ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ (Zameer Ahmed Khan) ಅವರಿಗೆ ಸೇರಿದ ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ACB)ದ ಅಧಿಕಾರಿಗಳು ಸತತ ಐದು ಗಂಟೆಗಳ ಕಾಲ ದಾಳಿ (Raid) ನಡೆಸಿದ್ದಾರೆ. ಅದರಂತೆ ಬಹುತೇಕ ದಾಳಿಗಳನ್ನು ಮುಕ್ತಾಯಗೊಳಿಸಿದ ಅಧಿಕಾರಿಗಳು ಸಿಲ್ವರ್ ಓಕ್ ಅಪಾರ್ಟ್ಮೆಂಟ್ನಲ್ಲಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ದಾಳಿ ವೇಳೆ ಬ್ಯಾಂಕ್ ಖಾತೆಗಳು, ಚೆಕ್ ಬುಕ್ಗಳು, ದುಬಾರಿ ಬೆಲೆಯ ವಿದೇಶಿ ಮದ್ಯದ ಬಾಟಲ್ಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.
ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿಯಲ್ಲಿ ಎಸಿಬಿ ಶೋಧಕಾರ್ಯ ನಡೆಸಿದ್ದು, ನ್ಯಾಷನಲ್ ಟ್ರಾವೆಲ್ಸ್ ಮೂಲಕ ಆಗುತ್ತಿರುವ ಆರ್ಥಿಕ ವ್ಯವಹಾರಗಳ ಮಾಹಿತಿ ಕಲೆ ಹಾಕಿದ್ದಾರೆ. ಹಲವು ಖಾಸಗಿ ಕಂಪೆನಿಗಳ ಜೊತೆ ಟೈಯ್ಯಪ್ ಮಾಡಿಕೊಂಡಿರುವ ಬಗ್ಗೆ ತಲಾಷ್ ವೇಳೆ ಬಹಿರಂಗವಾಗಿದ್ದು, ಪ್ರತಿನಿತ್ಯ ಟ್ರಾವೆಲ್ಸ್ ಮೂಲಕ ಆಗುತ್ತಿರುವ ಆದಾಯ ಬಗ್ಗೆ ಸಿಬ್ಬಂದಿಗಳು ಮಾಹಿತಿ ಕಲೆ ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಟ್ರಾವೆಲ್ಸ್ ಇನ್ಚಾರ್ಜರ್ ಅನ್ನು ಪ್ರತ್ಯೇಕವಾಗಿ ಕೂರಿಸಿ ವಿಚಾರಣೆ ನಡೆಸಲಾಗಿದೆ. ಇದಲ್ಲದೆ ರಾಜ್ಯ ಮತ್ತು ಇತರೆ ರಾಜ್ಯಗಳಲ್ಲಿ ಎಲ್ಲೆಲ್ಲಾ ಟ್ರಾವೆಲ್ಸ್ ಕಚೇರಿ ಹೊಂದಲಾಗಿದೆ ಮತ್ತು ಅಲ್ಲಿಂದ ಬರುವ ಆದಾಯ ಬಗ್ಗೆಯೂ ದಾಖಲೆ ಪರಿಶೀಲನೆ ನಡೆಸಿದ್ದಾರೆ. ದಾಳಿ ನಡುವೆಯೂ ಎಂದಿನಂತೆ ಗ್ರಾಹಕರಿಗೆ ಟಿಕೆಟ್ ಬುಕ್ ಮಾಡಲು ಅವಾಕಶ ಮಾಡಿಕೊಡಲಾಯಿತು.
ಇದನ್ನೂ ಓದಿ: ಜಮೀರ್ ಅಹ್ಮದ್ ಖಾನ್ ನಿವಾಸ, ಕಚೇರಿಗಳ ಮೇಲೆ ಎಸಿಬಿ ದಾಳಿ; ಸಿಎಂ ಬೊಮಾಯಿ ಹೇಳಿದ್ದೇನು?
