ಪಿಎಸ್ಐ ಹಗರಣಕ್ಕೆ ಮೇಜರ್ ಟ್ವಿಸ್ಟ್ ನೀಡಿದ ಆಡಿಯೋ ರೆಕಾರ್ಡ್, ”ಏನು ಬೇಕಾದ್ರೂ ಮಾಡು, ಪೈಸಾ ಚಾಯಿಯೇ ಬಸ್”

ಪಿಎಸ್​ಐ 545 ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ ತಿರುವು ಪಡೆದುಕೊಂಡಿದೆ. ಶಾಂತಕುಮಾರ್ ಅವರ ಮೊಬೈಲ್ ರಿಟ್ರೀವಲ್ ಮಾಡಿದಾಗ ಹಗರಣಕ್ಕೆ ಟ್ವಿಸ್ಟ್ ನೀಡುವ ಆಡಿಯೋ ರೆಕಾರ್ಡ್ ಪತ್ತೆಯಾಗಿದೆ. ಆಡಿಯೋದಲ್ಲಿ ಇರುವುದೇನು? ಇಲ್ಲಿದೆ ಮಾಹಿತಿ.

ಪಿಎಸ್ಐ ಹಗರಣಕ್ಕೆ ಮೇಜರ್ ಟ್ವಿಸ್ಟ್ ನೀಡಿದ ಆಡಿಯೋ ರೆಕಾರ್ಡ್, ''ಏನು ಬೇಕಾದ್ರೂ ಮಾಡು, ಪೈಸಾ ಚಾಯಿಯೇ ಬಸ್''
ಸಾಂಕೇತಿಕ ಚಿತ್ರ
TV9kannada Web Team

| Edited By: Rakesh Nayak

Jul 05, 2022 | 3:02 PM

ಬೆಂಗಳೂರು:  ಐಪಿಎಸ್ ಅಧಿಕಾರಿ ಅಮೃತ್ ಪೌಲ್ (Amrit Paul)​​ ಮತ್ತು ಡಿವೈಎಸ್ಪಿ ಶಾಂತಕುಮಾರ್ (Shanthakumar) ಬಂಧನದ ನಂತರ ಪಿಎಸ್​ಐ 545 ಹುದ್ದೆಗಳ ನೇಮಕಾತಿ ಅಕ್ರಮ (545 psi recruitment Scam) ಪ್ರಕರಣ ತಿರುವು ಪಡೆದುಕೊಂಡಿದೆ. ಅಕ್ರಮದಲ್ಲಿ ಭಾಗಿಯಾಗಿದ್ದ ಶಾಂತಕುಮಾರ್ ಅವರನ್ನು ಬಂಧಿಸಿದ್ದ ವೇಳೆ ಸಿಐಡಿ ಅಧಿಕಾರಿಗಳು ಮೊಬೈಲ್ ವಶಕ್ಕೆ ಪಡೆದು ಎಫ್​ಎಸ್​ಎಲ್​ಗೆ ಕಳುಹಿಸಿದ್ದಾರೆ. ಅದರಂತೆ ಮೊಬೈಲ್​ನಲ್ಲಿ ಆಡಿಯೋ ರೆಕಾರ್ಡ್ (Audio Record) ಲಭ್ಯವಾಗಿದ್ದು, ಈ ಆಡಿಯೋವೇ ಭ್ರಷ್ಟ ಅಧಿಕಾರಿಗಳ ಬಣ್ಣ ಬಯಲು ಮಾಡಿದೆ. ಅಷ್ಟಕ್ಕೂ ಆಡಿಯೋದಲ್ಲಿ ಏನಿದೆ? ಯಾರು ಮಾತನಾಡಿರುವುದು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಪಿಎಸ್ಐ ನೇಮಕಾತಿ ಹಗರಣದಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ಅವರನ್ನು ತನಿಖೆ ಬೆನ್ನಲ್ಲೆ ವರ್ಗಾವಣೆ ಮಾಡಲಾಗಿತ್ತು. ಸಿಐಡಿ ತನಿಖೆ ವೇಳೆ ಅಮೃತ್ ಪೌಲ್ ಪಾತ್ರ ಬಹಿರಂಗಗೊಂಡ ಬೆನ್ನಲ್ಲೆ ಅಧಿಕಾರಿಗಳು ಅಮೃತ್​ರನ್ನು ಬಂಧಿಸಿ 10 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದು, ಇಂದಿನಿಂದ ವಿಚಾರಣೆ ಆರಂಭವಾಗಿದೆ.

ಇದನ್ನೂ ಓದಿ: ಅಮೃತ್ ಪೌಲ್ ಕಲ್ಬುರ್ಗಿಯಲ್ಲಿ ಬೆಳಗಿನ ಜಾವ ಸಿಸಿಟಿವಿ ಆಫ್ ಮಾಡಿಸಿ, ಆನ್ಸರ್ ಶೀಟ್ ತಿದ್ದಿಸಿದ್ದಾರೆ – ಗೃಹ ಸಚಿವ ಆರಗ ಜ್ಞಾನೇಂದ್ರ

ವಿಚಾರಣೆ ವೇಳೆ ಮುಖಾಮುಖಿಯಾಗಲಿರುವ ಭ್ರಷ್ಟ ಅಧಿಕಾರಿಗಳು

ಸಿಐಡಿ ಕಚೇರಿಯಲ್ಲಿ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಹಾಗೂ ಡಿವೈಎಸ್​ಪಿ ಶಾಂತಕುಮಾರ್ ಮುಖಾಮುಖಿಯಾಗಿ ವಿಚಾರಣೆ ಎದುರಿಸಲಿದ್ದಾರೆ. ಅಮೃತ್ ಪೌಲ್ ವಿರುದ್ಧ ಅಕ್ರಮದ ಸಾಕ್ಷಿ ಲಭ್ಯವಾದ ಹಿನ್ನೆಲೆ ಇದನ್ನೇ ಆಧರಿಸಿ ಸಿಐಡಿ ತನಿಖಾ ತಂಡ ವಿಚಾರಣೆ ನಡೆಸಲಿದೆ.

ಪ್ರಕರಣದ ಮೇಜರ್ ಟ್ವಿಸ್ಟ್ ಆಡಿಯೋ

ಪಿಎಸ್​ಐ ಹಗರಣಕ್ಕೆ ಮೇಜರ್ ಟ್ವಿಸ್ಟ್ ಕೊಟ್ಟ ಸಾಕ್ಷಿ ಎಂದರೆ ಅದು ಫೋನ್ ಕಾಲ್​ನಲ್ಲಿ ಮಾತನಾಡಿರುವ ಆಡಿಯೋ ರೆಕಾರ್ಡ್. ಬಂಧನದ ವೇಳೆ ಸಿಐಡಿ ಅಧಿಕಾರಿಗಳು ಶಾಂತಕುಮಾರ್ ಅವರಿಂದ ಮೊಬೈಲ್ ವಶಕ್ಕೆ ಪಡೆದಿದ್ದರು. ಈ ಮೊಬೈಲ್ ಮೂಲಕ ನಡೆದ ವ್ಯವಹಾರ ಆಡಿಯೋ ಇದೀಗ ಅಧಿಕಾರಿಗಳು ಕೈಗೆ ಸೇರಿದೆ. ”ಸ್ಟ್ರಾಂಗ್ ರೂಂನ ಕೀ ಅಲ್ಲೇ ಇದೇ, ಅದನ್ನು ತೆಗೆದುಕೊಂಡು ಏನು ಬೇಕಾದರೂ ಮಾಡು. ಹಣ ಬೇಕು ಅಷ್ಟೇ” ಎಂದು ಅಧಿಕಾರಿಗಳು ಮಾತನಾಡಿದ್ದಾರೆ. ಅಸಲಿಗೆ ಈ ಮಾತನ್ನು ಶಾಂತಕುಮಾರ್​ಗೆ ಅಮೃತ್ ಪೌಲ್ ಹೇಳಿದ್ದಾರೆ ಎನ್ನಲಾಗುತ್ತಿದೆ. ಕೋಡ್ ವರ್ಡ್ ಬಳಸಿ ನಡೆಸಲಾದ ಸಂಭಾಷಣೆ ಇದಾಗಿದೆ.

