
ಬೆಂಗಳೂರು, ಜುಲೈ 04: ಅಕ್ರಮ ಚಿನ್ನ ಸಾಗಣೆ (Gold Smuggling) ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ಗೆ (Rany Rao) ಸೇರಿದ 34.12 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ರನ್ಯಾ ರಾವ್ಗೆ ಸೇರಿದ ಬೆಂಗಳೂರಿನ ಅರ್ಕಾವತಿ ಬಡವಾಣೆಯಲ್ಲಿನ ನಿವೇಶ, ವಿಕ್ಟೋರಿಯಾ ಲೇಔಟ್ನಲ್ಲಿನ ಮನೆ, ಅನೇಕಲ್ನಲ್ಲಿನ ಕೃಷಿ ಜಮೀನು ಮತ್ತು ತುಮಕೂರಿನಲ್ಲಿನ ಜಮೀನನ್ನು ಇಡಿ ಜಪ್ತಿ ಮಾಡಿದೆ. ಚಿನ್ನ ಕಳ್ಳಸಾಗಾಣಿಕೆ ಸಂಬಂಧಿಸಿದಂತೆ ದಾಖಲಾಗಿರುವ ಸಿಬಿಐ ಮತ್ತು ರೆವಿನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಒಪ್ಪಿಗೆ ಮೇರೆಗೆ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿಕೊಂಡಿದೆ.
ರಾನ್ಯ ರಾವ್ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ನಲ್ಲಿ ದುಬೈನಿಂದ ಹಿಂದಿರುಗುವಾಗ ಬಂಧಿಸಲಾಗಿತ್ತು. ಕಸ್ಟಮ್ ಅಧಿಕಾರಿಗಳು ಇವರನ್ನು ತಪಾಸಣೆಗೆ ಒಳಪಡಿಸಿದಾಗ 12.56 ಕೋಟಿ ರೂ. ಮೌಲ್ಯದ 14.213 ಕೆಜಿ ಚಿನ್ನ ಪತ್ತೆಯಾಗಿತ್ತು. ಬಳಿಕ ರನ್ಯಾ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದಾಗ 2.67 ಕೋಟಿ ಮೌಲ್ಯದ ದಾಖಲೆಗಳಿಲ್ಲದ ಹಣ ಮತ್ತು 2.06 ಕೋಟಿ ಮೌಲ್ಯದ ಚಿನ್ನದ ಆಭರಣಗಳು ಪತ್ತೆಯಾದ್ದವು.
ರನ್ಯಾ ರಾವ್, ತರುಣ್ ಕೊಂಡೂರು ಮತ್ತು ಇತರರು ಸಕ್ರಿಯವಾಗಿ ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದರು. ದುಬೈ ಮತ್ತು ಉಗಾಂಡಾದ ಪೂರೈಕೆದಾರರಿಂದ ಚಿನ್ನವನ್ನು ಖರೀದಿಸಿ, ಹವಾಲಾ ಮೂಲಕ ನಗದು ಪಾವತಿ ಮಾಡುತ್ತಿದ್ದರು. ದುಬೈನಲ್ಲಿ ಚಿನ್ನ ಸಾಗಾಣೆ ಬಗ್ಗೆ ಸುಳ್ಳು ಕಸ್ಟಮ್ಸ್ ಡಿಕ್ಲರೇಷನ್ ಪಡೆಯುತ್ತಿದ್ದರು. ಚಿನ್ನವನ್ನು ಸ್ವಿಟ್ಜರ್ಲ್ಯಾಂಡ್, ಯುಎಸ್ಎಗೆ ತೆಗೆದುಕೊಂಡು ಹೋಗುತ್ತೇವೆಂದು ಡಿಕ್ಲರೇಷನ್ ಪಡೆಯುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.
