ಬೆಸ್ಕಾಂ ಟೆಂಪರರಿ ಕನೆಕ್ಷನ್ ಪಡೆದವರ ಬವಣೆ: ಸರ್ಕಾರ ತೋರಬೇಕಿದೆ ಕರುಣೆ..!
ನಿರ್ಮಾಣ ಹಂತದ ಕಟ್ಟಡಗಳಿಗೆ ಆಕ್ಯುಪೆನ್ಸಿ ಪ್ರಮಾಣಪತ್ರಗಳಿಲ್ಲದೆ ಯಾವುದೇ ಸೇವೆಗಳನ್ನು ಒದಗಿಸಬಾರದು ಎಂಬ ಸುಪ್ರೀಂಕೋರ್ಟ್ ಆದೇಶವಿದೆ. ಅನಮತಿ ಪಡೆಯದೆಯೇ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಿಸುವವರಿಗೆ ಯಾವುದೇ ಬ್ಯಾಂಕ್‌ಗಳು ಸಾಲ ಸೌಲಭ್ಯ ನೀಡಬಾರದು. ಅಂತಹ ಕಟ್ಟಡಗಳಿಗೆ ವಿದ್ಯುತ್, ನೀರಿನ ಸಂಪರ್ಕ ಕಲ್ಪಿಸಬಾರದು. ಆದಾಗ್ಯೂ, ಈ ಸೌಲಭ್ಯ ಕಲ್ಪಿಸಿದರೆ, ಸ್ವಯಂ ನ್ಯಾಯಾಂಗ ನಿಂದನೆಯಾಗುತ್ತದೆ ಎಂಬುದು ಸೇರಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು 2024ರಲ್ಲಿ ಹೊರಡಿಸಿದೆ. ಆದ್ರೆ, ಅದಕ್ಕೂ ಮೊದಲು ಮನೆ ಕಟ್ಟಿಕೊಂಡವರ ಕಥೆ? ಈ ಸಂಬಂಧ ಬೆಂಗಳೂರಿನ ವ್ಯಕ್ತಿಯೋರ್ವರು ಟಿವಿ9 ಡಿಜಿಟಲ್ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬೆಸ್ಕಾಂ ಟೆಂಪರರಿ ಕನೆಕ್ಷನ್ ಇರೋರಿಗೆ ಯೂನಿಟ್ ಗೆ ಇರುವ 10.50 ರೂಪಾಯಿ ದರವಾದರೂ ಇಳಿಸಲಿ ಬೆಂಗಳೂರಲ್ಲಿ ಮನೆ ನಿರ್ಮಾಣ ಆದ ನಂತರ ಒಸಿ (ಆಕ್ಯುಪೆನ್ಸಿ ಸರ್ಟಿಫಿಕೇಟ್), ಸಿಸಿ (ಕಂಪ್ಲೀಷನ್ ಸರ್ಟಿಫಿಕೇಟ್) ಇಲ್ಲದಿದ್ದಲ್ಲಿ ಬೆಸ್ಕಾಂನಿಂದ ವಿದ್ಯುತ್ ಸೇವೆ ಸಿಗುವುದಿಲ್ಲ ಎಂಬ ನಿಯಮ ಬಂದು, ಮೂರು ತಿಂಗಳಾಗಿದೆ. ಇದುವರೆಗೆ ಇದಕ್ಕೆ ಪರಿಹಾರ ಏನು ಎಂಬ ಸುಳಿವು ಸಿಕ್ಕಿಲ್ಲ. ಸುಪ್ರೀಂ ಕೋರ್ಟ್ ನಿಂದ ಆದೇಶ ಬಂದಿರುವುದರಿಂದ ನಾವು ಕಡ್ಡಾಯವಾಗಿ ನಿಯಮ ಪಾಲನೆ ಮಾಡಬೇಕಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಅಸಹಾಯಕತೆಯನ್ನು ಹೇಳಿಕೊಳ್ಳುತ್ತಾರೆ ವಿನಾ ಈಗಾಗಲೇ ಮನೆ ಕಟ್ಟಿ ಮುಗಿಸಿ, ತಾತ್ಕಾಲಿಕ ಸಂಪರ್ಕದಲ್ಲಿಯೇ “ಗೃಹ ಪ್ರವೇಶ” ಮಾಡಿ, ಹಾಲು ಉಕ್ಕಿಸಿದವರ ಗತಿ ಏನು- ಸ್ಥಿತಿ ಏನು ಎಂಬ ಬಗ್ಗೆ ಆಲೋಚಿಸಿದಂತೆಯೇ ಕಾಣುವುದಿಲ್ಲ.
