ಕರಾವಳಿಯಲ್ಲಿ ಧಾರಾಕಾರ ಮಳೆ: ಕಾಸರಗೋಡಿನಲ್ಲಿ ರಸ್ತೆ ಮುಳುಗುಡೆ, ಉಡುಪಿ ಜಿಲ್ಲೆಯಲ್ಲಿ ಕಡಲಕೊರೆತ, ಉತ್ತರ ಕನ್ನಡದಲ್ಲಿ ಗುಡ್ಡ ಕುಸಿದ ಭೀತಿ

ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ನದಿ-ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ಸಮುದ್ರದ ಅಬ್ಬರ ಹೆಚ್ಚಾಗಿದೆ.

ಕರಾವಳಿಯಲ್ಲಿ ಧಾರಾಕಾರ ಮಳೆ: ಕಾಸರಗೋಡಿನಲ್ಲಿ ರಸ್ತೆ ಮುಳುಗುಡೆ, ಉಡುಪಿ ಜಿಲ್ಲೆಯಲ್ಲಿ ಕಡಲಕೊರೆತ, ಉತ್ತರ ಕನ್ನಡದಲ್ಲಿ ಗುಡ್ಡ ಕುಸಿದ ಭೀತಿ
ಕರಾವಳಿಯಲ್ಲಿ ಮಳೆ ಚುರುಕಾಗಿದೆ.
TV9kannada Web Team

| Edited By: Apurva Kumar Balegere

Jul 05, 2022 | 1:56 PM

ಬೆಂಗಳೂರು: ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಹಲವೆಡೆ ವ್ಯಾಪಕವಾಗಿ ಮಳೆ ಸುರಿಯುತ್ತಿದೆ (Rain in Karnataka). ಕರಾವಳಿಯ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ನದಿ-ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ಸಮುದ್ರದ ಅಬ್ಬರ ಹೆಚ್ಚಾಗಿದೆ. ಕೇರಳದಲ್ಲಿರುವ ಕನ್ನಡ ಭಾಷಿಕ ಜಿಲ್ಲೆ ಕಾಸರಗೋಡಿನ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಾಸರಗೋಡು ನಗರದಲ್ಲಿಯೂ ಹಲವು ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಕುಂಬಳೆಯ ಪ್ರಸಿದ್ಧ ಶ್ರೀಶಂಕರ ನಾರಾಯಣ ದೇಗುಲವೂ ನೀರಿನಲ್ಲಿ ಮುಳುಗಿದೆ. ಜಿಲ್ಲೆಯಾದ್ಯಂತೆ ಸೋಮವಾರ ರಾತ್ರಿಯಿಂದ ವ್ಯಾಪಕ ಮಳೆ ಸುರಿಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಭಾರಿ ಮಳೆಯಿಂದ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಬಂಟ್ವಾಳ ತಾಲ್ಲೂಕಿನ ಸಾರಡ್ಕ ಚೆಕ್​ಪೋಸ್ಟ್​ ಬಳಿ ಗುಡ್ಡ ಕುಸಿದಿದ್ದು, ಸ್ಥಳೀಯ ಆಡಳಿತ ಸಿಬ್ಬಂದಿ ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಕಳೆದ 24 ಗಂಟೆಗಳಲ್ಲಿ ಸರಾಸರಿ 84 ಮಿಮೀ ಮಳೆ ದಾಖಲಾಗಿದೆ. ಕಾರ್ಕಳ 77, ಹೆಬ್ರಿ 142, ಕುಂದಾಪುರ 78, ಬೈಂದೂರು 68, ಉಡುಪಿ 59, ಬ್ರಹ್ಮಾವರ 86, ಕಾಪು 57 ಮಿಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಇಂದು ಸರಾಸರಿ 100 ಮಿಮೀಗೂ ಹೆಚ್ಚು ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹೇಳಿರುವ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್​ ಮುಂದುವರಿಸಿದೆ.

ಬ್ರಹ್ಮಾವರ ತಾಲೂಕಿನಲ್ಲೂ ವ್ಯಾಪಕ ಮಳೆಯಾಗಿದ್ದು, ಸೀತಾ ನದಿ ತುಂಬಿ ಹರಿಯುತ್ತಿದೆ. ಬ್ರಹ್ಮಾವರದ ಮಟಪಾಡಿ, ನೀಲಾವರ, ಹನೇಹಳ್ಳಿ ಪರಿಸರದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಮಟಪಾಡಿಯ ಭತ್ತದ ಗದ್ದೆಗಳಲ್ಲಿ ನೆರೆ ನೀರು ನಿಂತಿದೆ. ತೆಂಗಿನ ತೋಟಗಳಿಗೆ ನದಿ ನೀರು ನುಗ್ಗಿದೆ. ಕಡಲ ಕೊರೆತದ ಸಮಸ್ಯೆಯೂ ಕಾಣಿಸಿಕೊಂಡಿದೆ.

ಗುಡ್ಡ ಕುಸಿತದ ಆತಂಕ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಅಣಸಿ, ಅರಬೈಲು, ದೇವಿಮನಿ, ಅನಮೋಡು ಘಾಟ್​ನಲ್ಲಿ ಗುಡ್ಡ ಕುಸಿತದ ಆತಂಕ ನಿರ್ಮಾಣವಾಗಿದೆ. ಕಾರವಾರ ನಗರದ ಬ್ರಾಹ್ಮಣ ಗಲ್ಲಿಯಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಆರ್ದ್ರಾ ಮಳೆ ಅಬ್ಬರಿಸುತ್ತಿದೆ.

ಕೊಚ್ಚಿಹೋದ ಬಾಲಕಿಗಾಗಿ ಶೋಧ

ಚಿಕ್ಕಮಗಳೂರು ತಾಲ್ಲೂಕು ಹೊಸಪೇಟೆ ಗ್ರಾಮದಲ್ಲಿ ಶಾಲೆ ಮುಗಿಸಿ ಮನೆಗೆ ಹಿಂದಿರುಗುವಾಗ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ 1ನೇ ತರಗತಿ ವಿದ್ಯಾರ್ಥಿನಿ ಸುಪ್ರೀತಾಳಿಗಾಗಿ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ. ನಿನ್ನೆ ಶಾಲೆ ಮುಗಿಸಿ ಮನೆಗೆ ಹೋಗುವಾಗ ಬಾಲಕಿ ಕೊಚ್ಚಿಹೋಗಿದ್ದಳು. ವಿದ್ಯಾರ್ಥಿನಿಯನ್ನು ನೆನೆದು ಶಾಲಾ ಶಿಕ್ಷಕಿಯರು ಕಣ್ಣೀರಿಟ್ಟರು. ಅನಾರೋಗ್ಯದಿಂದಾಗಿ ಮಗು ಒಂದು ವಾರದಿಂದ ಶಾಲೆಗೆ ಬಂದಿರಲಿಲ್ಲ. ನಿನ್ನೆಯು ಅವಳಿಗೆ ಹುಷಾರಿಲ್ಲದಿದ್ದರೆ ಚೆನ್ನಾಗಿರುತ್ತಿತ್ತು. ಆಗ ಸುಪ್ರೀತಾ ಶಾಲೆಗೆ ಬರುತ್ತಿರಲಿಲ್ಲ, ಜೀವ ಉಳಿಯುತ್ತಿತ್ತು ಎಂದು ಶಿಕ್ಷಕಿಯರು ಭಾವುಕರಾದರು.

ಬಾಲಕಿ ಕೊಚ್ಚಿ ಹೋದ ಸಂದರ್ಭವನ್ನು ವಿವರಿಸಿದ ಮೃತಳ ಸೋದರ ಸೈಮಂಡ್ಸ್, ತಂಗಿಯು ಕೈಕಾಲು ತೊಳೆಯಲು ಹಳ್ಳಕ್ಕೆ ಹೋಗಿದ್ದಳು. ನೀರು ಜೋರಾಗಿ ಬಂದು, ಸುಪ್ರೀತಾಳನ್ನ ಕೊಚ್ಚಿಕೊಂಡು ಹೋಯಿತು ಎಂದು ಹೇಳಿದ.

ಕೊಡಗು ಜಿಲ್ಲೆಯಲ್ಲಿ ರಸ್ತೆ ಕಡಿತದ ಆತಂಕ

ಕೊಡಗು ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಮಡಿಕೇರಿ-ಮದೆನಾಡು ಬಳಿ ಬೆಟ್ಟದ ಮೇಲಿನಿಂದ ಒತ್ತಡ ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿಯು ಅಪಾಯಕಾರಿಯಾಗಿ ಉಬ್ಬುತ್ತಿದೆ. ರಸ್ತೆ ಬಿರುಕು ಬಿಟ್ಟ ಸ್ಥಳಕ್ಜೆ ಎನ್​ಡಿಆರ್​ಎಫ್ ತಂಡ ಭೇಟಿ ನೀಡಿ ಪರಿಶೀಲಿಸಿತು.

ತುಂಗಾ ಜಲಾಶಯ ಭರ್ತಿ

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದೆ. 3.24 ಟಿಎಂಸಿ ಸಾಮರ್ಥ್ಯ ಹೊಂದಿರುವ ತುಂಗಾ ಜಲಾಶಯದಿಂದ 43 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ. ನದಿ ತೀರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada