ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಹನುಮಂತನಗರ ಪೊಲೀಸರ ವಶದಲ್ಲಿದ್ದ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ. 13.28 ಲಕ್ಷ ವಂಚಿಸಿದ್ದ ಸಿದ್ದಲಿಂಗಸ್ವಾಮಿ(60) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಸಿದ್ದಲಿಂಗಸ್ವಾಮಿ ಆತ್ಮಹತ್ಯೆಗೆ ಶರಣಾಗಿದ್ದೇಕೆ?
ಅಂದ ಹಾಗೆ, ಮೂಲತಃ ಮಂಡ್ಯ ಮೂಲದವನಾದ ಸಿದ್ದಲಿಂಗಸ್ವಾಮಿ ತಾನು BDA ನೌಕರನೆಂದು ಪರಿಚಯಿಸಿಕೊಂಡು ವಂಚನೆ ನಡೆಸುತ್ತಿದ್ದ. ಜನರಿಗೆ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಸೈಟ್ ಕೊಡಿಸುವುದಾಗಿ ನಂಬಿಸುತ್ತಿದ್ದ. BDA ಸೈಟ್ ಮರುಹಂಚಿಕೆ ಮಾಡಿಸಿಕೊಡುವುದಾಗಿ ಹೇಳಿದ್ದ ಸಿದ್ದಲಿಂಗಸ್ವಾಮಿ ನಕಲಿ ದಾಖಲಾತಿಗಳನ್ನು ಸೃಷ್ಟಿ ಮಾಡಿ 13.28 ಲಕ್ಷ ಪಡೆದಿದ್ದ. ಈ ಕೃತ್ಯಕ್ಕೆ, ಆತ BDAನ ನಕಲಿ ಸೀಲ್, ಲೆಟರ್ ಹೆಡ್ ಬಳಸಿ ವಂಚನೆ ಮಾಡಿದ್ದ.
ಇನ್ನು, ಈತನ ವಂಚನೆ ಬಯಲಾಗುತ್ತಿದ್ದಂತೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ನಾಗರಾಜ್ ಎಂಬುವವರ ದೂರಿನ ಮೇರೆಗೆ FIR ದಾಖಲಾಗಿತ್ತು.
ಹೀಗಾಗಿ, ಆರೋಪಿಯನ್ನ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದ ಪೊಲೀಸರು ಸಿದ್ದಲಿಂಗಸ್ವಾಮಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ, ಆರೋಪಿ ಸಿದ್ದಲಿಂಗಸ್ವಾಮಿ ವಿದ್ಯಾರಣ್ಯಪುರದಲ್ಲಿರುವ ತನ್ನ ಮನೆಯಲ್ಲಿ ಕೆಲ ವಸ್ತು ಇಟ್ಟಿದ್ದಾಗಿ ಹೇಳಿದ್ದ. ಹಾಗಾಗಿ, ವಿದ್ಯಾರಣ್ಯಪುರದ ನಿವಾಸಕ್ಕೆ ಸ್ಥಳ ಮಹಜರಿಗೆ ಪೊಲೀಸರು ಕರೆ ತಂದಿದ್ದರು.
ತನ್ನ ಪತ್ನಿ ಮತ್ತು ಮಗಳ ಜೊತೆ ವಿದ್ಯಾರಣ್ಯಪುರದ ಅಪಾರ್ಟ್‌ಮೆಂಟ್ ಒಂದರಲ್ಲಿ ಬಾಡಿಗೆಗೆ ಫ್ಲ್ಯಾಟ್ ಪಡೆದಿದ್ದ ಸಿದ್ದಲಿಂಗಸ್ವಾಮಿ ಪೊಲೀಸರನ್ನು ಅಲ್ಲಿಗೆ ಕರೆತಂದಿದ್ದನು. ಈ ವೇಳೆ, ಮನೆಯ ಕಿಚನ್ ಮೂಲಕ ತೆರಳಿ ಕಟ್ಟಡದಿಂದ ಕೆಳಗೆ ಹಾರಿದ್ದ. ಘಟನೆಯಲ್ಲಿ ತೀವ್ರ ರಕ್ತಸ್ರಾವ ಅನುಭವಿಸಿದ ಆರೋಪಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಿದ್ದಲಿಂಗಸ್ವಾಮಿ ಕೊನೆಯುಸಿರೆಳೆದಿದ್ದಾನೆ.
ಆರೋಪಿಯನ್ನು ಪೊಲೀಸರು ಫೆ.24ರಂದು ಬಂಧಿಸಿ ಕೋರ್ಟ್ ಮೂಲಕ ಕಸ್ಟಡಿಗೆ ಪಡೆದಿದ್ರು. ಹೆಚ್ಚಿನ ವಿಚಾರಣೆಗೆ ಹನುಮಂತನಗರ ಪೊಲೀಸರು ವಶಕ್ಕೆ ಪಡೆದಿದ್ದರು.
ಸಾಲಬಾಧೆ ತಾಳಲಾರದೇ ನೇಣುಹಾಕಿಕೊಂಡು ರೈತ ಆತ್ಮಹತ್ಯೆ
ಸಾಲಬಾಧೆ ತಾಳಲಾರದೇ ನೇಣುಹಾಕಿಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿದೆ. ಚನ್ನಾಪುರದಲ್ಲಿ ರೈತ ಹನುಮಂತ ಓಬಳಾಪುರ(32) ಆತ್ಮಹತ್ಯೆಗೆ ಶರಣಾಗಿದ್ದಾನೆ.
ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹನುಮಂತ ಬ್ಯಾಂಕ್ ಸೇರಿ ವಿವಿಧೆಡೆ 2 ಲಕ್ಷ ರೂ. ಸಾಲ ಮಾಡಿದ್ದನು. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಕುಡಿದು ಬಂದು ಗಲಾಟೆ ಮಾಡಿದ್ದ ಮಗನನ್ನ ಕೊಲೆಗೈದ ತಂದೆ ಅರೆಸ್ಟ್