ಶಾಂತಕುಮಾರ್ ಅವರ ಮೊಬೈಲ್ ರಿಟ್ರೀವ್ ಮಾಡಿದ ವೇಳೆ ಹಗರಣಕ್ಕೆ ಸಂಬಂಧಿಸಿದಂತೆ ಸಂಭಾಷಣೆಯ ಜೊತೆಗೆ ಹಲವು ದಾಖಲೆಗಳು ಕೂಡ ಪತ್ತೆಯಾಗಿವೆ. ಅಭ್ಯರ್ಥಿಗಳಿಂದ ದುಡ್ಡು ಪಡೆದ ಮಾಹಿತಿ, ಯಾರ್ಯಾರಿಂದ ಎಷ್ಟೇಷ್ಟು ಹಣ ಪಡೆದಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಪಿಎಸ್ಐ ನೇಮಕ ಅಕ್ರಮ: ಕೊನೆಗೂ ಎಡಿಜಿಪಿ ಅಮೃತ್ ಪಾಲ್ ಅರೆಸ್ಟ್, ಬಂಧಿತ ಐಪಿಎಸ್ ಅಧಿಕಾರಿ ಸಿಐಡಿ ಕಸ್ಟಡಿಗೆ

ಅಮೃತ್ ಪೌಲ್ ಮೊಬೈಲ್ ಸಿಐಡಿ ವಶಕ್ಕೆ

ಸಿಐಡಿ ವಶದಲ್ಲಿರುವ ಅಮೃತ್ ಪೌಲ್ ಅವರ ಮೊಬೈಲ್ ಅನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಿಕೊಳ್ಳುವ ನಿಟ್ಟಿನಲ್ಲಿ ಮೊಬೈಲ್ ರಿಟ್ರೀವ್ ಮಾಡಲಿದ್ದಾರೆ. ಮೊಬೈಲ್ ರಿಟ್ರೀವ್ ಬಳಿಕ ಹಲವು ಸಾಕ್ಷಿಗಳು ಲಭ್ಯವಾಗಲಿದ್ದು, ಅಮೃತ್ ಅವರು ಅಕ್ರಮಕ್ಕೆ ಸಂಬಂಧಿಸಿದಂತೆ ಯಾರ ಜೊತೆ ಸಂಪರ್ಕ ಹೊಂದಿದ್ದರು, ಅಕ್ರಮದಲ್ಲಿ ಅವರು ಭಾಗಿಯಾಗಿದ್ದಾರಾ? ಇಲ್ಲವಾ? ಎಂಬಿತ್ಯಾದಿ ಮಾಹಿತಿಗಳು ಲಭ್ಯವಾಗಲಿವೆ.

ಬಹಿರಂಗವಾಗಬೇಕಿದೆ ಸ್ಪೋಟಕ ಸತ್ಯ

ಪಿಎಸ್​ಐ ಹಗರಣದಲ್ಲಿ ಕಾಣದ ಕೈಗಳು ಇರುವ ಸಾಧ್ಯತೆ ಇದೆ. ಇಂದಿನಿಂದ ಪ್ರಕರಣ ಅಸಲಿ ವಿಚಾರಣೆ ಆರಂಭಗೊಂಡಿದ್ದು, ನೇಮಕಾತಿ ಹಗರಣದ ಮಾಸ್ಟರ್ ಯಾರು? ಎಡಿಜಿಪಿ ಸಂಪರ್ಕದಲ್ಲಿರುವರ್ಯಾರು? ಎಡಿಜಿಪಿ ಅಮೃತ್ ಪೌಲ್​ಗೆ ಈ ಕೆಲಸ ಮಾಡಲು ಹೇಳಿದವರ್ಯಾರು? ಹಗರಣದಲ್ಲಿ ರಾಜಕಾರಣಿಗಳಿದ್ದಾರಾ? ದುಡ್ಡು ಯಾವ ರೀತಿ ಪಡೆಯಲಾಗಿದೆ? ಪಡೆದ ದುಡ್ಡನ್ನು ಏನು ಮಾಡಲಾಗಿದೆ‌? ಎಷ್ಟು ವರ್ಷಗಳಿಂದ ನಡೆಯುತ್ತಿದೆ ಈ ಅಕ್ರಮ? ಎಷ್ಟು ಮಂದಿ ಅಭ್ಯರ್ಥಿಗಳನ್ನು ಪಾಸ್ ಮಾಡಲಾಗಿದೆ? ದಂಧೆಯಲ್ಲಿರುವ ಒಟ್ಟು ಮಧ್ಯವರ್ತಿಗಳೆಷ್ಟು, ಅವರ್ಯಾರು? ಎಂಬಿತ್ಯಾದಿ ಮಾಹಿತಿಗಳು ಬಹಿರಂಗಗೊಳ್ಳಬೇಕಿದೆ.

ಇದನ್ನೂ ಓದಿ: 545 ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣ: ಬಂಧನಕ್ಕೊಳಗಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್​ಗೆ ಇಂದಿನಿಂದ ಸಿಐಡಿ ಗ್ರಿಲ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada