Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌಂದರ್ಯ ಸಾವಿನ ಬಗ್ಗೆ ಅನುಮಾನ: ನಟಿಯ ಪತಿ ಹೇಳಿದ್ದೇನು?

Soundarya Death: ನಟಿ ಸೌಂದರ್ಯ ನಿಧನದ ಬಗ್ಗೆ 20 ವರ್ಷದ ಬಳಿಕ ನೀಡಲಾಗಿರುವ ದೂರೊಂದು ಸಂಚಲನ ಸೃಷ್ಟಿಸಿದೆ. ನಟಿ ಸೌಂದರ್ಯ ಸಾವು ಅಪಘಾತವಲ್ಲ ಅದೊಂದು ಪೂರ್ವಯೋಜಿತ ಕೊಲೆ, ನಟ ಮೋಹನ್ ಬಾಬು ಅವರೇ ಉಪಾಯದಿಂದ ಸೌಂದರ್ಯ ಅವರನ್ನು ಕೊಂದಿದ್ದಾರೆ ಎಂದು ದೂರೊಂದು ದಾಖಲಾಗಿದೆ. ಈ ಬಗ್ಗೆ ಸೌಂದರ್ಯ ಅವರ ಪತಿ ಪ್ರತಿಕ್ರಿಯೆ ನೀಡಿದ್ದಾರೆ.

ಸೌಂದರ್ಯ ಸಾವಿನ ಬಗ್ಗೆ ಅನುಮಾನ: ನಟಿಯ ಪತಿ ಹೇಳಿದ್ದೇನು?
Soundarya Mohan Babu
Follow us
ಮಂಜುನಾಥ ಸಿ.
|

Updated on: Mar 13, 2025 | 12:52 PM

ನಟಿ ಸೌಂದರ್ಯ ಸಾವು 20 ವರ್ಷದ ಬಳಿಕ ಮತ್ತೆ ಸುದ್ದಿಗೆ ಬಂದಿದೆ. ಸೌಂದರ್ಯ 2004 ರಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ನಿಧನ ಹೊಂದಿದ್ದರು. ಸೌಂದರ್ಯ ಜೊತೆಗೆ ಅವರ ಸಹೋದರ ಸಹ ಅದೇ ದುರ್ಘಟನೆಯಲ್ಲಿ ನಿಧನ ಹೊಂದಿದ್ದರು. ಆದರೆ ಕೆಲ ದಿನದ ಹಿಂದಷ್ಟೆ ತೆಲಂಗಾಣದ ಖಮ್ಮಂ ಜಿಲ್ಲೆ, ಸತ್ಯನಾರಾಯಣಪುರ ಗ್ರಾಮದ ಎದುರುಗಟ್ಲ ಚಿಟ್ಟಿಬಾಬು ಎಂಬಾತ ಪೊಲೀಸರಿಗೆ ದೂರು ನೀಡಿದ್ದು, ಆಸ್ತಿಯ ಆಸೆಗಾಗಿ ನಟಿ ಸೌಂದರ್ಯ ಅನ್ನು ತೆಲುಗು ಚಿತ್ರರಂಗದ ದಿಗ್ಗಜ ನಟ ಮೋಹನ್ ಬಾಬು ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆ ಸುದ್ದಿ ಸಂಚಲನವಾಗಿ ಮಾರ್ಪಾಡಾಗಿದೆ. ಈ ಬಗ್ಗೆ ಸೌಂದರ್ಯ ಅವರ ಪತಿ ಜಿಎಸ್​ ರಘು ಪ್ರತಿಕ್ರಿಯೆ ನೀಡಿದ್ದಾರೆ.

ಕೆಲ ತೆಲುಗು ಮಾಧ್ಯಮಗಳು ಸೌಂದರ್ಯ ಅವರ ಪತಿ ಜಿಎಸ್​ ರಘು ಅವರ ಪ್ರತಿಕ್ರಿಯೆಯನ್ನು ಪ್ರಕಟಿಸಿದ್ದು, ‘ಮೋಹನ್ ಬಾಬು ಅವರು ಸೌಂದರ್ಯ ಅವರ ಕೊಲೆ ಮಾಡಿಸಿದ್ದಾರೆ ಎಂಬ ಆಧಾರ ಪೂರ್ಣವಾಗಿ ಸುಳ್ಳು, ಆಧಾರರಹಿತ’ ಎಂದಿದ್ದಾರೆ. ಮೋಹನ್ ಬಾಬು ಅವರು ಅಕ್ರಮವಾಗಿ ಸೌಂದರ್ಯ ಅವರ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬ ಆರೋಪವನ್ನೂ ತಳ್ಳಿ ಹಾಕಿರುವ ರಘು, ‘ಕಳೆದ ಕೆಲವು ದಿನಗಳಿಂದ ಹೈದರಾಬಾದ್‌ನಲ್ಲಿರುವ ಮೋಹನ್ ಬಾಬು ಮತ್ತು ಶ್ರೀಮತಿ ಸೌಂದರ್ಯ ಅವರ ಆಸ್ತಿಯ ಬಗ್ಗೆ ಸುಳ್ಳು ಸುದ್ದಿಗಳು ಹರಡುತ್ತಿದೆ. ಆಸ್ತಿಯ ಬಗ್ಗೆ ಹರಡಿರುವ ಆಧಾರರಹಿತ ಸುದ್ದಿಯನ್ನು ನಾನು ನಿರಾಕರಿಸುತ್ತೇನೆ. ಮೋಹನ್ ಬಾಬು, ನನ್ನ ಪತ್ನಿ ದಿವಂಗತ ಶ್ರೀಮತಿ ಸೌಂದರ್ಯ ಅವರಿಂದ ಅಕ್ರಮವಾಗಿ ಯಾವುದೇ ಆಸ್ತಿಯನ್ನು ವಶಪಡಿಸಿಕೊಂಡಿಲ್ಲ ಎಂದು ನಾನು ದೃಢೀಕರಿಸುತ್ತೇನೆ. ನನಗೆ ತಿಳಿದ ಮಟ್ಟಿಗೆ ನಾವು ಅವರೊಂದಿಗೆ ಯಾವುದೇ ಭೂ ವ್ಯವಹಾರಗಳನ್ನು ನಡೆಸಿಲ್ಲ’ ಎಂದಿದ್ದಾರೆ.

