ಬಾಲಿವುಡ್ನ ಪ್ರತಿಭಾವಂತ ನಟನನ್ನು ತೆಲುಗಿಗೆ ಕರೆತಂದ ನಟಿ ಸಮಂತಾ
Samantha: ಸಮಂತಾ ಋತ್ ಪ್ರಭು ದಕ್ಷಿಣ ಭಾರತದ ಸ್ಟಾರ್ ನಟಿ ಆಗಿರುವ ಜೊತೆಗೆ ಪ್ರಭಾವಿ ನಟಿ ಸಹ ಹೌದು. ಬಾಲಿವುಡ್ನಲ್ಲೂ ಸಾಕಷ್ಟು ಒಳ್ಳೆಯ ಸಂಪರ್ಕ ಹೊಂದಿರುವ ನಟಿ ಸಮಂತಾ, ಬಾಲಿವುಡ್ನ ಪ್ರತಿಭಾವಂತ ಯುವ ನಟನಿಗೆ, ತಮ್ಮ ಪ್ರಭಾವ ಬಳಸಿ ತೆಲುಗು ಚಿತ್ರರಂಗದಲ್ಲಿ ಸಿನಿಮಾ ಸಿಗುವಂತೆ ಮಾಡಿದ್ದಾರೆ. ಒಳ್ಳೆಯ ನಟನಿಗೆ ಅವಕಾಶ ಕೊಡಿಸಲು ಸಮಂತಾ ಮಾಡಿರುವ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ.

ಸಮಂತಾ ಋತ್ ಪ್ರಭು (Samantha Ruth Prabhu) ಈಗ ಸ್ಟಾರ್ ನಟಿ ಮಾತ್ರವಲ್ಲ ಪ್ರಭಾವಿ ನಟಿ ಸಹ ಹೌದು. ಬಾಲಿವುಡ್ ಸಿನಿಮಾದವರು ದಕ್ಷಿಣ ಭಾರತದಲ್ಲಿ ಸಿನಿಮಾ ಪ್ರಚಾರಕ್ಕೆ ಬಂದಾಗ ಸಮಂತಾರನ್ನು ಅತಿಥಿಯಾಗಿ ಕರೆಸುತ್ತಾರೆ. ಸಮಂತಾಗೆ ಬಾಲಿವುಡ್ನಲ್ಲೂ ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಕಾಫಿ ವಿತ್ ಕರಣ್ಗೂ ಸಹ ಸಮಂತಾ ಹೋಗಿ ಬಂದಿದ್ದಾಗಿದೆ. ಒಟ್ಟಾರೆ ತೆಲುಗು, ತಮಿಳು, ಹಿಂದಿ ಚಿತ್ರರಂಗ ಮೂರರಲ್ಲೂ ಪ್ರಭಾವ ಹೊಂದಿದ್ದಾರೆ ನಟಿ ಸಮಂತಾ. ಇದೀಗ ತಮ್ಮ ಪ್ರಭಾವ ಬಳಸಿ, ಬಾಲಿವುಡ್ನ ಯುವ ಪ್ರತಿಭಾವಂತ ನಟನನ್ನು ತೆಲುಗು ಚಿತ್ರರಂಗಕ್ಕೆ ಕರೆತಂದಿದ್ದಾರೆ. ಆತನಿಗೆ ಸಿನಿಮಾ ಸಿಗುವಂತೆ ಮಾಡಿದ್ದಾರೆ.
ಆದರ್ಶ್ ಗೌರವ್, ಬಾಲಿವುಡ್ನ ನಟ. ‘ದಿ ವೈಟ್ ಟೈಗರ್’ ಸಿನಿಮಾದಲ್ಲಿನ ಅವರ ನಟನೆ ನೋಡಿ ಭೇಷ್ ಎನ್ನದವರೇ ಇಲ್ಲ. ಅದ್ಭುತವಾದ ನಟರಾಗಿದ್ದರು ಸಹ ಬಾಲಿವುಡ್ನಲ್ಲಿ ಹೆಚ್ಚು ಅವಕಾಶಗಳು ಅವರಿಗೆ ಸಿಗುತ್ತಿರಲಿಲ್ಲ. ಸಿಕ್ಕರೂ ಸಹ ಸಣ್ಣ-ಪುಟ್ಟ ಪಾತ್ರಗಳಷ್ಟೆ. ಪ್ರಮುಖ ಪಾತ್ರ ಸಿಕ್ಕ ಸಿನಿಮಾಗಳು ಉತ್ತಮ ಪ್ರದರ್ಶನ ಮಾಡುತ್ತಿರಲಿಲ್ಲ. ಈ ನಟನ ನಟನೆ ಕಂಡು ಬಹುವಾಗಿ ಮೆಚ್ಚಿದ್ದ ಸಮಂತಾ, ಇದೀಗ ಆದರ್ಶ್ ಗೌರವ್ ಅವರನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಅದೂ ತಮ್ಮ ಪ್ರಭಾವ ಬಳಸಿ.
