Crime News: 450 ಎಕರೆ ಸರ್ಕಾರಿ ಗೋಮಾಳ‌ ಭೂಮಿ ಕಬಳಿಸಲು ಯತ್ನ! ಅಧಿಕಾರಿ ಸೇರಿ ಐವರು ಅರೆಸ್ಟ್

ಹಾಗಲವಾಡಿ, ಕಸಬಾ, ನಿಟ್ಟೂರು, ಸಿಎಸ್ ಪುರ ಹೋಬಳಿಯಲ್ಲಿನ ಸುಮಾರು 450 ಎಕರೆ ಗೋಮಾಳ ಭೂಮಿಯನ್ನು 137 ಪ್ರಭಾವಿಗಳಿಗೆ ಭೂಮಿ ಪರಭಾರೆ ಮಾಡಲು ತಯಾರಿ ನಡೆಸಲಾಗಿತ್ತು. ಉಳುಮೆದಾರರ ದೂರಿನ ಅನ್ವಯ ಐವರು ಆರೋಪಿಗಳ ಬಂಧನವಾಗಿದೆ.

Crime News: 450 ಎಕರೆ ಸರ್ಕಾರಿ ಗೋಮಾಳ‌ ಭೂಮಿ ಕಬಳಿಸಲು ಯತ್ನ! ಅಧಿಕಾರಿ ಸೇರಿ ಐವರು ಅರೆಸ್ಟ್
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Rakesh Nayak

Jul 05, 2022 | 4:09 PM

ತುಮಕೂರು: ನೂರಾರು ಎಕರೆ ಸರ್ಕಾರಿ ಗೋಮಾಳ ಭೂಮಿಯನ್ನು ಕಬಳಿಸಲು ಯತ್ನಿಸಿದ ಪ್ರಕರಣ ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಬೆಳಕಿಗೆ ಬಂದಿದ್ದು, ಪ್ರಭಾವಿಗಳ ಅಕ್ರಮಕ್ಕೆ ಕೈಜೋಡಿಸಿದ ಅಧಿಕಾರಿ ಸೇರಿದಂತೆ ಒಟ್ಟು ಐವರು ಬಂಧನಕ್ಕೊಳಗಾಗಿದ್ದಾರೆ. ಗುಬ್ಬಿ ತಾಲೂಕಿನ ಹಾಗಲವಾಡಿ, ಕಸಬಾ, ನಿಟ್ಟೂರು, ಸಿ.ಎಸ್.ಪುರ ಹೋಬಳಿಯಲ್ಲಿನ 450 ಎಕರೆ ಸರ್ಕಾರಿ ಭೂಮಿ ಗೋಮಾಳವನ್ನು ಕಬಳಿಸಲು ಯತ್ನಿಸಿದ ಹಾಗಲವಾಡಿ ಉಪತಹಶೀಲ್ದಾರ್ ಚೇತನ್, ಎಫ್‌ಡಿಎ ಸತೀಶ್, ರಾಜೇಶ್, ಮಧ್ಯವರ್ತಿಗಳಾದ ಕರಿಯಣ್ಣ, ರಾಜು‌ ಅವರನ್ನು ಗುಬ್ಬಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹಾಗಲವಾಡಿ, ಕಸಬಾ, ನಿಟ್ಟೂರು, ಸಿಎಸ್ ಪುರ ಹೋಬಳಿಯಲ್ಲಿನ ಸುಮಾರು 450 ಎಕರೆ ಗೋಮಾಳ ಭೂಮಿಯನ್ನು 137 ಪ್ರಭಾವಿಗಳಿಗೆ ಭೂಮಿ ಪರಭಾರೆ ಮಾಡಲು ತಯಾರಿ ನಡೆಸಲಾಗಿತ್ತು. ಅದರಂತೆ ಎಂಆರ್​ನಲ್ಲಿ 1999-2000 ಸಾಲಿನ ಕೈಬರಹವನ್ನೇ ಅಧಿಕಾರಿಗಳು ತಿದ್ದಿದ್ದಾರೆ.

