
ಬೆಂಗಳೂರು, ಅಕ್ಟೋಬರ್ 29: ಹೈಕಮಾಂಡ್ ತೀರ್ಮಾನಿಸಿದರೆ ಐದು ವರ್ಷ ಮುಖ್ಯಮಂತ್ರಿ ಆಗೀರುತ್ತೇನೆ ಎಂದು ಸಿದ್ದರಾಮಯ್ಯ (Siddaramaiah) ಹೇಳಿರುವುದು ನಾನಾ ಚರ್ಚೆಗೆ ಕಾರಣವಾಗಿದೆ. ಆದರೆ ಸಿದ್ದರಾಮಯ್ಯ ಬೆನ್ನಿಗೆ ನಿಂತಿರುವ ಅಹಿಂದ ನಾಯಕರು (Ahinda Leaders), ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ. ಯಾವ ಪವರ್ ಶೇರಿಂಗ್ ಚರ್ಚೆಯೂ ಇಲ್ಲ ಎನ್ನುತ್ತಿದ್ದಾರೆ. ಹಾಗೇನಾದರೂ ಇದ್ದರೆ ಎದ್ದಿರುವ ಗೊಂದಲ ಪರಿಹರಿಸಿ ಎಂದಿದ್ದಾರೆ.
ಅಧಿಕಾರ ಹಂಚಿಕೆ ಬಗ್ಗೆ ಯಾವುದೂ ತೀರ್ಮಾನವಾಗಿಲ್ಲ ಎಂದು ಸಿದ್ದರಾಮಯ್ಯ ಬಣದ ನಾಯಕರು ಹೇಳಿದ್ದಾರೆ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದಿವರಿಯುವುದು ಅನಿವಾರ್ಯ ಎಂಬ ದಾಳವೂ ಅಖಾಡದಲ್ಲಿ ಉರುಳಿದೆ. ಕೆಎನ್ ರಾಜಣ್ಣ ನೀಡಿದ್ದ ಹೇಳಿಕೆಗೆ ಯತೀಂದ್ರ ಸಿದ್ದರಾಮಯ್ಯ ದನಿಗೂಡಿಸಿದ್ದು, ಸಿದ್ದರಾಮಯ್ಯ ರಾಜ್ಯಕ್ಕೆ ಅನಿವಾರ್ಯ ಎಂದಿದ್ದಾರೆ.
ಸಿಎಂ ಹೇಳಿಕೆಯಲ್ಲಿ ಯಾವುದೇ ವ್ಯಾತ್ಯಾಸವಿಲ್ಲ ಎಂದಿರುವ ನಾಯಕರು, ಪ್ಲ್ಯಾನ್ ಬಿ ಕೂಡಾ ರೆಡಿ ಮಾಡಿಟ್ಟುಕೊಂಡಿದ್ದಾರೆ. ಒಂದು ವೇಳೆ ಹೈಕಮಾಂಡ್ ಮಟ್ಟದಲ್ಲಿ ಅಧಿಕಾರ ಹಂಚಿಕೆ ವಿಚಾರ ಚರ್ಚೆಗೆ ಬಂದರೆ, 2 ಅಸ್ತ್ರಗಳ ಪ್ರಯೋಗಕ್ಕೆ ಸಿಎಂ ಸಿದ್ದರಾಮಯ್ಯ ಬಣ ರೆಡಿ ಆಗಿದೆ.
ಸಿಎಂ ಸಿದ್ದರಾಮಯ್ಯ ಬಣ ಹೆಚ್ಚುವರಿ ಡಿಸಿಎಂ ಆಯ್ಕೆಗೆ ಪಟ್ಟು ಹಿಡಿಯುವ ಸಾಧ್ಯತೆಯಿದೆ. ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಾಯ ಮಾಡಲಿದೆ ಎನ್ನಲಾಗಿದೆ. ಈ 2 ವಿಷಯಗಳನ್ನು ಮುನ್ನಲೆಗೆ ತರಲು ಸಿಎಂ ಬಣ ಚಿಂತನೆ ನಡೆಸಿದ್ದು, ಸಂಪುಟ ಪುನಾರಚನೆ ವೇಳೆ ಹೆಚ್ಚುವರಿ ಡಿಸಿಎಂ ಆಯ್ಕೆಗೆ ಪಟ್ಟು ಹಿಡಿಯಲಿದೆ. ಸಮುದಾಯವಾರು ಡಿಸಿಎಂ ಸ್ಥಾನಕ್ಕೆ ಒತ್ತಡ ಹೇರುವ ಸಾಧ್ಯತೆ ಇದೆ. ಮುಂದಿನ ತಿಂಗಳ ದೆಹಲಿ ಭೇಟಿ ವೇಳೆ ಇದೇ ವಿಷಯ ಪ್ರಸ್ತಾಪ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಗಡುವಿನ ತನಕ ಮೌನವಾಗಿರಲು ಅವರು ನಿರ್ಧರಿಸಿದಂತಿದೆ. ಯಾಕೆಂದರೆ, ತಾನೆಷ್ಟು ನಿಷ್ಠನಾಗಿದ್ದೇನೆಂದು ಹೈಕಮಾಂಡ್ಗೆ ತೋರಿಸುವುದು ತಂತ್ರದ ಒಂದು ಭಾಗವಾಗಿರಬಹುದು. ಇದನ್ನೇ ವರಿಷ್ಠರ ಮುಂದಿಡುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ರಾಜಕೀಯದಲ್ಲಿ ಕೊನೆಯ ಸಮಯದಲ್ಲಿ ಆಡುವ ಮಾತುಗಳು ಬಹಳ ಮಹತ್ವ ಪಡೆಯುತ್ತವೆ. ಹೀಗಾಗಿಯೇ ತನ್ನ ಬೆಂಬಲಿಗರಿಗೂ ಡೆಡ್ಲೈನ್ ವರೆಗೆ ಸುಮ್ಮನಿರಿ ಎಂಬ ಸಂದೇಶ ಸಾರಿದ್ದಾರೆ.
ಇದನ್ನೂ ಓದಿ: ಹೈಕಮಾಂಡ್ ತೀರ್ಮಾನ ಮಾಡಿದ್ರೆ! ಸಿಎಂ ಸಿದ್ದರಾಮಯ್ಯ ದಿಢೀರ್ ಮಾತಿನ ವರಸೆ ಬದಲಿಸಿದ್ದೇಕೆ?
ಕುರ್ಚಿ ಆಟ ಕ್ಲೈಮ್ಯಾಕ್ಸ್‌ಗೆ ಬರುತ್ತಿದ್ದಂತೆಯೇ ತಂತ್ರ ಪ್ರತಿತಂತ್ರಗಳು ಜೋರಾಗಿಯೇ ನಡೆಯುತ್ತಿವೆ. ರಾಜಕೀಯ ಬತ್ತಳಿಕೆಯಲ್ಲಿರುವ ಹಳೇ ಪಟ್ಟುಗಳು ಜೀವ ಪಡೆದುಕೊಂಡಿವೆ.