ನಮ್ಮದು ಬನಶಂಕರಿ ಮೂರನೇ ಹಂತದ ಹೊಸಕೆರೆಹಳ್ಳಿಯಲ್ಲಿ ಮನೆ ಇದೆ. ಈಚೆಗಷ್ಟೇ ಗೃಹಪ್ರವೇಶ ಮುಗಿಸಿ, ನಿಟ್ಟುಸಿರು ಬಿಡುವಷ್ಟರಲ್ಲಿಯೇ ಈ ಹೊಸ ಸಿಸಿ, ಒಸಿ ನಿಯಮದ ಬಗ್ಗೆ ತಿಳಿದುಬಂತು. ಬಿ ಖಾತಾ ಸ್ವತ್ತು ನಮ್ಮದು. ಆದ್ದರಿಂದ ಬೆಸ್ಕಾಂ ಸಂಪರ್ಕ ಸಿಗಲ್ಲ ಅನ್ನೋದು ಗೊತ್ತಾಯಿತು. ಮೂರು ಕಿಲೋವಾಟ್ ತಾತ್ಕಾಲಿಕ ಸಂಪರ್ಕದಲ್ಲಿಯೇ ಇದ್ದೇವೆ. ಜೂನ್ ತಿಂಗಳಲ್ಲಿ ನಲವತ್ಮೂರು ಯೂನಿಟ್ ಬಳಕೆ ಮಾಡಿದ್ದೇವೆ. ಅದಕ್ಕೆ ನಿಗದಿತ ಶುಲ್ಕ 600 ರೂಪಾಯಿ, ಪ್ರತಿ ಯೂನಿಟ್ ಗೆ 10.50 ರೂಪಾಯಿಯಂತೆ 43 ಯೂನಿಟ್ ಗೆ 451.50 ರೂಪಾಯಿ, ಇಂಧನ ಹೊಂದಾಣಿಕೆ ಶುಲ್ಕ 8.17 ರೂಪಾಯಿ, ಪಿ ಅಂಡ್ ಜಿ ಸರ್ ಚಾರ್ಜ್ 15.48 ರೂಪಾಯಿ, ತೆರಿಗೆ 40.64 ರೂಪಾಯಿ ಸೇರಿ ಒಟ್ಟು 1117 ರೂಪಾಯಿ ವಿದ್ಯುತ್ ಬಿಲ್ ಬಂದಿದೆ.
ತಾತ್ಕಾಲಿಕ ಸಂಪರ್ಕಕ್ಕಾಗಿ ನಾವು ಪಾವತಿಸಿದ್ದ ಡೆಪಾಸಿಟ್ ಶುಲ್ಕವನ್ನು ಈಗ ಬರುವ ವಿದ್ಯುತ್ ಬಿಲ್ ಗೆ ಮುರಿ ಹಾಕಿಕೊಳ್ಳುವ ಅವಕಾಶ ನಮಗಿಲ್ಲ. ಇನ್ನು ಅದೇ ಟೆಂಪೊರರಿ ಕನೆಕ್ಷನ್ ಜೊತೆಗೆ ಮುಂದುವರಿದಿರುವುದರಿಂದ ಪ್ರತಿ ಯೂನಿಟ್ ವಿದ್ಯುತ್ ಗೆ 10.50 ರೂಪಾಯಿ ದರ ಬೀಳುತ್ತದೆ. ಸರಾಸರಿ 120- 150 ಯೂನಿಟ್ ವಿದ್ಯುತ್ ಬಳಕೆ ಮಾಡಿದಲ್ಲಿ 1260ರಿಂದ 1575 ರೂಪಾಯಿ ವಿದ್ಯುತ್ ಶುಲ್ಕ ಹಾಗೂ ನಿಗದಿತ ಶುಲ್ಕ 600 ರೂಪಾಯಿ ಬರುತ್ತದೆ. ಇನ್ನು ವಿದ್ಯುತ್ ಬಳಕೆ ಕೂಡ ಯೂನಿಟ್ ಮಿತಿಯ ಆಧಾರದಲ್ಲೂ ದರದ ವ್ಯತ್ಯಾಸ ಆಗುತ್ತದೆ ಅನ್ನಿಸುತ್ತೆ. ಅಂದರೆ ಮೊದಲ ಐವತ್ತು ಯೂನಿಟ್ ವಿದ್ಯುತ್ ಬಳಕೆಗೆ ಇಷ್ಟು, ಆ ನಂತರದ ಐವತ್ತು ಯೂನಿಟ್ ಗೆ ಅನ್ನುವ ರೀತಿ ಹೀಗೆ.
ತಾತ್ಕಾಲಿಕ ಸಂಪರ್ಕ ಇರುವಂತೆಯೇ ಮನೆಗೆ ಶಿಫ್ಟ್ ಆಗಿ ಅಲ್ಲಿಯೇ ವಾಸ್ತವ್ಯ ಹೂಡಿರುವವರಿಗೆ ವಿದ್ಯುತ್ ಬಳಕೆ ಶುಲ್ಕ ಕಡಿಮೆ ಮಾಡುವಂತೆ ಹಾಗೂ ಟೆಂಪರರಿ ಕನೆಕ್ಷನ್ ಗಾಗಿ ಪಾವತಿಸಿದ ಡೆಪಾಸಿಟ್ ಹಣವನ್ನು ಈ ವಿದ್ಯುತ್ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಕ್ರಮ ತೆಗೆದುಕೊಂಡರೆ ಸಾಮಾನ್ಯ ಜನರಾದ ನಮ್ಮಂಥವರಿಗೆ ಅಷ್ಟರ ಮಟ್ಟಿಗೆ ಉಪಕಾರ ಮಾಡಿದಂತೆ ಆಗುತ್ತದೆ. ಒಂದು ಕಡೆ ಇ-ಖಾತಾ ಮಾಡಿಸಿಕೊಳ್ಳುವುದಕ್ಕೆ ಹೋದರೆ, ಅಲ್ಲಿ ಇ-ಪಿಐಡಿ ಜನರೇಟ್ ಆಗದೆ ಇರುವಂಥ ಅದೆಷ್ಟು ಸಾವಿರ ಆಸ್ತಿಗಳು ಇವೆ. ಅದೇ ಜನರೇಟ್ ಆಗದೆ ಇ-ಖಾತಾ ಮಾಡಿಸಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ. ಇನ್ನು ಇ- ಖಾತಾ ಇಲ್ಲದೆ ಆಸ್ತಿ ನೋಂದಣಿ ಆಗುವುದಿಲ್ಲವಂತೆ, ಇನ್ನು ಬರೀ ಬಿ ಖಾತಾ ಅಥವಾ ರೆವಿನ್ಯೂ ಆಸ್ತಿಗಳಿಗೆ ಸರ್ಕಾರದಿಂದ ನಕ್ಷೆ ಮಂಜೂರಾಗಲೀ, ಕಟ್ಟಡ ಪರವಾನಗಿ ಶುಲ್ಕ ಕಟ್ಟಿಸಿಕೊಳ್ಳುವುದಿಲ್ಲ. ಅದಿಲ್ಲ ಎಂದ ಮೇಲೆ ಈ ಒಸಿ, ಸಿಸಿ ಇದೆಲ್ಲ ದೂರದ ಮಾತಾಯಿತು. ಇವೆರಡೂ ಇಲ್ಲದೆ ಬಿಡಬ್ಲ್ಯುಎಸ್ ಎಸ್ ಬಿ ಹಾಗೂ ಬೆಸ್ಕಾಂನಿಂದ ಸಂಪರ್ಕ ದೊರೆಯುವುದಿಲ್ಲ.
ಇದಕ್ಕೆ ಸರಿಯಾದ ಪರಿಹಾರ ಏನು?
ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿರುವಂತೆ, ಬಿಬಿಎಂಪಿಯಿಂದ ಬಿ ಖಾತಾ ಸ್ವತ್ತುಗಳಿಗೆ ಎ ಖಾತಾ ನೀಡುವುದಕ್ಕೆ ಮುಂದಾಗುವ ಆಲೋಚನೆ ಇದೆಯಂತೆ. ಹಾಗೆ ಆದರೂ ಅದರಿಂದ ಖಾಲಿ ನಿವೇಶನ ಇರುವವರು ಮುಂದೆ ಕಟ್ಟಡ ನಕ್ಷೆ, ಪರವಾನಗಿ ಪಡೆಯಲು ಅನುಕೂಲವಾದೀತು. ಆದರೆ ಈಗ ಮನೆ ಕಟ್ಟಿ, ಹಾಗೆ ಮನೆ ಕಟ್ಟುವ ಮುನ್ನ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು, ಈಗ ಬೆಸ್ಕಾಂ ಸರ್ವೀಸ್ ಗೆ ಅರ್ಜಿ ಹಾಕಬೇಕಾದವರು, ಅರ್ಜಿ ಈಗಾಗಲೇ ಹಾಕಿರುವವರ ಸ್ಥಿತಿ ಏನು? ಅಷ್ಟೇ ಅಲ್ಲ, ಬಿಡಬ್ಲ್ಯುಎಸ್ಎಸ್ ಬಿ ಸಂಪರ್ಕ ಸಹ ದೊರೆಯುವುದಿಲ್ಲ.