ಇದನ್ನೂ ಓದಿ: ಚೆನ್ನೈ: ಒಟಿಪಿ ವಿಷಯಕ್ಕೆ ಜಗಳ, ಟೆಕಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿದ ಓಲಾ ಕ್ಯಾಬ್ ಡ್ರೈವರ್

ಉಳುಮೆದಾರರು ನೀಡಿದ ದೂರಿನ ಅನ್ವಯ ಪ್ರಕರಣ ಬಯಲಿಗೆ ಬಂದಿದೆ. ಅಲ್ಲದೆ ಸರ್ಕಾರಿ ಗೋಮಾಳ ಜಾಗಗಳ ದಾಖಲೆಗಳನ್ನ ತಿದ್ದಿ ಖಾಸಗಿ ವ್ಯಕ್ತಿಗಳ ಹೆಸರುಗಳನ್ನ ಬರೆದಿರುವುದು ರೆಕಾರ್ಡ್ ರೂಂ ಅನ್ನು ತಹಶೀಲ್ದಾರ್ ಅವರು ಪರಿಶೀಲನೆ ನಡೆಸಿದಾಗ ಸ್ಪಷ್ಟವಾಗಿದೆ. ಸದ್ಯ ಗುಬ್ಬಿ ಪೊಲೀಸರ ವಶದಲ್ಲಿ ಎಲ್ಲಾ ಆರೋಪಿಗಳಿದ್ದಾರೆ. ಪ್ರಕರಣದಲ್ಲಿ ಹಲವು ಪ್ರಭಾವಿ ಕಂದಾಯ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ತೀವ್ರ ವಿಚಾರಣೆಯನ್ನು ನಡೆಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸೂಚಿಸಿದ್ದಾರೆ.

ದಾಖಲೆ ಇಲ್ಲದ 102 ಕೆಜಿ ಬೆಳ್ಳಿ ಚೈನ್​ಗಳು ವಶಕ್ಕೆ

ದಾವಣಗೆರೆ: ಇಬ್ಬರು ಆರೋಪಿಗಳ ಸಹಿತ ದಾಖಲೆಗಳು ಇಲ್ಲದ 102 ಕೆಜಿ ಬೆಳ್ಳಿ ಚೈನ್​ಗಳನ್ನು ನಗರದ ಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೇಲಂನಿಂದ ದಾವಣಗೆರೆಗೆ ಬೆಳ್ಳಿ ಚೈನ್​ಗಳನ್ನು ಸಾಗಿಸುತ್ತಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ತಮಿಳುನಾಡು ಮೂಲದ ಸೆಲ್ವಂ, ಬಾಲಾಜಿ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ತಪಾಸಣೆ ವೇಳೆ ಬೆಳ್ಳಿ ಕಾಲು ಚೈನುಗಳು ಪತ್ತೆಯಾಗಿವೆ. ಅಲ್ಲದೆ ವಶಕ್ಕೆ ಪಡೆದ ಬೆಳ್ಳಿ ಆಭರಣಗಳಿಗೆ ಸಂಬಂಧಿಸಿದ ದಾಖಲೆಗಳು ವ್ಯಕ್ತಿಗಳ ಬಳಿ ಇಲ್ಲದಿರುವ ಹಿನ್ನೆಲೆ ಕಳ್ಳತನದ ಮಾಲು ಇರಬಹುದೆಂದು ಶಂಕೆ ವ್ಯಕ್ತವಾಗಿದೆ. ಅದರಂತೆ ಪೊಲೀಸರು ದಾಖಲೆ ಇಲ್ಲದ ಬೆಳ್ಳಿ ಕಾಲು ಚೈನ್ ಎಲ್ಲಿಂದ ಬಂದಿದ್ದವು? ಯಾರಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದೀರಿ ಎಂಬಿತ್ಯಾದಿ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ಎಸ್​ಪಿ ಬಿ.ರಿಷ್ಯಂತ್ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಇವರೇ ನೋಡಿ ಚಂದ್ರಶೇಖರ್ ಗುರೂಜಿಯನ್ನು ಕೊಲೆ ಮಾಡಿದ ಹಂತಕರು