‘ಮೋಹನ್ ಬಾಬು ಅವರು ನನಗೆ 25 ವರ್ಷದಿಂದಲೂ ಪರಿಚಯ, ನಮ್ಮ ಕುಟುಂಬದೊಟ್ಟಿಗೆ ಅತ್ಯಾಪ್ತ ಬಂಧವನ್ನು ಅವರು ಹೊಂದಿದ್ದಾರೆ. ನನ್ನ ಪತ್ನಿ, ನನ್ನ ಭಾಮೈದ, ನನ್ನ ಅತ್ರೆ ಅವರುಗಳು ಸಹ ಮೋಹನ್ ಬಾಬು ಅವರ ಬಗ್ಗೆ ಅಪಾರ ಗೌರವ ಇರಿಸಿಕೊಂಡಿದ್ದರು. ವೈಯಕ್ತಿಕವಾಗಿ ನಾನು ಮೋಹನ್ ಬಾಬು ಅವರನ್ನು ಗೌರವಿಸುತ್ತೇನೆ. ಅವರ ಮೇಲೆ ಹೇರಲಾಗುತ್ತಿರುವ ಸುಳ್ಳು ಆರೋಪದ ಬಗ್ಗೆ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಸೌಂದರ್ಯ ಅವರ ಸಾವು ಅಪಘಾತವೇ ಹೊರತು ಮತ್ತೇನೂ ಅಲ್ಲ. ವಿನಾಕಾರಣ ಸುಳ್ಳು ಸುದ್ದಿ ಹರಡುವುದು ಬೇಡವೆಂದು ನಾನು ಮನವಿ ಮಾಡುತ್ತೇನೆ’ ಎಂದಿದ್ದಾರೆ ರಘು.

ಇದನ್ನೂ ಓದಿ:ನಟಿ ಸೌಂದರ್ಯ ಸಾವಿಗೆ ಮೋಹನ್​ ಬಾಬು ಕಾರಣ, ದೂರು ನೀಡಿದ ವ್ಯಕ್ತಿ

ಸೌಂದರ್ಯ ಅವರು 2004 ರಲ್ಲಿ ರಾಜಕೀಯ ಪಕ್ಷವೊಂದರ ಪರ ಪ್ರಚಾರಕ್ಕೆ ತೆರಳುವ ವೇಳೆ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ ಹೊಂದಿದರು. ಸೌಂದರ್ಯ ನಿಧನ ಹೊಂದಿದ ಸಮಯದಲ್ಲಿ ಅವರು ಮೋಹನ್ ಬಾಬು ಅವರ ಸಿನಿಮಾದಲ್ಲಿ ನಟಿಸುತ್ತಿದ್ದರು. ಈಗ ಎದುರುಗಟ್ಲ ಚಿಟ್ಟಿಬಾಬು ಎಂಬಾತ ನೀಡಿರುವ ದೂರಿನ ಅನ್ವಯ, ಸೌಂದರ್ಯ ಅವರು ಶಂಷಾಬಾದ್​ನಲ್ಲಿ ಖರೀದಿಸಿದ್ದ ಆರು ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ಮೋಹನ್ ಬಾಬು ಉಪಾಯವಾಗಿ ಸೌಂದರ್ಯ ಅವರನ್ನು ಕೊಲೆ ಮಾಡಿಸಿ ಆ ಜಮೀನನ್ನು ಅಕ್ರಮವಾಗಿ ತಮ್ಮ ವಶಕ್ಕೆ ತೆಗೆದುಕೊಂಡು ಅಲ್ಲಿಯೇ ಮನೆ ಸಹ ಕಟ್ಟಿಸಿದ್ದಾರೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