ಕಲಬುರಗಿ, ಮಾರ್ಚ್ 29: ನಗರದಲ್ಲಿ ಇಂದಿನಿಂದ ಆರಂಭವಾದ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಅವಘಡ ಒಂದು ಸಂಭವಿಸಿದೆ. ರಥದ ಚಕ್ರಕ್ಕೆ ಸಿಲುಕಿ ಹೋಂಗಾರ್ಡ್ ದುರ್ಮರಣ (death) ಹೊಂದಿರುವಂತಹ ಘಟನೆ ನಡೆದಿದೆ. ರಾಮು ಸಿದ್ದಪ್ಪ (28) ಮೃತ ಹೋಂಗಾರ್ಡ್. ಮೃತ ರಾಮು ಮೂಲತಃ ಬೀದರ್ ಜಿಲ್ಲೆಯ ಇಟಗಾ ಗ್ರಾಮದವರು. ಮತ್ತೋರ್ವ ಸಿಬ್ಬಂದಿ ಅಶೋಕರೆಡ್ಡಿಗೆ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಥ ಎಳೆಯುವ ವೇಳೆ ಉಂಟಾದ ಗದ್ದಲದಲ್ಲಿ ಭಕ್ತರನ್ನ ನಿಯಂತ್ರಿಸುವ ವೇಳೆ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆರ್‌ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿಯ ಮೆಹಬೂಬ್ ಫಂಕ್ಷನ್ ಹಾಲ್ನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಕಳ್ಳನಿಗೆ ಧರ್ಮದೇಟು ನೀಡಲಾಗಿದೆ. ಸಭೆಯಲ್ಲಿ ಮೊಬೈಲ್, ಪರ್ಸ್ ಕಳ್ಳತನಕ್ಕೆ ಯತ್ನಿಸಿದ್ದಾನೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರಿದ್ದ ಸಭೆಯಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಹೀಗಾಗಿ ಕಳ್ಳನನ್ನ ಹಿಡಿದು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಚಿತ್ರದುರ್ಗ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಸಿರಾಫನಹಳ್ಳಿಯಲ್ಲಿ ನಡೆದಿದೆ. ಆದಿತ್ಯ(15), ಅಪ್ಪರಸನಹಳ್ಳಿಯ ಯರಗುಂಟೇಶ್ವರ(14) ಮೃತರು. ಚಿತ್ರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಶಕ್ತಿನಗರ ಎಂಬಲ್ಲಿ ಘಟನೆ ನಡೆದಿದೆ. ಬೆಳ್ತಂಗಡಿಯ ಲಾಯಿಲ ನಿವಾಸಿ ಪ್ರೈಸ್ ಮ್ಯಾಥ್ಯೂ(32) ಮೃತ ದುರ್ದೈವಿ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್: ಮತ್ತಿಬ್ಬರ ಫೋಟೋ ಬಿಡುಗಡೆ ಮಾಡಿದ NIA, ಸುಳಿವು ಕೊಟ್ಟವರಿಗೆ ಬಂಪರ್ ಬಹುಮಾನ
ಬೆಳ್ತಂಗಡಿಯಿಂದ ಮೂಡಬಿದಿರೆ ಕಡೆ ಹೋಗುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್ಗೆ ಕಾರು ಡಿಕ್ಕಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸರು ಪರಿಶೀಲನೆ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.