ಗಂಡನನ್ನೇ ಕೊಲೆ ಮಾಡಿದ ಹೆಂಡತಿ

ದಕ್ಷಿಣ ಕನ್ನಡ: ಕ್ಷುಲ್ಲಕ ಕಾರಣಕ್ಕೆ ಗಂಡನನ್ನೇ ಪತ್ನಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾವೂರಿನಲ್ಲಿ ನಡೆದಿದೆ. ಬೇಬಿ ಅಲಿಯಾಸ್ ಪೊಟ್ಟಸ್​ ಬೇಬಿ(55) ಬರ್ಬರವಾಗಿ ಕೊಲೆಯಾದವರು. ನಲ್ಲಮ್ಮ (50) ತನ್ನ ಪತಿಯನ್ನು ಕೊಲೆಗೈದಿರುವ ಪ್ರಕರಣ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಈ ಕೊಲೆಯ ನಂತರ ನಲ್ಲಮ್ಮ ಕತ್ತಿ ಹಿಡಿದುಕೊಂಡು ಕುಳಿತಿದ್ದಾಳೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕ್ಷುಲಕ ಕಾರಣಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

6 ತಿಂಗಳಲ್ಲಿ 1.3 ಕೋಟಿ ದಂಡ ಸಂಗ್ರಹ

ದಾವಣಗೆರೆ: ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರಿಂದ ಕಳೆದ 6 ತಿಂಗಳಲ್ಲಿ 1ಕೋಟಿಗೂ ಅಧಿಕ ದಂಡವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆ ಕಾರ್ಯಾಚರಣೆಗೆ ಇಳಿದ ಸಂಚಾರಿ ಪೊಲೀಸರು, ಕಳೆದ ಆರು ತಿಂಗಳಲ್ಲಿ 25,088 ಪ್ರಕರಣಗಳನ್ನು ದಾಖಲಿಸಿ 1.30 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ. 83 ತ್ರಿಬಲ್ ರೈಡಿಂಗ್, 76 ರ್ಯಾಶ್ ಡ್ರೈವಿಂಗ್​, 52 ಡಿಫೆಕ್ಟಿವ್ ಸೈಲೆನ್ಸರ್ ಸೇರಿ ಹಲವು ಪ್ರಕರಣದಲ್ಲಿ ದಂಡ ವಸೂಲಿ ಮಾಡಲಾಗಿದೆ. ಅದಾಗ್ಯೂ ಕೆಲವು ವಾಹನ ಸವಾರರ ಡಿಎಲ್​ಗಳು ರದ್ದುಗೊಳಿಸಲಾಗಿದ್ದು, ಕರ್ಕಶ ಶಬ್ದ ಮಾಡುತ್ತಿದ್ದ 52 ವಾಹನಗಳ ಸೈಲೆನ್ಸರ್ ಪೈಪ್​ಗಳನ್ನು​ ರೋಲರ್ ಹತ್ತಿಸಿ ಪೊಲೀಸರು ನಾಶಪಡಿಸಿದ್ದಾರೆ. ಎಸ್​ಪಿ ಸಿ.ಬಿ.ರಿಷ್ಯಂತ್ ಸಮ್ಮುಖದಲ್ಲಿ ನಾಶಪಡಿಸಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಚಂದ್ರಶೇಖರ್ ಗುರೂಜಿ ಮರ್ಡರ್; ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಕೊಲೆ ದೃಶ್ಯ ಇಲ್ಲಿದೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada