ತಿರುಪತಿ ಲಡ್ಡು ಪ್ರಕರಣ: ನಂದಿನಿ ಉತ್ಪನ್ನಗಳಿಗೆ ಬೇಡಿಕೆಯೋ ಬೇಡಿಕೆ!

Nandini Milk Products: ತಿರುಪತಿ ಲಡ್ಡು ವಿವಾದ ಮತ್ತೊಂದು ಕಡೆಯಲ್ಲಿ ಕರ್ನಾಟಕದ ಕೆಎಂಎಫ್​ನ ನಂದಿನಿ ಬ್ರಾಂಡ್​ಗೆ ಅನುಕೂಲವಾಯ್ತಾ? ಇಂಥದ್ದೊಂದು ಪ್ರಶ್ನೆ ಇದೀಗ ಮೂಡಿದೆ. ಇದಕ್ಕೆ ಕಾರಣವೂ ಇದೆ. ತಿರುಪತಿ ಲಡ್ಡು ವಿವಾದದಿಂದ ನಂದಿ ನಂದಿನಿಗೆ ಲಾಭವಾಗುತ್ತಿರೋದು ಹೇಗೆ? ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.

ತಿರುಪತಿ ಲಡ್ಡು ಪ್ರಕರಣ: ನಂದಿನಿ ಉತ್ಪನ್ನಗಳಿಗೆ ಬೇಡಿಕೆಯೋ ಬೇಡಿಕೆ!
ಸಾಂದರ್ಭಿಕ ಚಿತ್ರ
Edited By:

Updated on: Sep 26, 2024 | 11:20 AM

ಬಳ್ಳಾರಿ, ಸೆಪ್ಟೆಂಬರ್ 26: ತಿರುಪತಿ ಲಡ್ಡು ವಿವಾದ ಪರೋಕ್ಷವಾಗಿ ಕರ್ನಾಟಕದ ಕೆಎಂಎಫ್​ನ ನಂದಿನಿ ಬ್ರ್ಯಾಂಡ್​​​ಗೆ ನೆರವಾಯಿತಾ? ಹೀಗೊಂದು ಪ್ರಶ್ನೆ ಮೂಡಲು ಕಾರಣ ಇದೆ. ತಿರುಪತಿ ಲಡ್ಡು ವಿವಾದದ ಬಳಿಕ ನಂದಿನಿ ಹಾಲು ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಕರ್ನಾಟಕದ ಎಲ್ಲ ಮುಜರಾಯಿ ದೇಗುಲಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಜತೆಗೆ, ಎಲ್ಲ ದೇಗುಲಗಳ ಪ್ರಸಾದವನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲೂ ಸೂಚನೆ ನೀಡಿತ್ತು. ಇದರಿಂದಾಗಿ ನಂದಿನಿ ಹಾಲು ಮತ್ತು ಹಾಲಿನ‌ ಉತ್ಪನ್ನಗಳ ಬೇಡಿಕೆ ಹೆಚ್ಚಳವಾಗಿದೆ.

ಮತ್ತೊಂದೆಡೆ, ಕಲಬೆರಕೆ ತುಪ್ಪ ಮತ್ತು ಹಾಲಿನ ಉತ್ಪನ್ನಗಳ ಆತಂಕದಿಂದಾಗಿ ಜನರಲ್ಲಿಯೂ ನಂದಿನಿ ಹಾಲು ಮತ್ತು ನಂದಿನಿ ಉತ್ಪನ್ನಗಳ ಮೇಲೆ ಒಲವು ಹೆಚ್ಚಾಗಿದೆ ಎಂದು ನಂದಿನಿ ಮೂಲಗಳು ತಿಳಿಸಿವೆ.

ನಂದಿನಿ ಏಜನ್ಸಿಗೆ ಅರ್ಜಿ ಸಲ್ಲಿಕೆ ಹೆಚ್ಚಳ

ಇದೀಗ ನಂದಿನಿ ಏಜೆನ್ಸಿಗಳನ್ನು ತೆರೆಯಲು ಅರ್ಜಿ ಸಲ್ಲಿಸುವರರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಬಳ್ಳಾರಿ ರಾಬಕೋವಿ ಹಾಲು ಒಕ್ಕೂಟದ ಎಂಡಿ ಪೀರ‍್ಯಾ ನಾಯ್ಕ್ ತಿಳಿಸಿದ್ದಾರೆ. ಬೇಡಿಕೆ ಎಷ್ಟು ಹೆಚ್ಚಾದರೂ ಪೂರೈಕೆ ಮಾಡಲು ನಾವು ಸಿದ್ಧರಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಳ್ಳಾರಿ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರತಿ ದಿನ 2.20 ಲಕ್ಷ ಲೀಟರ್ ಹಾಲು ಖರೀದಿ ಮಾಡಲಾಗುತ್ತಿದೆ. ಪ್ರತಿ ದಿನಕ್ಕೆ 1.50 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತಿದ್ದೇವೆ. ಪ್ರತಿ ದಿನ 10 ಸಾವಿರ ಲೀಟರ್ ಮೊಸರು ಮಾರಾಟ ಮಾಡಲಾಗುತ್ತಿದೆ. ಪ್ರತಿ ದಿನ 500 ಕೆಜಿ ತುಪ್ಪ ಮಾರಾಟ ಮಾಡಲಾಗುತ್ತಿದೆ ಎಂದು ಪೀರ‍್ಯಾ ನಾಯ್ಕ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು! ತಿರುಪತಿ ಲಡ್ಡು ಪ್ರಕರಣದ ಬೆನ್ನಲ್ಲೇ ಅಲರ್ಟ್ ಆದ ಹಾಸನ ಜಿಲ್ಲಾಡಳಿತ

ಸದ್ಯ ತಿರುಪತಿ ತಿರುಮಲ ದೇಗುಲ ಆಡಳಿತ ಮಂಡಳಿ ಕೂಡ ಲಡ್ಡು ತಯಾರಿಕೆಗಾಗಿ ನಂದಿನಿ ತುಪ್ಪವನ್ನೇ ಬಳಸುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:19 am, Thu, 26 September 24