೊಬೈಲ್ ಪರಿಶೀಲಿಸಿದಾಗ ಫೋನ್ ನಲ್ಲಿ ಬೇರೆ ರಾಸಲೀಲೆ ವಿಡಿಯೋಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಸೈಯದ್ ರಹನಾ ಮೊದಲು ಬಾಲಕಿಗೆ ತನ್ನ ಹೆಸರು ರಮೇಶ ಎಂದು ತಿಳಿಸಿ ಪರಿಚಯಿಸಿಕೊಂಡಿದ್ದು, ಸಲುಗೆ ಬೆಳೆಸಿಕೊಂಡಿದ್ದ. ಬಳಿಕ ಲೈಂಗಿಕ ಕ್ರಿಯೆಗೆಂದು ಬಾಲಕಿಯನ್ನು ಪುಸಲಾಯಿಸಿ ಹೊಲಕ್ಕೆ ಕರೆದೊಯ್ದಿದ್ದಾನೆ. ಅದೇ ವೇಳೆ ಸ್ಥಳೀಯರು ಯುವಕನನ್ನು ಹಿಡಿದುಕೊಂಡು ವಿಚಾರಿಸಿ ಮೊಬೈಲ್ ಪರಿಶೀಲನೆ ಮಾಡಿದಾಗ ಈತ ರಮೇಶ್ ಅಲ್ಲ ಸೈಯದ್ ರಹನಾ ಎನ್ನುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಲಾಡ್ಜ್ನಲ್ಲಿ ಹಿಂದೂ ಮಹಿಳೆ ಜತೆ ಮುಸ್ಲಿಂ ವ್ಯಕ್ತಿ ಲಾಕ್: ಅಬ್ದುಲ್ ಬದಲಿಗೆ ರಮೇಶ್ ಎಂದು ಹೆಸರು ಚೇಂಜ್
ಅಲ್ಲದೇ ಮೊಬೈಲ್‌ನಲ್ಲಿ ಯುವತಿಯೊಂದಿಗಿನ ಅಶ್ಲೀಲ ವೀಡಿಯೋ ಮತ್ತು ಫೋಟೋಗಳು ಹಾಗೂ ಇತರ ಯುವತಿಯರ ಜೊತೆಗಿನ ಫೋಟೋಗಳು ಪತ್ತೆಯಾಗಿವೆ. ಇದರಿಂದ ಕುಪಿತಗೊಂಡ ಸಾರ್ವಜನಿಕರು ಸೈಯದ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ನಾನು ಬಾಲಕಿಯನ್ನು ಹೊಲಕ್ಕೆ ಕರೆದೊಯ್ದಿದ್ದೆ, ನನ್ನಿಂದ ತಪ್ಪಾಗಿದೆ. ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಸಾರ್ವಜನಿಕರ ಎದುರು ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಸ್ಥಳೀಯರು ಸೈಯದ್ ನನ್ನು ಗೋಕುಲ್ ರೋಡ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಈ ಸಂಬಂಧ ಗೋಕುಲ್ ರೋಡ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.