ಬಿರುಸಿನ ದಾಖಲೆ ಪರಿಶೀಲನೆ
ನ್ಯಾಷನಲ್ ಟ್ರಾವೆಲ್ಸ್ ಕಚೇರಿಯಲ್ಲಿ ಬಿರುಸಿನ ದಾಖಲೆ ಪರಿಶೀಲನೆ ನಡೆಸಲಾಗಿದೆ. ನ್ಯಾಷನಲ್ ಟ್ರಾವೆಲ್ಸ್ ಅಧೀನಕ್ಕೆ ಬರುವ ಬಸ್ಗಳ ದಾಖಲೆಗಳ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳಿಗೆ ಎಲ್ಲಾ ಬಸ್ಗಳು ಶಾಸಕ ಜಮೀರ್ ಅಹಮ್ಮದ್ ಖಾನ್ ಹೆಸರಲ್ಲಿ ಇಲ್ಲ ಅನ್ನೋದು ತಿಳಿದುಬಂದಿದೆ. ಹಲವು ಬಸ್ಗಳು ಕುಟುಂಬಸ್ಥರ ಹೆಸರಿನಲ್ಲಿರುವುದಾಗಿ ಪರಿಶೀಲನೆ ವೇಳೆ ಬಹಿರಂಗಗೊಂಡಿದೆ.
ಬ್ಯಾಂಕ್ ಕಡತಗಳ ಪರಿಶೀಲನೆ
ದಾಳಿ ವೇಳೆ ನ್ಯಾಷನಲ್ ಟ್ರಾವೆಲ್ಸ್ಗೆ ಸಂಬಂಧಿಸಿದ 10ಕ್ಕೂ ಹೆಚ್ಚು ವಿವಿಧ ಬ್ಯಾಂಕ್ ಪಾಸ್ ಬುಕ್ಗಳು ಚೆಕ್ ಬುಕ್ಗಳು ಲಭ್ಯವಾಗಿದ್ದು, ಯಾವ ಖಾತೆಗಳಲ್ಲಿ ಎಷ್ಟೆಷ್ಟು ಹಣ ಇದೆ ಎಂಬುದರ ಪರಿಶೀಲನೆ ನಡೆಸಲಾಗುತ್ತಿದೆ. ಜಮೀರ್ ಅಹ್ಮದ್ ಖಾನ್ ಹಸರಿನಲ್ಲಿ ಎಷ್ಟು ಅಕೌಂಟ್ಗಳಿವೆ, ಕುಟುಂಬಸ್ಥರ ಹೆಸರಿನಲ್ಲಿ ಎಷ್ಟು ಅಕೌಂಟ್ಗಳಿವೆ ಮತ್ತು ಯಾವ್ಯಾವ ಖಾತೆಗಳಿಗೆ ಎಷ್ಟು ಹಣ ವರ್ಗಾವಣೆಯಾಗಿದೆ ಎಂದು ಸಿಬ್ಬಂದಿಗಳು ಮಾಹಿತಿ ಕಲೆಹಾಕಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಶಾಸಕ ಜಮೀರ್ ಅಹ್ಮದ್ ನಿವಾಸದ ಮುಂದೆ ಬೆಂಬಲಿಗರಿಂದ ಹೈಡ್ರಾಮ! ಎಸಿಬಿ ದಾಳಿಗೆ ನಿಖರ ಕಾರಣ ಇಲ್ಲಿದೆ
ದುಬಾರಿ ಬೆಲೆಯ ಮದ್ಯದ ಬಾಟಲಿಗಳು ಪತ್ತೆ
ಶಾಸಕ ಜಮೀರ್ ಅಹ್ಮದ್ ಖಾನ್ಗೆ ಸೇರಿದ ಫ್ಲ್ಯಾಟ್ನಲ್ಲಿ ದುಬಾರಿ ಬೆಲೆಯ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಯುಬಿ ಸಿಟಿ ಬಳಿ ಇರುವ ಸಿಲ್ವರ್ ಓಕ್ ಅಪಾರ್ಟ್ಮೆಂಟ್ನಲ್ಲಿ 14 ಮಂದಿ ಅಧಿಕಾರಿಗಳು ಶೋಧ ನಡೆಸುತ್ತಿದ್ದ ವೇಳೆ ಈ ಬಾಟಲ್ಗಳು ಪತ್ತೆಯಾಗಿದೆ. ವಿದೇಶಿ ಮದ್ಯ 9 ಲೀಟರ್ವರೆಗೆ ಇಟ್ಟುಕೊಳ್ಳಲು ಅನುಮತಿಯಿದ್ದು, ಜಮೀರ್ ಫ್ಲಾಟ್ನಲ್ಲಿ 9 ಲೀಟರ್ಗಿಂತ ಕಡಿಮೆ ಮದ್ಯ ಪತ್ತೆ,ಯಾಗಿದೆ. ಹೀಗಾಗಿ ಇವೆಲ್ಲವೂ ನಿಯಮದ ಪ್ರಕಾರವೇ ಇದೆ.
ಜಮೀರ್ ಮೀಟಿಂಗ್ ಸ್ಪಾಟ್ ‘ಸಿಲ್ವರ್ ಓಕ್ ಅಪಾರ್ಟ್ಮೆಂಟ್’
ಜಮೀರ್ ಅಹಮದ್ ಖಾನ್ ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಎಸಿಬಿ ಅಧಿಕಾರಿಗಳು, ಇಂದು ಬೆಳ್ಳಗ್ಗೆಯೇ ದಾಳಿ ಮಾಡಿದ್ದಾರೆ. ವಾರಕ್ಕೆ ನಾಲೈದು ಭಾರಿ ಜಮೀರ್ ಅಹಮದ್ ಇದೇ ಅಪಾರ್ಟ್ಮೆಂಟ್ಗೆ ಬರುತ್ತಿದ್ದರು ಮತ್ತು ಅವರ ಮೀಟಿಂಗ್ ಸ್ಪಾಟ್ ಕೂಡ ಇದೇ ಅಪಾರ್ಟ್ಮೆಂಟ್ ಆಗಿತ್ತು. ಏನೇ ವ್ಯವಹಾರ ಇದ್ದರೂ ಇಲ್ಲೇ ಮೀಟಿಂಗ್ ನಡೆಸುತ್ತಿದ್ದರು. ಇದನ್ನು ಕೆಲವು ದಿನಗಳಿಂದ ಎಸಿಬಿ ತಂಡ ಗಮನಿಸಿಕೊಂಡಿತ್ತು.
ಜಮೀರ್ನನ್ನು ಟಾರ್ಗೆಟ್ ಮಾಡಲಾಗಿದೆ
ಜಮೀರ್ ಅಹಮದ್ ಖಾನ್ ಅವರ ನಿವಾಸದ ಮೇಲೆ ಎಸಿಬಿ ದಾಳಿ ನಡೆಯುತ್ತಿದ್ದಂತೆ ಅವರ ನಿವಾದ ಬಳಿ ಬಂದ ಆಪ್ತ ಅಲ್ತಾಫ್, ಜಮೀರ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದಿದ್ದಾರೆ. ಯಾಕೆ ಪದೇ ಪದೇ ರೈಡ್ ಮಾಡಲಾಗುತ್ತದೆ ಎಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನೇ ಕೇಳಬೇಕು. ಆತಂಕದ ಪ್ರಶ್ನೆ ಇಲ್ಲ, ಎಲ್ಲಾ ದಾಖಲೆಗಳನ್ನು ಇಟ್ಟುಕೊಳ್ಳಲಾಗಿದೆ. ಅವರ ತಾತನ ಕಾಲದಿಂದಲೂ ವ್ಯವಹಾರ ನಡೆಸಿಕೊಂಡು ಬರಲಾಗುತ್ತಿದೆ. ಎಸಿಬಿ ರೈಡ್ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಕಾನೂನು ಪ್ರಕಾರ ಮಾಡಿದರೆ ಸಹಕರಿಸುತ್ತೇವೆ. ಆದರೆ ಇದೆಲ್ಲಾ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದರು.
ಇದನ್ನೂ ಓದಿ: ಐಎಂಎ ಪ್ರಕರಣ: ಬೆಳ್ಳಂಬೆಳಗ್ಗೆ ಶಾಸಕ ಜಮೀರ್ ಅಹಮದ್ ಖಾನ್ ಮನೆ ದಾಳಿ ನಡೆಸಿದ ಎಸಿಬಿ
Published On - 2:09 pm, Tue, 5 July 22