ನಟಿ ಸೌಂದರ್ಯ ಸಾವಿಗೆ ಮೋಹನ್ ಬಾಬು ಕಾರಣ, ದೂರು ನೀಡಿದ ವ್ಯಕ್ತಿ
Mohan Babu: ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು ಟೈಮೇ ಸರಿಯಿಲ್ಲ. ಅವರ ಮಕ್ಕಳು ಆಸ್ತಿಗಾಗಿ ಹಾದಿ-ಬೀದಿಯಲ್ಲಿ ಜಗಳ ಮಾಡುತ್ತಿದ್ದಾರೆ. ಸ್ವತಃ ಅವರ ಮೇಲೆ ಪತ್ರಕರ್ತನ ಮೇಲೆ ಹಲ್ಲೆ ಮಾಡಿದ ಪ್ರಕರಣ ದಾಖಲಾಗಿದೆ. ಇದೀಗ ವ್ಯಕ್ತಿಯೊಬ್ಬ ಮೋಹನ್ ಬಾಬು ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ನಟಿ ಸೌಂದರ್ಯ ಹತ್ಯೆ ಮಾಡಿಸಿರುವುದು ಮೋಹನ್ ಬಾಬು ಎಂದಿದ್ದಾನೆ.

ತೆಲುಗು ಚಿತ್ರರಂಗದ ದಿಗ್ಗಜ ನಟ ಮೋಹನ್ ಬಾಬುಗೆ ಟೈಮ್ ಸರಿ ಇದ್ದಂತಿಲ್ಲ. ಒಂದರ ಹಿಂದೊಂದು ವಿವಾದಗಳು ಮೋಹನ್ ಬಾಬು ಕೊರಳನ್ನು ಸುತ್ತಿಕೊಳ್ಳುತ್ತಿವೆ. ಮೋಹನ್ ಬಾಬು ಮಕ್ಕಳ ಆಸ್ತಿ ವಿವಾದ ಬೀದಿಗೆ ಬಂದು ಬಹಳ ಸಮಯವಾಗಿದೆ. ಸ್ವಂತ ಮಗನೇ ಮೋಹನ್ ಬಾಬು ವಿರುದ್ಧ ದೂರು ದಾಖಲಿಸಿದ್ದಾರೆ. ಇದರ ನಡುವೆ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಪ್ರಕರಣವೂ ಮೋಹನ್ ಬಾಬು ವಿರುದ್ಧ ದಾಖಲಾಗಿದ್ದು, ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ. ಇದೆಲ್ಲದರ ನಡುವೆ ಇದೀಗ ಮೋಹನ್ ಬಾಬು ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಖ್ಯಾತ ನಟಿ ಸೌಂದರ್ಯ ಸಾವಿಗೆ ಮೋಹನ್ ಬಾಬು ಕಾರಣ ಎಂದು ಆರೋಪಿಸಿ ವ್ಯಕ್ತಿಯೊಬ್ಬ ದೂರು ನೀಡಿದ್ದಾನೆ.
ಖಮ್ಮಂ ಜಿಲ್ಲೆ, ಸತ್ಯನಾರಾಯಣಪುರ ಗ್ರಾಮದ ಎದುರುಗಟ್ಲ ಚಿಟ್ಟಿಬಾಬು ಹೆಸರಿನ ವ್ಯಕ್ತಿಯೊಬ್ಬ, ಮೋಹನ್ ಬಾಬು ವಿರುದ್ಧ ದೂರು ನೀಡಿದ್ದು, ಸೌಂದರ್ಯ ಸಾವಿಗೆ ಮೋಹನ್ ಬಾಬು ಕಾರಣ ಎಂದಿದ್ದಾರೆ. ಅಲ್ಲದೆ ಇದೀಗ ತಮ್ಮ ಜೀವಕ್ಕೆ ಸಹ ಮೋಹನ್ ಬಾಬು ಇಂದ ಬೆದರಿಕೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮೋಹನ್ ಬಾಬು ವಾಸವಾಗಿರುವ ಹೈದರಾಬಾದ್ನ ಜಲಪಲ್ಲಿ ಬಳಿಯ ಟೌನ್ಶಿಪ್ ಸೌಂದರ್ಯಾಗೆ ಸೇರಿದ್ದು, ಅಲ್ಲಿಂದ ಮೋಹನ್ ಬಾಬು ಅನ್ನು ಖಾಲಿ ಮಾಡಿಸಬೇಕು ಎಂದು ಮನವಿ ಮಾಡಿದ್ದಾರೆ ಚಿಟ್ಟಿಬಾಬು.
