ರನ್ಯಾ ರಾವ್ ಪ್ರಕರಣಕ್ಕೆ ಇಡಿ ಎಂಟ್ರಿ; ಹೊರ ಬಿತ್ತು ಹವಾಲಾ ದಂಧೆ
ದುಬೈನಿಂದ ಭಾರತಕ್ಕೆ ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಸಿಕ್ಕಿಬಿದ್ದಿದ್ದಾರೆ. ಈಗ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಆರಂಭಿಸಿದೆ. ಇಡಿ ಅಧಿಕಾರಿಗಳು ಬೆಂಗಳೂರಿನಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಇಸಿಐಆರ್ ದಾಖಲಾಗಿದೆ.

ದುಬೈನಿಂದ ಅಕ್ರಮವಾಗಿ ಭಾರತಕ್ಕೆ ಚಿನ್ನ ಸಾಗಣೆ ಮಾಡುತ್ತಿದ್ದ ಪ್ರಕರಣ ಬಗೆದಷ್ಟು ದೊಡ್ಡದಾಗುತ್ತಾ ಇದೆ. ಈ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅವರು ಸಿಕ್ಕಿ ಬಿದ್ದಿದ್ದಾರೆ. ಸದ್ಯ ಅವರ ವಿಚಾರಣೆ ನಡೆಯುತ್ತಿದೆ. ಈಗ ಈ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಎಂಟ್ರಿ ಆಗಿದೆ. ಹೌದು, ರನ್ಯಾ ಪ್ರಕರಣದಲ್ಲಿ ಈಗ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕೂಡ ತನಿಖೆ ಆರಂಭಿಸಿದ್ದಾರೆ. ಅಕ್ರಮ ಹಣ ವರ್ಗಾವಣೆಯ ಸುಳಿವು ಸಿಕ್ಕ ಕಾರಣದಿಂದ ಇಡಿ ಅಧಿಕಾರಿಗಳು ಪ್ರಕರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇಸಿಐಆರ್ ದಾಖಲು
ಇಷ್ಟು ದಿನ ರನ್ಯಾ ರಾವ್ ಕೇಸ್ನಲ್ಲಿ ಸಿಬಿಐ ಅಧಿಕಾರಿಗಳು ಹಾಗೂ ಡಿಆರ್ಐ ಅಧಿಕಾರಿಗಳು ಮಾತ್ರ ವಿಚಾರಣೆ ನಡೆಸುತ್ತಾ ಇದ್ದರು. ಈಗ ಕೇಸ್ನಲ್ಲಿ ಇಡಿಯಿಂದ ಇಸಿಐಆರ್ ದಾಖಲಾಗಿದೆ. ಇಸಿಐಆರ್ ಎಂದರೆ ಎನ್ಫೋರ್ಸ್ಮೆಂಟ್ ಕೇಸ್ ಇನ್ಫಾರ್ಮೇಷನ್ ರಿಪೋರ್ಟ್. ಅಕ್ರಮ ಹಣ ವರ್ಗಾವಣೆ ವಿಚಾರ ತಿಳಿದಿರುವುದರಿಂದ ಈ ಕೇಸ್ ದಾಖಲಾಗಿದೆ.
ಇಡಿ ದಾಳಿ
ಇಸಿಐಆರ್ ದಾಖಲಿಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬೆಂಗಳೂರಿನ ಹಲವು ಕಡೆ ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿರುವ ರನ್ಯಾ ರಾವ್ ಫ್ಲ್ಯಾಟ್ ಮೇಲೆ ಈ ದಾಳಿ ನಡೆದಿದ್ದು, ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಯಾವೆಲ್ಲ ಮಾಹಿತಿ ಸಿಕ್ಕಿದೆ ಎಂಬ ವಿಚಾರ ಇನ್ನಷ್ಟೇ ರಿವೀಲ್ ಆಗಬೇಕಿದೆ.
ಅಕ್ರಮ ಹಣ ವರ್ಗಾವಣೆ
ಗೋಲ್ಡ್ ಸ್ಮಗ್ಲಿಂಗ್ ವಿಚಾರದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿರೋದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹಾವಾಲಾ ದಂಧೆ ಮೂಲಕ ಭಾರತದಿಂದ ಹಣ ದುಬೈಗೆ ಹೋಗುತ್ತಿತ್ತು. ಬಳಿಕ ಚಿನ್ನದ ಗಟ್ಟಿ ರೂಪದಲ್ಲಿ ಬೆಂಗಳೂರಿಗೆ ವಾಪಸ್ ಬರುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ‘ನಮಗೆ ಯಾವ ಒತ್ತಡ?’; ರನ್ಯಾ ರಾವ್ ಕೇಸ್ನಲ್ಲಿ ಸಿಐಡಿ ತನಿಖೆ ಹಿಂಪಡೆದ ಬಗ್ಗೆ ಪರಮೇಶ್ವರ್ ಸ್ಪಷ್ಟನೆ
ತರುಣ್ ಮನೆ ಮೇಲೂ ದಾಳಿ
ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಎರಡನೇ ಆರೋಪಿ ತರುಣ್ ಕೊಂಡೂರು ರಾಜು ನಿವಾಸದ ಮೇಲೂ ಇಡಿ ದಾಳಿ ನಡೆದಿದೆ. ತರುಣ್ ರಾಜ್ ರನ್ಯಾ ಆಪ್ತ ಸ್ನೇಹಿತನಾಗಿದ್ದರು. ತೆಲುಗು ಸಿನಿಮಾದಲ್ಲಿ ಅವರು ಬ್ಯುಸಿ ಇದ್ದರು. ಮೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟನಾಗಿ ತರುಣ್ ರಾಜ್ ನಟಿಸಿದ್ದರು. ತೆಲುಗಿನಲ್ಲಿ ಇವರು ವಿರಾಟ್ ಎಂದೇ ಫೇಮ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:42 pm, Thu, 13 March 25