ಒಸಿ, ಸಿಸಿ ಇಲ್ಲದೆ ಬೆಸ್ಕಾಂ ಸಂಪರ್ಕ ನೀಡಬಾರದು ಎಂಬುದು ಸುಪ್ರೀಂ ಕೋರ್ಟ್ ಆದೇಶ ಇರುವುದು ಹೌದು. ಆದರೆ ತಾತ್ಕಾಲಿಕ ಸಂಪರ್ಕ ಪಡೆದವರಿಗೆ ಅವರು ನೀಡಿದ ವಿದ್ಯುತ್ ಡೆಪಾಸಿಟ್ ಹಣದ ಹೊಂದಾಣಿಕೆಯನ್ನು ವಿದ್ಯುತ್ ಬಿಲ್ ಜೊತೆ ಮಾಡುವುದೇ ಇರಬಹುದು ಹಾಗೂ ಟೆಂಪರರಿ ಕನೆಕ್ಷನ್ ಎಂಬ ಕಾರಣಕ್ಕೆ ಯೂನಿಟ್ ಗೆ 10.50 ರೂಪಾಯಿಯಂತೆ ಶುಲ್ಕ ವಿಧಿಸುವುದರಿಂದ ವಿನಾಯಿತಿ ಕೊಡುವುದೇ ಇರಬಹುದು ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಾನವೀಯ ನೆಲೆಗಟ್ಟಿನಲ್ಲಿ ಆಲೋಚಿಸುವುದಕ್ಕೆ ಸಾಧ್ಯವಿದೆ ಅಲ್ಲವಾ?
ಇನ್ನು ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡುವ ಬಗ್ಗೆ ಬಿಬಿಎಂಪಿ ಆಲೋಚನೆ ಇದೆಯಲ್ಲಾ ಅದಕ್ಕೆ ಸರಿಯಾದ ಚೌಕಟ್ಟಿನಲ್ಲಿ ನೀತಿ- ನಿಯಮಾವಳಿಗಳು ರೂಪಿಸಿ, ಶುಲ್ಕ ನಿಗದಿ ಮಾಡಿ, ಬಿಬಿಎಂಪಿಯಿಂದ ಅದರ ಅನುಷ್ಠಾನ ಆಗುವುದಕ್ಕೆ ಅದೆಷ್ಟು ತಿಂಗಳು ಬೇಕಾಗುತ್ತದೋ ಹಾಗೂ ಅದರಿಂದ ಈ ಒಸಿ, ಸಿಸಿ ನಿಯಮಕ್ಕೆ ಹೇಗೆ ಸಹಕಾರಿ ಆಗುತ್ತದೋ ಆ ಭಗವಂತನೇ ಬಲ್ಲ. ಒಂದು ಸರ್ಕಾರಕ್ಕೆ ಜನ ಸಾಮಾನ್ಯರ ಬಾಧೆ- ನೋವು ಅರ್ಥವಾಗುವುದಕ್ಕೆ ಹಾಗೂ ಅದನ್ನು ಬಗೆಹರಿಸುವುದಕ್ಕೆ ಇಷ್ಟು ಸಮಯ ನಿಜವಾಗಲೂ ಬೇಕಾ?
ಹೀಗೆ ಬೆಂಗಳೂರಿನ ನಿವಾಸಿಯೊಬ್ಬರು ತಮಗಾಗುತ್ತಿರುವ ಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದೇ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಅದೆಷ್ಟು ಜನರು ಇದ್ದಾರೋ ? ಹೀಗಾಗಿ ಸರ್ಕಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಒಂದಕ್ಕೊಂದು ಪರ್ಮನೆಂಟ್ ಸಲ್ಯೂಷನ್ ಕಂಡುಹಿಡಬೇಕಿದೆ. ಈ ಮೂಲಕ ಮಾನವೀಯ ನೆಲೆಗಟ್ಟಿನಲ್ಲಿ ಕರುಣೆ ತೋರಬೇಕಿದೆ.
Published On - 10:24 pm, Fri, 4 July 25