ದೂರಿನಲ್ಲಿ ಉಲ್ಲೇಖಿಸಿರುವಂತೆ, ಸೌಂದರ್ಯ ನಿಧನ ಹೊಂದಿದಾಗ ಮೋಹನ್ ಬಾಬು ಜೊತೆಗೆ ಶಿವ ಶಂಕರ ಸಿನಿಮಾದಲ್ಲಿ ನಟಿಸುತ್ತಿದ್ದರು. ಅದೇ ಸಮಯದಲ್ಲಿ ಅವರು ಶಂಷಾಬಾದ್ನ ಜಲ್ಪಲ್ಲಿ ಗ್ರಾಮದ ಬಳಿ ಆರು ಎಕರೆ ಜಮೀನು ಖರೀದಿ ಮಾಡಿದ್ದರು. ಆ ವಿಷಯವನ್ನು ಮೋಹನ್ ಬಾಬು ಬಳಿ ಸೌಂದರ್ಯ ಹೇಳಿಕೊಂಡಿದ್ದರು. ಆಗ ಮೋಹನ್ ಬಾಬು ಕಣ್ಣು ಆ ಆರು ಎಕರೆ ಜಮೀನಿನ ಮೇಲೆ ಬಿತ್ತು. ಮೋಹನ್ ಬಾಬು, ಆ ಜಮೀನನ್ನು ಸೌಂದರ್ಯ ಇಂದ ಖರೀದಿ ಮಾಡುವ ಪ್ರಯತ್ನ ಮಾಡಿದರು. ಅದಕ್ಕೆ ಸೌಂದರ್ಯ ಮತ್ತು ಅವರ ಅಣ್ಣ ಒಪ್ಪಲಿಲ್ಲ. ಹೀಗಾಗಿ ಮೋಹನ್ ಬಾಬು ಉಪಾಯವಾಗಿ ಸೌಂದರ್ಯ ಅವರನ್ನು ಹತ್ಯೆ ಮಾಡಿಸಿದ್ದಾರೆ. ಅದಾದ ಬಳಿಕ ಆ ಆರು ಎಕರೆ ಜಾಗವನ್ನು ಮೋಹನ್ ಬಾಬು ಅಕ್ರಮವಾಗಿ ತನ್ನ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಎದುರುಗಟ್ಲ ಚಿಟ್ಟಿಬಾಬು ಆರೋಪಿಸಿದ್ದಾರೆ.
ಇದನ್ನೂ ಓದಿ:ಪತ್ರಕರ್ತನ ಮೇಲೆ ಹಲ್ಲೆ ಮಾಡಿದ್ದಕ್ಕೆ ಕ್ಷಮೆ ಕೇಳಿದ ನಟ ಮೋಹನ್ ಬಾಬು
ದೂರು ನೀಡಿರುವ ಚಿಟ್ಟಿಬಾಬು ಮೋಹನ್ ಬಾಬು ವಿರುದ್ಧ ಪ್ರತಿಭಟನೆಯನ್ನು ಸಹ ಮಾಡುತ್ತಿದ್ದು, ಸೌಂದರ್ಯಗೆ ಸೇರಿದ ಜಮೀನಿನಲ್ಲಿ ಮೋಹನ್ ಬಾಬು ಮನೆ ಕಟ್ಟಿಕೊಂಡಿದ್ದು ಅವರನ್ನು ಅಲ್ಲಿಂದ ಖಾಲಿ ಮಾಡಿಸಿ ಆ ಜಮೀನನ್ನು ಸರ್ಕಾರ ವಶಕ್ಕೆ ಪಡೆದುಕೊಳ್ಳಬೇಕು. ಅಲ್ಲದೆ, ಮೋಹನ್ ಬಾಬು ಇಂದ ತನಗೂ ಜೀವ ಬೆದರಿಕೆ ಇದ್ದು, ತನಗೆ ಭದ್ರತೆ ನೀಡಬೇಕು. ಮೋಹನ್ ಬಾಬು ಇನ್ನೂ ಕೆಲವರ ಮೇಲೆ ದಾಳಿ ಮಾಡುವ ಯೋಜನೆಯಲ್ಲಿದ್ದು ಪೊಲೀಸರು ಎಚ್ಚರಿಕೆಯಿಂದ ಇರಬೇಕು ಎಂದು ಚಿಟ್ಟಿಬಾಬು ಮನವಿ ಮಾಡಿದ್ದಾರೆ.
ಕನ್ನಡತಿ ನಟಿ ಸೌಂದರ್ಯ, 2004 ರಂದು ಬೆಂಗಳೂರಿನ ಹೊರವಲಯದಲ್ಲಿ ನಡೆದ ಹೆಲಿಕಾಪ್ಟನ್ ಅಪಘಾತದಲ್ಲಿ ಮರಣ ಹೊಂದಿದರು. ರಾಜಕೀಯ ಪಕ್ಷವೊಂದರ ಪರವಾಗಿ ಚುನಾವಣೆ ಪ್ರಚಾರಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ನಟಿ ಸೌಂದರ್ಯ ನಿಧನ ಹೊಂದಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