ಕುಡಿಯುವುದಕ್ಕೆ ಹಣ ಕೊಡಲಿಲ್ಲವೆಂದು ಪತ್ನಿ, ಮಗುವನ್ನು ಕೊಂದ ಪಾಪಿ
ಕುಡಿತದ ಚಟಕ್ಕೆ ಬಿಲಿಯಾಗಿ ಕೆಟ್ಟ ದಾರಿ ಹಿಡಿದು ಸಿಕ್ಕ ಸಿಕ್ಕವರ ಕೈಯಲ್ಲೆಲ್ಲಾ ಗೂಸ ತಿನ್ನುತ್ತಿದ್ದನು ದೇವಸ್ಥಾನದ ಪೂಜಾರಿ ಮಗ
ಕುಡಿತದ ಚಟಕ್ಕೆ ಒಳಗಾಗಿ ಅದೆಷ್ಟೋ ಜನರು ತಮ್ಮ ಸುಖ ಸಂಸಾರವನ್ನು ಹಾಳು ಮಾಡಿಕೊಂಡಿದ್ದಾರೆ. ಅದರಂತೆಯೇ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಮಾವಿನಹಳ್ಳಿ ಗ್ರಾಮದ ಮೋಹನ್ ಎಂಬಾತ ಕುಡಿತಕ್ಕೆ ದಾಸನಾಗಿ ದುಷ್ಕೃತ್ಯ ಎಸಗಿದ್ದಾನೆ. ಮೋಹನ್ ತಂದೆ ದೇವಸ್ಥಾನದ ಪೂಜಾರಿಯಾಗಿದ್ದು, ಗೌರವಾನ್ವಿತರಾಗಿದ್ದಾರೆ. ಆದರೆ ಇವರ ಮಗ ಕೆಟ್ಟ ದಾರಿ ಹಿಡಿದು ಗ್ರಾಮಸ್ಥರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದನು. ಮೋಹನ್ ಕಳ್ಳತನದ ದಾರಿ ಹಿಡಿದು ಸಿಕ್ಕ ಸಿಕ್ಕವರ ಕೈಯಲ್ಲೆಲ್ಲಾ ಗೂಸ ತಿನ್ನುತ್ತಿದ್ದನು.
ಕುಡಿತಕ್ಕೆ ದಾಸನಾಗಿರುವ ಮೋಹನ, ಇಂದು (ಅ.19) ಬೆಳಿಗ್ಗೆ ಎಣ್ಣೆ ಕುಡಿಯಲು ಪತ್ನಿ ಕಾವ್ಯ ಬಳಿ 100 ರೂ ಹಣ ಕೇಳಿದ್ದಾನೆ. ಆದರೆ ಪತ್ನಿ ಕಾವ್ಯ ಹಣ ಕೊಡಲ್ಲ ಅಂತ ಪಟ್ಟು ಹಿಡಿದಿದ್ದಾಳೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಮೋಹನ್ ಸಿಟ್ಟಿನ ಕೈಗೆ ಬುದ್ದಿಕೊಟ್ಟು ಕಬ್ಬಿಣದ ರಾಡ್ನಿಂದ ಪತ್ನಿ ಹಾಗೂ ಮಗುವಿಗೆ ಹೊಡೆದು ಕೊಲೆಗೈದಿದ್ದಾನೆ. ಕೂಡಲೇ ಮೋಹನ್ ತಾಯಿ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ವಿಷಯ ತಿಳಿದು ಮನೆಗೆ ಬಂದ ಗ್ರಾಮಸ್ಥರು ಹಗ್ಗದಿಂದ ಮೋಹನ್ನ ಕೈ ಕಾಲು ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ಮೋಹನ್ ಕಳೆದ ಆರು ವರ್ಷಗಳ ಹಿಂದೆ ತನ್ನ ತಂದೆ ಪೂಜೆ ಮಾಡುತ್ತಿದ್ದ ಕರಿಯಮ್ಮನ ದೇವಾಲಯದಲ್ಲಿ ಹುಂಡಿ ಕದ್ದು ಸಿಕ್ಕಿಬಿದಿದ್ದನು. ಈ ಸಂಬಂಧ ಪೊಲೀಸರು ಮೋಹನ್ನನ್ನು ಬಂಧಿಸಿದ್ದರು. ಆಗ ಗ್ರಾಮಸ್ಥರೆಲ್ಲಾ ಸೇರಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಪೊಲೀಸರಿಂದ ಬಿಡಿಸಿಕೊಂಡು ಬಂದಿದ್ದರು. ಇದಾದ ಬಳಿಕ ಮೋಹನ್ ಮಾನಸಿಕ ಅಸ್ವಸ್ಥನಾಗಿದ್ದನಂತೆ.
ಹೀಗಾಗಿ ಮೋಹನ್ ತಂದೆ, ಮಗನಿಗೆ ಮದುವೆ ಮಾಡಿದರೆ ಸರಿಹೋಗುತ್ತಾನೆ ಎಂದು ಚಿಕ್ಕನಾಯಕನಹಳ್ಳಿ ಮೂಲದ ಕಾವ್ಯಳನ್ನ ಮದುವೆ ಮಾಡಿದ್ದಾರೆ. ಮದುವೆಯಾಗಿ ಒಂದು ಗಂಡು ಮಗು ಇದ್ದರು, ಆಗಾಗ ಮೋಹನ್ ಮಾನಸಿಕ ಅಸ್ವಸ್ಥನಂತೆ ಆಡುತ್ತಿದ್ದನು. ಇದರಿಂದ ಬೇಸತ್ತಿದ್ದ ಕಾವ್ಯ ತನ್ನ ತವರು ಮನೆಗೆ ಹೋಗಿದ್ದಳು.
ಆಗ ರಾಜಿ ಪಂಚಾಯಿತಿ ಮಾಡಿದ ಬಳಿಕ ಕಳೆದ ತಿಂಗಳು ಕಾವ್ಯ ಗಂಡನ ಮನೆಗೆ ಬಂದಿದ್ದಳು. ಕಾವ್ಯ ಕೂಲಿ ಕೆಲಸಕ್ಕೆ ಹೋಗುತ್ತಿದ್ದಳು. ಕಾವ್ಯ ಕೂಲಿ ಕೆಲಸದಿಂದ ದುಡಿದ ಹಣವನ್ನು, ಮೋಹನ್ ಎಣ್ಣೆ ಕುಡಿಯೋಕೆ ಕೊಡು ಅಂತ ಕೇಳುತ್ತಿದ್ದನು. ಹಣ ಕೊಡಲು ಪತ್ನಿ ನಿರಾಕರಿಸಿದಾಗ ಗಲಾಟೆ ಶುರು ಮಾಡಿದ್ದನು. ಇದೇ ಗಲಾಟೆ ವಿಕೋಪಕ್ಕೆ ತಿರುಗಿ ದುರಂತ ಅಂತ್ಯ ಕಂಡಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:32 pm, Wed, 19 October 22