ಮೇ 13ಕ್ಕೆ ಚುನಾವಣಾ ಫಲಿತಾಂಶ: ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಂಡ ಜಿಲ್ಲಾಡಳಿತ
ಮೇ 10ರಂದು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸುಸೂತ್ರವಾಗಿ ಮತದಾನ ನಡೆದಿದ್ದು, ಮತ ಎಣಿಕೆ ಕಾರ್ಯ ಮೇ 13ರಂದು ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.
ವಿಜಯಪುರ: ಮೇ 10ರಂದು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ (Karnataka Assembly Election 2023) ಸುಸೂತ್ರವಾಗಿ ಮತದಾನ ನಡೆದಿದ್ದು, ಮತ ಎಣಿಕೆ ಕಾರ್ಯ ಮೇ 13ರಂದು ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ನಡೆಯಲಿದ್ದು, ಜಿಲ್ಲಾಡಳಿತದಿಂದ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ. ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ಮತಕ್ಷೇತ್ರದ ಇವಿಎಂ ಮತಯಂತ್ರಗಳನ್ನು ಒಡೆಯರ ಸದನ, ಬಸವನಬಾಗೇವಾಡಿ ಹಾಗೂ ಬಬಲೇಶ್ವರ ಮತಕ್ಷೇತ್ರದ ಇವಿಎಂಗಳನ್ನು ಆದಿಲ್‍ಶಾಹಿ ಸದನ, ವಿಜಯಪುರ ನಗರ ಹಾಗೂ 3ನಾಗಠಾಣ ಮತಕ್ಷೇತ್ರದ ಇವಿಎಂಗಳನ್ನು ಹೊಯ್ಸಳ ಸದನ ಹಾಗೂ ಇಂಡಿ ಮತ್ತು ಸಿಂದಗಿ ಮತಕ್ಷೇತ್ರದ ಇವಿಎಂಗಳನ್ನು ವಿಜಯನಗರ ಸದನ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ.
ಮೇ 13 ರಂದು ಬೆಳಿಗ್ಗೆ 7-30 ಕ್ಕೆ ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಸ್ಪರ್ಧಿಸಿದ ಅಭ್ಯರ್ಥಿಗಳು ಅಥವಾ ಅವರ ಚುನಾವಣಾ ಏಜೆಂಟರ್ ಸಮ್ಮುಖದಲ್ಲಿ ತೆರೆಯಲಾಗುವುದು ಎಂದು ಡಿಸಿ ಅವರು ತಿಳಿಸಿದ್ದಾರೆ.
14 ಟೇಬಲ್‍ಗಳಲ್ಲಿ ಮತ ಎಣಿಕೆ
ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ಮತ ಎಣಿಕೆಗೆ ಸಂಬಂಧಿಸಿದಂತೆ ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ 14 ಟೇಬಲ್‍ಗಳಲ್ಲಿ ಇವಿಎಂ ಮತ ಎಣಿಕೆ ಹಾಗೂ 4 ಟೇಬಲ್‍ಗಳಲ್ಲಿ ಅಂಚೆ ಮತಪತ್ರಗಳ ಎಣಿಕೆ ಮತ್ತು ಸೇವಾ ಮತದಾರರ ಅಂಚೆ ಮತಪತ್ರಗಳನ್ನು ಚುನಾವಣಾಧಿಕಾರಿಗಳ ಟೇಬಲ್‍ನಲ್ಲಿ ಎಣಿಕೆ ಕಾರ್ಯ ಮಾಡಲಾಗುವುದು.
ಇದನ್ನೂ ಓದಿ: Gadag: ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾದ್ಯಂತ ಪ್ರತಿಬಂಧಕಾಜ್ಞೆ ಜಾರಿ
ಮತ ಎಣಿಕೆ ಸುತ್ತುಗಳು
ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ಪೈಕಿ ಮತಗಟ್ಟೆಗಳನುಸಾರವಾಗಿ ಬಸವನಬಾಗೇವಾಡಿ ಮತಕ್ಷೇತ್ರದ 17 ಸುತ್ತುಗಳು, ಮುದ್ದೇಬಿಹಾಳ, ದೇವರಹಿಪ್ಪರಗಿ ಹಾಗೂ ಬಬಲೇಶ್ವರ ಮತಕ್ಷೇತ್ರದ 18 ಸುತ್ತುಗಳು ಹಾಗೂ ವಿಜಯಪುರ ನಗರ, ಇಂಡಿ ಮತ್ತು ಸಿಂದಗಿ ಮತಕ್ಷೇತ್ರದ 20 ಸುತ್ತುಗಳು ಹಾಗೂ ನಾಗಠಾಣ ಮತಕ್ಷೇತ್ರದ 22 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ಮಾಡಲಾಗುವುದು.