ಆದರೆ, ಎರಡು ಸೆಟ್ ಪ್ರಯಾಣ ದಾಖಲೆಗಳನ್ನು ಬಳಸಿ ಭಾರತಕ್ಕೆ ಚಿನ್ನ ಸಾಗಣೆ ಮಾಡಿದ್ದಾರೆ. ಇದಲ್ಲದೆ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಭಾರತದ ಆಭರಣ ವ್ಯಾಪಾರಿಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗೆ ಮಾರಾಟ ಮಾಡಿದ್ದಾರೆ. ನಂತರ ಹಣವನ್ನು ವಿದೇಶಗಳಿಗೆ ಹವಾಲಾ ಮೂಲಕ ಕಳುಹಿಸುತ್ತಿದ್ದರು. ಹೀಗೆ ಭಾರತಕ್ಕೆ ಹೆಚ್ಚಿನ ಚಿನ್ನವನ್ನು ಕಳ್ಳಸಾಗಣೆ ಮಾಡಲು ಅಕ್ರಮ ಹಣ ವರ್ಗಾಯಿಸಲಾಗುತ್ತಿತ್ತು ಎಂಬ ಮಾಹಿತಿ ತನಿಖೆ ವೇಳೆ ಗೊತ್ತಾಗಿದೆ.
ಆರೋಪಿಗಳ ಮೊಬೈಲ್ ಫೋನ್‌ಗಳು ಮತ್ತು ಡಿಜಿಟಲ್ ಸಾಧನಗಳಿಂದಲೂ ಅನೇಕ ವಿಚಾರ ಬಯಲಾಗಿದೆ. ವಿದೇಶಿ ಚಿನ್ನದ ಪೂರೈಕೆದಾರರು, ಹವಾಲಾ ಮಧ್ಯವರ್ತಿಗಳು ಮತ್ತು ದುಬೈ ಮೂಲದ ಕಸ್ಟಮ್ಸ್ ಏಜೆಂಟ್‌ಗಳೊಂದಿಗಿದ್ದ ಸಂಪರ್ಕ ಹೊಂದಿರುವುದು ಈ ಸಾಧನಗಳ ಮೂಲಕ ಇಡಿ ಅಧಿಕಾರಿಗಳಿಗೆ ಗೊತ್ತಾಗಿದೆ.
PMLAಯ ಸೆಕ್ಷನ್ 50 ರ ಅಡಿಯಲ್ಲಿ ರನ್ಯಾ ಹೇಳಿಕೆ ಪಡೆಯಲಾಗಿತ್ತು. ಆಗ ರನ್ಯಾ ರಾವ್, ನೀವು ವಶಪಡಿಸಿಕೊಂಡಿರುವ ಚಿನ್ನ ಮತ್ತು ಇತರ ಸ್ವತ್ತುಗಳ ಬಗ್ಗೆ ನನಗೆ ಗೊತ್ತಿಲ್ಲ ಎಂದು ಇಡಿ ಅಧಿಕಾರಿಗಳ ಮುಂದೆ ಹೇಳಿದ್ದರು. ಆದರೆ, ಸಿಕ್ಕಿರುವ ಸಾಕ್ಷ್ಯಗಳು ರನ್ಯಾ ಹೇಳಿಕೆಗೆ ವಿರುದ್ಧವಾಗಿವೆ. ಡಿಆರ್ಐ ರನ್ಯಾ ರಾವ್ ಅವರಿಗೆ ಸೇರಿದ 14.2 ಕೆಜಿ ಚಿನ್ನ ಮತ್ತು ಸಂಬಂಧಿತ ಸ್ವತ್ತುಗಳನ್ನು ವಶಪಡಿಸಿಕೊಂಡಿತ್ತು. ಆದರೆ, 55.62 ಕೋಟಿ ರೂ. ಸ್ಮಗ್ಲಿಂಗ್ ಆಗಿದೆ ಎಂದು ಇಡಿ ಅಧಿಕಾರಿಗಳು ತನಿಖೆಯ ವೇಳೆ ತಿಳಿದುಬಂತು.
ಸದ್ಯ ರನ್ಯಾ ರಾವ್ಗೆ ಸಂಬಂಧಿತ ನಾಲ್ಕು ಆಸ್ತಿಗಳು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸದ್ಯ ಈ ಪ್ರಕರಣದ ಬಗ್ಗೆ ಇಡಿ ತನಿಖೆ ಮುಂದುವರೆಸಿದೆ.
Published On - 9:00 pm, Fri, 4 July 25