ವಿಮಾನ ಆಯ್ತು, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿ ಮೇಲೆ ಮೂತ್ರ ಮಾಡಿದ ಸಹ ಪ್ರಯಾಣಿಕ
ಯುವತಿಯು ಪೊಲೀಸರಿಗೆ ದೂರು ನೀಡಲು ನಿರಾಕರಿಸಿದರು. ಹೀಗಾಗಿ ಪ್ರಯಾಣವನ್ನು ಮುಂದುವರಿಸಿದೆವು ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ತಿಳಿಸಿದ್ದಾರೆ.
ಬೆಂಗಳೂರು: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿಚಾರ (Pee-gate) ಇತ್ತೀಚೆಗೆ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸೊಂದರಲ್ಲಿ (KSRTC Bus) ಅಂಥದ್ದೇ ವಿಲಕ್ಷಣ ವಿದ್ಯಮಾನ ನಡೆದಿದೆ. ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಹುಬ್ಬಳ್ಳಿ (Hubballi) ತಲುಪಿದಾಗ ಘಟನೆ ನಡೆದಿದೆ. ನಾನ್ ಎಸಿ ಸ್ಲೀಪರ್ ಬಸ್ ಅನ್ನು ಹುಬ್ಬಳ್ಳಿ ಸಮೀಪದ ಕಿರೇಸೂರು ಢಾಬಾದಲ್ಲಿ ನಿಲುಗಡೆ ಮಾಡಲಾಗಿತ್ತು. ಆಗ ಯುವತಿ ಸೀಟ್ನ ಬಳಿ ಬಂದ ಸುಮಾರು 32 ವರ್ಷ ವಯಸ್ಸಿನ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ್ದಾನೆ. ವಿಚಲಿತಗೊಂಡ ಯುವತಿ ಕಿರುಚಿದ್ದಾರೆ. ಇದನ್ನು ಕೇಳಿದ ಸಹ ಪ್ರಹಯಾಣಿಕರು, ಬಸ್ ಸಿಬ್ಬಂದಿ ಅತ್ತ ಧಾವಿಸಿ ಯುವಕನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಆತನನ್ನು ಅಲ್ಲಿಯೇ ಕೆಳಗಳಿಸಿ ಪ್ರಯಾಣ ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಯುವತಿಯು ಪೊಲೀಸರಿಗೆ ದೂರು ನೀಡಲು ನಿರಾಕರಿಸಿದರು. ಹೀಗಾಗಿ ಪ್ರಯಾಣವನ್ನು ಮುಂದುವರಿಸಿದೆವು ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ದೊರೆತಿದೆ. ಯುವತಿ ಪ್ರಕರಣ ದಾಖಲಿಸಲು ನಿರಾಕರಿಸಿದ್ದರಿಂದ ಪ್ರಯಾಣ ಮುಂದುವರಿಸಿರುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಹಿರಿ ವಿಭಾಗೀಯ ನಿಯಂತ್ರಕ ರಾಜೇಶ್ ಶೆಟ್ಟಿ ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಇದನ್ನೂ ಓದಿ: Pee Gate Incident: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಏರ್ ಇಂಡಿಯಾಗೆ 10 ಲಕ್ಷ ರೂ ದಂಡ ವಿಧಿಸಿದ ಡಿಜಿಸಿಎ
ಯುವತಿಯು ಆಸನ ಸಂಖ್ಯೆ 3ರಲ್ಲಿ ಇದ್ದರು. ಯುವಕ 28-29 ಸಂಖ್ಯೆಯ ಆಸನದಲ್ಲಿದ್ದ. ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿರುವುದಾಗಿಯೂ, ತಾನು ಮೆಕ್ಯಾನಿಕಲ್ ಎಂಜಿನಿಯರ್ ಎಂದು ತಿಳಿಸಿರುವುದಾಗಿಯೂ ಸಹ ಪ್ರಯಾಣಿಕರು ಹೇಳಿದ್ದಾರೆ. ಈ ವಿಚಾರ ಇನ್ನಷ್ಟೇ ದೃಢಪಡಬೇಕಿದೆ. ಯುವಕ ಮದ್ಯಪಾನದ ಅಮಲಿನಲ್ಲಿದ್ದ ಎಂದೂ ಕೆಲವು ಮೂಲಗಳು ಹೇಳಿವೆ. ಘಟನೆ ನಡೆದ ಕೂಡಲೇ ಬ್ಯಾಗ್ ಮತ್ತು ಆಸನವನ್ನು ಶುಚಿಗೊಳಿಸಿದ ಸಿಬ್ಬಂದಿ, ಘಟನೆಯಿಂದಾಗಿ ಆಘಾತಗೊಂಡಿದ್ದ ಯುವತಿಗೆ ಸುರಕ್ಷತೆ ಒದಗಿಸುವ ಭರವಸೆ ನೀಡಿದರು.
ಕಳೆದ ವರ್ಷ ನವೆಂಬರ್ 26 ರಂದು ಅಮೆರಿಕದ ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸುಮಾರು 70 ವರ್ಷದ ವೃದ್ಧೆ ಮೇಲೆ ಮುಂಬೈ ನಿವಾಸಿ ಎಸ್.ಮಿಶ್ರಾ ಎಂಬಾತ ಮೂತ್ರ ವಿಸರ್ಜನೆ ಮಾಡಿದ್ದ. ಈ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:49 am, Thu, 23 February 23