408 ಮತ ಎಣಿಕೆ ಸಿಬ್ಬಂದಿ
ಮತ ಎಣಿಕೆ ಕಾರ್ಯಕ್ಕಾಗಿ ಪ್ರತಿ ವಿಧಾನಸಭಾವಾರು 14 ಟೇಬಲ್‍ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಪ್ರತಿ ವಿಧಾನಸಭೆಗೆ 17 ಎಣಿಕೆ ಮೇಲ್ವಿಚಾರಕರು, 17 ಎಣಿಕೆ ಸಹಾಯಕರು, 17 ಮೈಕ್ರೋ ಆಬ್ಸರವರ್ ಒಳಗೊಂಡಂತೆ ಒಟ್ಟು 51 ಅಧಿಕಾರಿ-ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಿಗೆ 112 ಟೇಬಲ್, 136 ಎಣಿಕೆ ಮೇಲ್ವಿಚಾರಕರು, 136 ಎಣಿಕೆ ಸಹಾಯಕರು, 136 ಮೈಕ್ರೋ ಆಬ್ಸರವರ್ ಸೇರಿದಂತೆ ಒಟ್ಟು 408 ಅಧಿಕಾರಿ-ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
224 ಅಂಚೆ ಮತ ಪತ್ರ ಎಣಿಕೆ ಸಿಬ್ಬಂದಿ
ಅದರಂತೆ ಅಂಚೆ ಮತಪತ್ರಗಳ ಎಣಿಕೆಯನ್ನು ಪ್ರತಿ ವಿಧಾನಸಭಾವಾರು 4 ಟೇಬಲ್‍ಗಳಲ್ಲಿ ಜಿಲ್ಲೆಯ 8 ವಿಧಾನಸಭೆಗಳಿಗೆ 32 ಟೇಬಲ್‍ಗಳ ವ್ಯವಸ್ಥೆ, ಹಾಗೂ ಪ್ರತಿ ವಿಧಾನಸಭಾವಾರು 5 ಎಣಿಕೆ ಮೇಲ್ವಿಚಾರಕರು, 10 ಎಣಿಕೆ ಸಹಾಯಕರು, 5 ಮೈಕ್ರೋ ಆಬ್ಸರ್‍ವರ್ ಹಾಗೂ 4 ಎಆರ್‍ಓ ಸೇರಿದಂತೆ ಒಟ್ಟು 28 ಜನ ಪ್ರತಿ ವಿಧಾನಸಭೆಗೆ ನಿಯೋಜಿಸಲಾಗಿದೆ. ಜಿಲ್ಲೆಯ 8 ವಿಧಾನಸಭೆ ಮತಕ್ಷೇತ್ರಗಳಿಗೆ ಅಂಚೆ ಮತ ಪತ್ರ ಎಣಿಕೆಗಾಗಿ 32 ಟೇಬಲ್‍ಗಳ ವ್ಯವಸ್ಥೆ, 40 ಎಣಿಕೆ ಮೇಲ್ವಿಚಾರಕರು, 80 ಎಣಿಕೆ ಸಹಾಯಕರು, 40 ಮೈಕ್ರೋ ಆಬ್ಸರವರ್, 32 ಎಆರ್‍ಓ ಸೇರಿದಂತೆ ಒಟ್ಟು 224 ಅಧಿಕಾರಿ-ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಮೇ 13ರಂದು ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ: ಶನಿವಾರ ಬೆಂಗಳೂರು ನಗರದಾದ್ಯಂತ ನಿಷೇಧಾಜ್ಞೆ ಜಾರಿ
ಮತ ಎಣಿಕೆ ಕೇಂದ್ರದಲ್ಲಿ ಚುನಾವಣಾ ಆಯೋಗದಿಂದ ಅನುಮತಿ ಪಡೆದ ಅಧಿಕಾರಿಗಳು, ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು, ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಧಿಕೃತ ಪಾಸ್ ಪಡೆದ ಮಾಧ್ಯಮದವರು, ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ-ಸಿಬ್ಬಂದಿ, ಸ್ಪರ್ಧಿಸಿದ ಅಭ್ಯರ್ಥಿ ಹಾಗೂ ಅವರ ಚುನಾವಣಾ ಏಜೆಂಟರು ಮತ್ತು ಎಣಿಕೆ ಏಜೆಂಟರಿಗೆ ಮಾತ್ರ ಪ್ರವೇಶಾವಕಾಶವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ವರದಿ: ಅಶೋಕ ಯಡಳ್ಳಿ, ಟಿವಿ9, ವಿಜಯಪುರ
ಕರ್ನಾಟಕ ಚುನಾವಣೆ ತಾಜಾ & ವಿಶೇಷ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:40 pm, Thu, 11 May 23