ಆದರ್ಶ್ ಗೌರವ್ ಹೇಳಿಕೊಂಡಿರುವಂತೆ, ಅವರು ಸಮಂತಾರನ್ನು ‘ಸಿಟಾಡೆಲ್’ ವೆಬ್ ಸರಣಿಗೆ ಸಂಬಂಧಿಸಿದ ಪಾರ್ಟಿಯೊಂದರಲ್ಲಿ ಭೇಟಿ ಆಗಿದ್ದರಂತೆ. ಸಮಂತಾ, ತಮ್ಮ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದಾಗ, ತಮಗೆ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುವ ಆಸೆ ಇರುವುದಾಗಿ ಹೇಳಿಕೊಂಡಿದ್ದಾರೆ ನಟಿ ಸಮಂತಾ. ಕೂಡಲೇ ಸಮಂತಾ, ಕೆಲವು ತೆಲುಗು ನಿರ್ಮಾಣ ಸಂಸ್ಥೆಗಳಿಗೆ ಕರೆ ಮಾಡಿ, ಆಡಿಷನ್ ವ್ಯವಸ್ಥೆ ಮಾಡಿಸಿದರಂತೆ.
ಇದನ್ನೂ ಓದಿ:ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ನಟಿ ಸಮಂತಾ
ಆದರ್ಶ್ ಸಹ ಹೈದರಾಬಾದ್ಗೆ ಬಂದು ಕೆಲವು ಕಡೆ ಆಡಿಷನ್ ಕೊಟ್ಟಿದ್ದಾರೆ. ಮಾತ್ರವಲ್ಲದೆ, ಸಮಂತಾ, ತಮ್ಮ ಮ್ಯಾನೇಜರ್ ಅನ್ನು ಕೆಲ ದಿನಗಳ ಕಾಲ ಆದರ್ಶ್ ಜೊತೆಗೆ ಇರುವಂತೆ ಹೇಳಿ, ತೆಲುಗು ಚಿತ್ರರಂಗದ ಕೆಲ ಮುಖ್ಯ ಸಿನಿಮಾ ನಿರ್ದೇಶಕರು, ನಿರ್ಮಾಪಕರು, ಕಾಸ್ಟಿಂಗ್ ನಿರ್ದೇಶಕರು ಹಾಗೂ ನಟರನ್ನು ಭೇಟಿ ಮಾಡಿಸುವಂತೆ ಸೂಚಿಸಿದರಂತೆ. ಅಂತೆಯೇ ಸಮಂತಾರ ಮ್ಯಾನೇಜರ್, ಆದರ್ಶ್ ಅವರನ್ನು ಕರೆದುಕೊಂಡು ತೆಲುಗು ಚಿತ್ರರಂಗದ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿಸಿದ್ದಾರೆ. ಎಲ್ಲರ ಬಳಿಯೂ ಆದರ್ಶ್ಗೆ ಪಾತ್ರ ಇದ್ದರೆ ಕೊಡಿ ಎಂದು ಮನವಿ ಮಾಡಿದ್ದಾರೆ. ಅಂತೆಯೇ ಆದರ್ಶ್ ಸಹ ತಮ್ಮ ಆಡಿಷನ್ ದೃಶ್ಯಗಳನ್ನು, ಫೋಟೊಗಳನ್ನು ಸಹ ಪ್ರಮುಖರೊಟ್ಟಿಗೆ ಹಂಚಿಕೊಂಡಿದ್ದಾರೆ.
ಇದೀಗ ಆದರ್ಶ್ ಗೌರವ್ಗೆ ತೆಲುಗಿನ ಸಿನಿಮಾ ಒಂದರಲ್ಲಿ ನಟಿಸುವ ಅವಕಾಶ ದೊರೆತಿದೆ. ಬಾಬಾ ಶಶಾಂಕ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಆದರ್ಶ್ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಬಂಡವಾಳ ತೊಡಗಿಸುತ್ತಿರುವ ‘ಆರ್ಆರ್ಆರ್’ ಸಿನಿಮಾದ ನಿರ್ಮಾಪಕ ಡಿವಿ ದಯಾನಂದ್ ಅವರ ಪುತ್ರಿ. ಆದರ್ಶ್ ನಟನೆಯ ‘ಸೂಪರ್ ಬಾಯ್ಸ್ ಆಫ್ ಮಲೆಗಾವ್’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಚೆನ್ನಾಗಿದ್ದರೂ ಸಹ ಜನರ ಪ್ರೀತಿ ಗಳಿಸಲು ವಿಫಲವಾಗಿದೆ. ಈಗ ತೆಲುಗು ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಆದರ್ಶ್ ಇಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