
ಚಿಕ್ಕಬಳ್ಳಾಪುರ, (ಜನವರಿ 27): ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಅವಾಚ್ಯ ಶಬ್ಧಗಳ ನಿಂದನೆ ಹಾಗೂ ಬೆದರಿಕೆ ಪ್ರಕರಣಕ್ಕೆ (Sidlaghatta official threat case) ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡನಿಗೆ (Rajeev Gowda) ಕೋರ್ಟ್ ಶಾಕ್ ಕೊಟ್ಟಿದೆ. ರಾಜೀವ್ ಗೌಡಗೆ ಮಧ್ಯಂತರ ಜಾಮೀನು ನೀಡಲು ಶಿಡ್ಲಘಟ್ಟದ ಜೆಎಂಎಫ್ಸಿ ಕೋರ್ಟ್ ನಿರಾಕರಿಸಿದೆ. ಬದಲಿಗೆ 14 ದಿನ ಅಂದರೆ ಫೆಬ್ರವರಿ 9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ. ಇನ್ನೊಂದೆಡೆ ಆರೋಪಿ ರಾಜೀವ್ ಗೌಡನಿಗೆ ಆಶ್ರಯ ನೀಡಿ ಪೊಲೀಸರ ಬಂಧನಕ್ಕೊಳಗಾಗಿದ್ದ ಮಂಗಳೂರಿನ ಉದ್ಯಮಿಗೆ ಜಾಮೀನು ಸಿಕ್ಕಿದೆ.
ಇನ್ನು ವಿಚಾರಣೆ ವೇಳೆ ಸಹಾಯಕ ಸರ್ಕಾರಿ ಅಭಿಯೋಜಕ ಮೊಹಮ್ಮದ್ ಖಾಜಾ ಅವರು ರಾಜೀವ್ ಗೌಡನ ವಿರುದ್ಧ ಪ್ರಬಲ ವಾದ ಮಂಡಿಸಿದರು. ಆರೋಪಿ ಮಹಿಳಾ ಅಧಿಕಾರಿಯ ವಿರುದ್ಧ ಅತ್ಯಂತ ಕೆಟ್ಟದಾಗಿ ಮಾತನಾಡಿದ್ದಾರೆ. ಆ ಶಬ್ದಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಮೊಬೈಲ್ ಇನ್ನೂ ವಶಪಡಿಸಿಕೊಳ್ಳಬೇಕಿದೆ. ಯಾವೆಲ್ಲಾ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದರು ಎಂಬ ಬಗ್ಗೆ ಮಹಜರು ನಡೆಸಬೇಕಿರುವುದರಿಂದ ಪೊಲೀಸ್ ಕಸ್ಟಡಿಗೆ ನೀಡಬೇಕು’ ಎಂದು ವಾದ ಮಂಡಿಸಿದರು. ಅಲ್ಲದೆ, ಬಿಎನ್‌ಎಸ್ 132 (BNS 132) ಸೆಕ್ಷನ್ ಅಡಿ ಪ್ರಕರಣದ ಗಾಂಭೀರ್ಯವನ್ನು ನ್ಯಾಯಾಧೀಶರ ಗಮನಕ್ಕೆ ತಂದರು.
ರಾಜೀವ್ ಗೌಡ ಪರ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದ ಮಂಡಿಸಿದ್ದು, ಇದು ರಾಜಕೀಯ ಪ್ರೇರಿತ ದೂರು. ಘಟನೆ ನಡೆದ ಎರಡು ದಿನಗಳ ಬಳಿಕ ದೂರು ನೀಡಲಾಗಿದೆ. ಈಗಾಗಲೇ ಆರೋಪಿಯು ಮಾಧ್ಯಮಗಳ ಮೂಲಕ ಕ್ಷಮೆಯನ್ನೂ ಕೇಳಿದ್ದಾರೆ. ಕೇವಲ ಜೈಲಿಗೆ ಹಾಕಬೇಕೆಂಬ ಉದ್ದೇಶದಿಂದ ಸೆಕ್ಷನ್ ಹಾಕಲಾಗಿದೆ. ಹೀಗಾಗಿ ಮಧ್ಯಂತರ ಜಾಮೀನು ನೀಡಬೇಕೆಂದು ಮನವಿ ಮಾಡಿದರು. ಎರಡೂ ಕಡೆ ವಾದ ಪ್ರತಿವಾದ ಆಲಿಸಿದ ಕೋರ್ಟ್, ಜಾಮೀನು ಅರ್ಜಿಯನ್ನು ವಜಾಗೊಳಿಸಿ ರಾಜೀವ್ ಗೌಡನನ್ನು ಜೈಲಿಗಟ್ಟಿದೆ.
ಕಳೆದ 14 ದಿನಗಳಿಂದ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ನಿನ್ನಿ (ಜನವರಿ 26) ಕೇರಳದ ಗಡಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇನ್ನು ಇದೇ ವೇಳೆ ಜೊತೆಗಿದ್ದ ಆಶ್ರಯ ನೀಡಿದ್ದ ಮಂಗಳೂರಿನ ಉದ್ಯಮಿ ಮೈಕಲ್ನನ್ನು ಸಹ ಫೊಲೀಸರು ಬಂಧಿಸಿ ಶಿಡ್ಗಘಟ್ಟಕ್ಕೆ ಕರೆತಂದಿದ್ದರು. ಬಳಿಕ ಆರೋಪಿಗಳಿಗೆ ವೈದ್ಯಕೀಯ ತಪಾಸಣೆ ಮಾಡಿಸಿ ಕೋರ್ಟ್ಗೆ ಹಾಜರುಡಿಸಲಾಯ್ತು. ಈ ವೇಳೆ ರಾಜೀವ್ ಗೌಡ ಪರ ವಕೀಲರು ಸಹ ಮಧ್ಯಂತರ ಜಾಮೀನಿಗೆ ಮನವಿ ಮಾಡಿದರು. ಆದ್ರೆ, ಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿ ರಾಜೀವ್ ಗೌಡನಿಗೆ ಫೆಬ್ರವರಿ 9ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಇನ್ನು ರಾಜೀವ್ ಗೌಡನ ಆಶ್ರಯದಾಯ ಮೈಕಲ್ಗೆ ಕೋರ್ಟ್ ಜಾಮೀನು ನೀಡಿದೆ.
Published On - 7:17 pm, Tue, 27 January 26