Accidents: ರಾಜ್ಯದ ಹಲವೆಡೆ ವಿವಿಧ ದುರ್ಘಟನೆಗಳಲ್ಲಿ 10 ಮಂದಿ ದುರ್ಮರಣ

|

Updated on: May 11, 2023 | 10:12 PM

ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತ, ನೈಸರ್ಗಿಕ ವಿಪತ್ತುಗಳಿಂದಾಗಿ ಒಟ್ಟು 10 ಮಂದಿ ಮೃತಪಟ್ಟು ಹತ್ತಾರು ಮಂದಿ ಗಾಯಗೊಂಡಿದ್ದಾರೆ.

Accidents: ರಾಜ್ಯದ ಹಲವೆಡೆ ವಿವಿಧ ದುರ್ಘಟನೆಗಳಲ್ಲಿ 10 ಮಂದಿ ದುರ್ಮರಣ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತ, ನೈಸರ್ಗಿಕ ವಿಪತ್ತುಗಳಿಂದಾಗಿ ಒಟ್ಟು 10 ಮಂದಿ ಮೃತಪಟ್ಟು ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲೂಕಿನ ಕುಂಸಿ ಬಳಿ ಗುರುವಾರ ಸಂಜೆ ಎರಡು ಬಸ್​ಗಳ ಮಧ್ಯೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನ ಯಲಹಂಕ ತಾಲೂಕಿನ ಚಲ್ಲಹಳ್ಳಿ ಬಳಿ ಕಾರಿಗೆ ಬೈಕ್​ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಮೃತರನ್ನು ಚಲ್ಲಹಳ್ಳಿ ಗ್ರಾಮದ ರಾಮಯ್ಯ (39), ನಾಗರಾಜ್ (42) ಎಂದು ಗುರುತಿಸಲಾಗಿದೆ. ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಮತ್ತೊಂದೆಡೆ, ಆನೇಕಲ್ ತಾಲೂಕಿನ ಇಂಡ್ಲವಾಡಿ ಬಳಿ ಬೈಕ್​ಗೆ ಲಾರಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ನಿಂಗಮ್ಮ (60) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂದೀಪ್, ರಕ್ಷಿತಾ ಎಂಬುವರು ಗಾಯಗೊಂಡಿದ್ದಾರೆ. ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಲ್ಲಾಪುರ; ಬಾವಿಗೆ ಬಿದ್ದು ಮೂವರು ಸಾವು

ಪಂಪ್‌ ರಿಪೇರಿಗೆಂದು ಬಾವಿಗೆ ಇಳಿದು ಮುಳುಗುತ್ತಿದ್ದಾತನನ್ನು ರಕ್ಷಿಸಲು ಇಳಿದ ಇನ್ನಿಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟಾದಲ್ಲಿ ನಡೆದಿದೆ. ಗೋವಿಂದ ಸೋಮಯ್ಯ ಪೂಜಾರಿ (48), ಗಣೇಶ್ ರಾಮದಾಸ್ ಶೇಟ್ (23), ಸುರೇಶ್ ನಾಯರ್ (38) ಸಾವನ್ನಪ್ಪಿದ ದುರ್ದೈವಿಗಳು. ಬಾವಿಯಲ್ಲಿ ಬಿದ್ದಿದ್ದ ಪಂಪ್ ಸೆಟ್ ತೆಗೆಯಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ: Shivamogga: ಭೀಕರ ರಸ್ತೆ ಅಪಘಾತ, 2 ಬಸ್​ಗಳ ನಡುವೆ ಡಿಕ್ಕಿ: ಇಬ್ಬರು ದುರ್ಮರಣ

ಈ ಮಧ್ಯೆ, ಉಡುಪಿಯಲ್ಲಿ ಏಕಾಏಕಿ ಆರಂಭವಾದ ಗಾಳಿ, ಸಿಡಿಲು, ಮಳೆಯಿಂದಾಗಿ ಮರ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆ ಕಾಪು ತಾಲೂಕಿನ‌ ಮಜೂರು ಮಸೀದಿ ಬಳಿ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ರಿಕ್ಷಾದ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ರಿಕ್ಷಾದಲ್ಲಿದ್ದ ದಂಪತಿ ಮೃತಪಟ್ಟಿದ್ದಾರೆ. ರಿಕ್ಷಾ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಇವರು ಶಿರ್ವದಿಂದ ಕಾಪು ಕಡೆ ಸಂಚರಿಸುತ್ತಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