ರಾಶಿ ರಾಶಿ ಚಿನ್ನ, ಕಂತೆ ಕಂತೆ ನೋಟು-ಎಕರೆಗಟ್ಲೇ ಭೂಮಿ, ಕೆದಕಿದಷ್ಟು ಬಯಲಾಗ್ತಿದೆ ಭ್ರಷ್ಟರ ಖಜಾನೆ ರಹಸ್ಯ

ಎಸಿಬಿ ಅಧಿಕಾರಿಗಳು ಭ್ರಷ್ಟರ ಚಳಿ ಬಿಡಿಸಲು ನಿನ್ನೆ (ಫೆಬ್ರವರಿ-02) ಶಸ್ತ್ರ ಸಮೇತ ಫೀಲ್ಡ್​ಗೆ ಎಂಟ್ರಿ ಕೊಟ್ಟಿದ್ರು. ಭ್ರಷ್ಟ ಅಧಿಕಾರಿಗಳು ಕಟ್ಟಿದ್ದ ಅಕ್ರಮ ಸಂಪತ್ತಿನ ಕೋಟೆಯೊಳಗೆ ನುಗ್ಗಿ, ಇಂಚಿಂಚೂ ಜಾಲಾಡಿದ್ರು. ಹಾಗಾದ್ರೆ, ಎಸಿಬಿ ನಡೆಸಿದ ದಾಳಿಯಲ್ಲಿ ಸಿಕ್ಕ ಗರಿಗರಿ ನೋಟೆಷ್ಟು, ಪಳ ಪಳ ಹೊಳೆಯೋ ಚಿನ್ನಾಭರಣವೆಷ್ಟು? ಖಜಾನೆ ಕೆದಕಿದಾಗ ಸಿಕ್ಕ ಆಸ್ತಿ ಮೌಲ್ಯವೆಷ್ಟು..

  • TV9 Web Team
  • Published On - 7:15 AM, 3 Feb 2021
ರಾಶಿ ರಾಶಿ ಚಿನ್ನ, ಕಂತೆ ಕಂತೆ ನೋಟು-ಎಕರೆಗಟ್ಲೇ ಭೂಮಿ, ಕೆದಕಿದಷ್ಟು ಬಯಲಾಗ್ತಿದೆ ಭ್ರಷ್ಟರ ಖಜಾನೆ ರಹಸ್ಯ

ಭ್ರಷ್ಟರ ಕೋಟೆ ಬೇಧಿಸಿದ್ದ ಎಸಿಬಿ ಅಧಿಕಾರಿಗಳು, ನಿನ್ನೆ ದೊಡ್ಡ ದೊಡ್ಡ ತಿಮಿಂಗಲಗಳನ್ನ ಬಲೆಗೆ ಕೆಡವಿದ್ದಾರೆ. ಕೋಟಿ ಕೋಟಿ ಅಕ್ರಮ ಸಂಪತ್ತನ್ನ ವಶಪಡಿಸಿಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಗಳು ಕಟ್ಟಿರುವ ಸಂಪತ್ತಿನ ಕೋಟೆ ನೋಡಿ ಎಸಿಬಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

ಭ್ರಷ್ಟ ನಂ-1: ಪಾಂಡುರಂಗ ಗರಗ್, ಸಹಕಾರ ಸಂಘಗಳ ಜಂಟಿ ನಿಬಂಧಕ
ಸಹಕಾರ ಸಂಘಗಳ ಜಂಟಿ ನಿಬಂಧಕನಾಗಿರೋ ಪಾಂಡುರಂಗನ ಅಕ್ರಮದ ಮಹಿಮೆಯೇ ಅಪಾರ.
ಈತನ ಮನೆಯಲ್ಲಿ ಬರೋಬ್ಬರಿ 1 ಕೆಜಿ 166ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ. ಅಲ್ಲದೇ, 31 ಕೆಜಿ ಬೆಳ್ಳಿ ಫತ್ತೆಯಾಗಿದೆ. ಪಾಂಡುರಂಗನ ಹೆಸರಿನಲ್ಲಿ 2 ಬಂಗಲೆ, 1 ಫ್ಲ್ಯಾಟ್, 10 ಎಕರೆ ಕೃಷಿ ಭೂಮಿ, 3 ಕಾರು, 3 ದ್ವಿಚಕ್ರ ವಾಹನ, 1ಟ್ರ್ಯಾಕ್ಟರ್ ಇದೆ. ಅಷ್ಟೇ ಅಲ್ಲ 4 ಲಕ್ಷದ 40 ಸಾವಿರ ರೂಪಾಯಿ ನಗದು, ₹20ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು ಪತ್ತೆಯಾಗಿದೆ.

ಭ್ರಷ್ಟ ನಂ.2: ದೇವರಾಜ್, ಸಣ್ಣ ನೀರಾವರಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್
ಸಣ್ಣ ನೀರಾವರಿ ಕಚೇರಿಯಲ್ಲಿ ಇಇ ಆಗಿರೋ ದೇವರಾಜ್ ಮನೆಯಲ್ಲಿ 500 ಗ್ರಾಂ ಚಿನ್ನ, 4 ಕೆ.ಜಿ. ಬೆಳ್ಳಿ ವಸ್ತುಗಳು, ₹59.84 ಲಕ್ಷ ನಗದು ಪತ್ತೆಯಾಗಿದೆ. ಬ್ಯಾಂಕ್‌ನಲ್ಲಿ ₹30 ಲಕ್ಷ ರೂಪಾಯಿ ಠೇವಣಿ ಇಡಲಾಗಿದೆ. ಇನ್ನು ಈತನ ಹೆಸರಿನಲ್ಲಿ 26 ಎಕರೆ ಕೃಷಿ ಭೂಮಿ, 2 ವಾಸದ ಮನೆಗಳು, 2 ನಿವೇಶನ, 2 ಕಾರು, 3 ಲಕ್ಷದ ಗೃಹೋಪಯೋಗಿ ವಸ್ತುಗಳನ್ನ ಹೊಂದಿದ್ದಾನೆ. ಇದಿಷ್ಟೇ ಅಲ್ಲ ಮಾವನ ಬ್ಯಾಂಕ್ ಲಾಕರ್‌ನಲ್ಲೂ ಅಪಾರ ಚಿನ್ನ ಪತ್ತೆಯಾಗಿದೆ.

ಭ್ರಷ್ಟ ನಂ.3: ಚನ್ನಬಸಪ್ಪ, PWD ಜೆಇ
ಕಲಬುರಗಿಯ ಈ ಭ್ರಷ್ಟ ಚನ್ನಬಸಪ್ಪ ಸದ್ಯ ರಾಮನಗರದ ಮಾಗಡಿಯಲ್ಲಿ ಪಿಡಬ್ಲ್ಯೂಡಿ ಜ್ಯೂನಿಯರ್ ಇಂಜಿನಿಯರ್ ಆಗಿದ್ದಾನೆ. ಇವನೆಂಥಾ ಖತರ್ನಾಕ್ ಅಂದ್ರೆ, ಬೆಂಗಳೂರಿನಿಂದ ಬೀದರ್‌ವರೆಗೂ, ಅಕ್ರಮ ಸಂಪತ್ತಿನ ಸಾಮ್ರಾಜ್ಯವನ್ನೇ ಕಟ್ಟಿದ್ದಾನೆ. ಅದ್ಹೇಗೆ ಅಂದ್ರೆ, ಸರ್ಕಾರಿ ಕೆಲ್ಸದ ಜೊತೆಗೆ, ರಿಯಲ್‌ ಎಸ್ಟೇಟ್ ವ್ಯವಹಾರ ನಡೆಸ್ತಿದ್ದ. ಕಲಬುರಗಿಯಲ್ಲಿ ನಗರದಲ್ಲಿ 8 ಫ್ಲ್ಯಾಟ್‌ನ ಒಂದು ಅಪಾರ್ಟ್‌ಮೆಂಟ್, 1 ಸೂಪರ್‌ ಮಾರ್ಕೆಟ್‌ ಇದೆ. 1 ಫಾರ್ಮ್‌ಹೌಸ್‌, ₹1.2 ಲಕ್ಷ ನಗದು, 125 ಗ್ರಾಂ ಚಿನ್ನಾಭರಣ, 650 ಗ್ರಾಂ ಬೆಳ್ಳಿ ವಸ್ತು, 26 ಎಕರೆ ಜಮೀನು, 2 ದ್ವಿಚಕ್ರ ವಾಹನ, 22 ಲಕ್ಷ ಮೌಲ್ಯದ ಐಷಾರಾಮಿ ಕಾರು ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ.

ಭ್ರಷ್ಟ ನಂ.4: ಜಯರಾಜ್, ಮಂಗಳೂರು ಪಾಲಿಕೆ ಟಿಪಿಒ
ಮಂಗಳೂರು ಮಹಾನಗರ ಪಾಲಿಕೆಯ ಟಿಪಿಒ ಜಯರಾಜ್‌ ಎಸಿಬಿ ಬಲೆಗೆ ಬಿದ್ದಿದ್ದಾನೆ. ಮಂಗಳೂರಿನ ಕಾಪಿಕಾಡ್ ಅಪಾರ್ಟ್‌ಮೆಂಟ್‌ನಲ್ಲಿ 11 ಲಕ್ಷ ನಗದು ಸಿಕ್ಕಿದೆ. ಜಯರಾಜ್ ಅಕೌಂಟ್‌ನಲ್ಲಿ 77 ಲಕ್ಷ ರೂಪಾಯಿ, ಪತ್ನಿ ಹೆಸರಿನಲ್ಲಿ 20 ಲಕ್ಷ ಠೇವಣಿ ಇಟ್ಟಿದ್ದಾನೆ. ಅಲ್ಲದೇ 191 ಗ್ರಾಂ ಚಿನ್ನವೂ ದಾಳಿ ವೇಳೆ ಪತ್ತೆಯಾಗಿದೆ. ಈತ ಮಂಗಳೂರಿನಲ್ಲಿ ಎರಡು ಮನೆ, ಕೇರಳದಲ್ಲಿ ಒಂದು ಮನೆ ಹೊಂದಿದ್ದಾನೆ. ಉಳ್ಳಾಲದಲ್ಲಿ ಎರಡು ನಿವೇಶನ, ಮೈಸೂರಿನಲ್ಲಿ ಒಂದು ನಿವೇಶನ, ಕೇರಳದ ಮನೆಯಲ್ಲಿ ಅಧಿಕ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಅಲ್ಲದೇ, ಕೇರಳದ ಬ್ಯಾಂಕ್ ಲಾಕರ್ ಮತ್ತು ವಿವಿಧ ಬ್ಯಾಂಕ್‌ನಲ್ಲಿ ಒಂದೂವರೆ ಕೋಟಿ ಇಟ್ಟಿದ್ದಾನಂತೆ ಈ ಭ್ರಷ್ಟ..

ಭ್ರಷ್ಟ ನಂ.5: ಎಸಿಎಫ್‌ ಶ್ರೀನಿವಾಸ್, ಅರಣ್ಯ ಇಲಾಖೆ
ಧಾರವಾಡ ಎಸಿಎಫ್‌ ಶ್ರೀನಿವಾಸ್ ಕಟ್ಟಿದ್ದ ಸಂಪತ್ತಿನ ಕೋಟೆ ಬೇಧಿಸಿದ ಎಸಿಬಿಗೆ ಚಿತ್ರದುರ್ಗದಲ್ಲಿ ಎರಡು ವಾಸದ ಮನೆ, 1 ಫಾರ್ಮ್‌ಹೌಸ್‌, 2 ನಿವೇಶನ, 2 ಕಾರು, 1 ಟ್ರ್ಯಾಕ್ಟರ್, 1 ಬೈಕ್, 850 ಗ್ರಾಂ ಚಿನ್ನಾಭರಣ, 3.5 ಕೆಜಿ ಬೆಳ್ಳಿ, 4.87 ಲಕ್ಷ ಕ್ಯಾಶ್, ಉಳಿತಾಯ ಖಾತೆಯಲ್ಲಿ ₹5ಲಕ್ಷ, ಸುಮಾರು ₹63 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು ಅಕ್ರಮವಾಗಿ ಸಂಪಾದಿಸಿಟ್ಟಿರುವುದು ಪತ್ತೆಯಾಗಿದೆ.

ಭ್ರಷ್ಟ ನಂ.6: ಡಾ.ವಿಜಯ್‌ಕುಮಾರ್, ಕೋಲಾರ DHO
ಕೋಲಾರ ಡಿಎಚ್‌ಓ ಹುದ್ದೆಯಲ್ಲಿದ್ದುಕೊಂಡು ಜನಸೇವೆ ಮಾಡೋದು ಬಿಟ್ಟು, ಈ ವಿಜಯ್ ಕುಮಾರ್ ಸಾಹೇಬ್ರು, ಅಕ್ರಮ ಸಂಪತ್ತಿನ ಕಡೆ ಗಮನ ಕೊಟ್ಟಿದ್ದಾರೆ. ಇದೇ ಡಿಹೆಚ್‌ಒಗೆ ಮೂರು ವಾಸದ ಮನೆ, ಮೂರು ಫ್ಲ್ಯಾಟ್, ಮೂರು ನಿವೇಶನ, ಒಂದು ಖಾಸಗಿ ಆಸ್ಪತ್ರೆ, 2 ಕಾರು, 1 ದ್ವಿಚಕ್ರ ವಾಹನ ಹೊಂದಿದ್ದಾನೆ. ಅಷ್ಟೇ ಅಲ್ಲ,
₹61.21 ಲಕ್ಷ ಠೇವಣಿ ಇಟ್ಟಿರೋದು ಬಯಲಾಗಿದೆ. ಜೊತೆಗೆ 1ಎಕರೆ 13 ಗುಂಟೆ ಕೃಷಿ ಜಮೀನು ಮಾಡಿಟ್ಟಿರೋದು, ಎಸಿಬಿ ದಾಳಿಯಲ್ಲಿ ಗೊತ್ತಾಗಿದೆ.

ಭ್ರಷ್ಟ ನಂ.7 : ಡಾ. ಶ್ರೀನಿವಾಸ್, ವಿಮ್ಸ್ ಮಾಜಿ ನಿರ್ದೇಶಕ
ವಿಮ್ಸ್ ಆಸ್ಪತ್ರೆಯ ಮಾಜಿ ನಿರ್ದೇಶಕರಾಗಿರುವ ಶ್ರೀನಿವಾಸ್, ಸದ್ಯ ಕೊಪ್ಪಳ ಕಿಮ್ಸ್‌ನ ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥರು. ಕೊಪ್ಪಳದಲ್ಲಿರುವ ಕಚೇರಿ, ಬಳ್ಳಾರಿ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳಿಗೆ 800 ಗ್ರಾಂ ಚಿನ್ನಾಭರಣ, 9ಕೆ.ಜಿ. 300 ಗ್ರಾಂ ಬೆಳ್ಳಿ ವಸ್ತು, 1 ವಾಸದ ಮನೆ, 4 ನಿವೇಶನಗಳು, 2 ಕಾರು, 2 ಬೈಕ್‌, ₹1.94 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.

ಗಡದ್ದಾಗಿ ತಿಂದು, ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಅಕ್ರಮ ಕೋಟೆ ಕಟ್ಟಿದ್ದ ಕುಬೇರ ಕುಳಗಳ ಜನ್ಮ ಬಯಲಾಗಿದೆ. ಇದು ಜಸ್ಟ್ ಟ್ರೇಲರ್ ಅಷ್ಟೇ, ದಾಖಲೆ ಪತ್ರ ವಶಕ್ಕೆ ಪಡೆದಿರೋ ಅಧಿಕಾರಿಗಳು ಕೂತು ಲೆಕ್ಕ ಹಾಕಿದ್ರೆ, ಅದಿನೆಷ್ಟು ಸಂಪತ್ತು ಸಿಗುತ್ತೋ ಭಗವಂತನೇ ಬಲ್ಲ.

ACB Raid ಟಿಪಿಒ ಜಯರಾಜ್ ಮನೆಯಲ್ಲಿ ಭಾರೀ ಆಸ್ತಿ ಪತ್ತೆ, ಕೇರಳದಲ್ಲಿರುವ ಪತ್ನಿಯ ಕ್ವಾರ್ಟರ್ಸ್‌ ಮೇಲೂ ದಾಳಿ

ಅಕ್ರಮ ಆಸ್ತಿ ಗಳಿಕೆ ಆರೋಪ, ರಾಜ್ಯದ 7 ಅಧಿಕಾರಿಗಳ ಮನೆಗಳ ಮೇಲೆ ACB ರೇಡ್