ಆಳಂದ ಮತಗಳವು ಕೇಸ್ನಲ್ಲಿ ಸ್ಫೋಟಕ ತಿರುವು; ಆರೋಪಿಗಳಿಂದ 75 ಮೊಬೈಲ್ ನಂಬರ್​ಗಳ ದುರ್ಬಳಕೆ

ಆಳಂದ ವಿಧಾನಸಭಾ ಕ್ಷೇತ್ರದ ‘ವೋಟ್ ಚೋರಿ’ ಕೇಸ್‌ನಲ್ಲಿ ಎಸ್ಐಟಿ ಸ್ಫೋಟಕ ಮಾಹಿತಿ ಬಯಲು ಮಾಡಿದೆ. ಪ್ರತಿ ನಕಲಿ ಅರ್ಜಿಗೆ ₹80 ಪಾವತಿಯಾಗಿದ್ದು, 6,018 ನಕಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ನಾಲ್ವರ ಆರೋಪಿಗಳಿಂದ 75 ದುರ್ಬಲ ವರ್ಗದ ಜನರ ಮೊಬೈಲ್ ಸಂಖ್ಯೆಗಳ ದುರ್ಬಳಕೆಯಾಗಿದ್ದು, OTP ಬಳಸಿ ಮತದಾರರ ಹೆಸರು ಅಳಿಸಲು ಪ್ರಯತ್ನಿಸಲಾಗಿದೆ ಎಂದು ತಿನಿಖೆಯಿಂದ ತಿಳಿದುಬಂದಿದೆ.

ಆಳಂದ ಮತಗಳವು ಕೇಸ್ನಲ್ಲಿ ಸ್ಫೋಟಕ ತಿರುವು; ಆರೋಪಿಗಳಿಂದ 75 ಮೊಬೈಲ್ ನಂಬರ್​ಗಳ ದುರ್ಬಳಕೆ
ಆಳಂದ ಮತಗಳವು ಕೇಸ್ನಲ್ಲಿ ಸ್ಫೋಟಕ ತಿರುವು

Updated on: Oct 26, 2025 | 10:04 AM

ಕಲಬುರಗಿ, ಅಕ್ಟೋಬರ್ 26: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯ (Rahul Gandhi) ಮತಗಳವು (Vote Theft) ಆರೋಪವು ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಆಳಂದ (Aland) ವಿಧಾನಸಭಾ ಕ್ಷೇತ್ರದ ‘ವೋಟ್ ಚೋರಿ’ ಕೇಸ್‌ ತನಿಖೆ ಕೈಗೆತ್ತಿಕೊಂಡಿರುವ ಎಸ್​ಐಟಿ ಈಗ ಮತ್ತೊಮ್ಮೆ ಸ್ಫೋಟಕ ವಿಚಾರಗಳನ್ನು ಬಯಲು ಮಾಡಿದೆ. ಪ್ರತಿ ಮತದಾರನ ಹೆಸರು ಕೈ ಬಿಡಲು ಹಾಕಲಾಗಿದ್ದ ಒಂದು ಅರ್ಜಿಗೆ, ಡೇಟಾ ಸೆಂಟರ್‌ಗೆ 80 ರೂಪಾಯಿ ಪಾವತಿಯಾಗಿತ್ತು ಎಂಬ ವಿಚಾರ ಬಯಲಾಗಿದೆ. ಈ ಕೃತ್ಯಕ್ಕೆ ಸಮಾಜದ ದುರ್ಬಲ ವಿಭಾಗದವರ 75 ಮೊಬೈಲ್ ನಂಬರಗಳನ್ನು ಬಳಸಲಾಗಿದೆಯೆಂದು ಎಸ್ಐಟಿ ಹೇಳಿದೆ.

ನಾಲ್ವರು ಆರೋಪಿಗಳಿಂದ ಚುನಾವಣಾ ಆಯೋಗಕ್ಕೆ ಅಕ್ರಮ ಅರ್ಜಿ

ಮತದಾರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲು 6,018 ನಕಲಿ ಅರ್ಜಿಗಳು ಆನ್ಲೈನ್​ನಲ್ಲಿ ಸಲ್ಲಿಕೆಯಾಗಿದ್ದವು. ಈ ಕೃತ್ಯವನ್ನೆಸಗುವಲ್ಲಿ ಅಕ್ರಮ್, ಅಶ್ಫಾಕ್, ಮುಸ್ತಾಕ್ ಮತ್ತು ನದೀಮ್ ಎಂಬ ನಾಲ್ವರ ಕೈವಾಡವಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳು ನಿರುದ್ಯೋಗಿಗಳಾಗಿದ್ದು 25 ರಿಂದ 30 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಹೇಳಲಾಗಿದೆ. ಆರೋಪಿಗಳು ಡಾಟಾ ಸೆಂಟರ್ನಲ್ಲಿದ್ದ 5 ಕಂಪ್ಯೂಟರ್ಗಳ ಮೂಲಕ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಅಕ್ರಮವಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ವರು ಆರೋಪಿಗಳಲ್ಲಿ ಓರ್ವ ಆನ್‌ಲೈನ್ ರಾಜಕೀಯ ಸಮೀಕ್ಷಕ/ಮಾರ್ಗದರ್ಶಿ, ಇನ್ನೋರ್ವ ಡಾಟಾ ಆಪರೇಟರ್ ಆಗಿದ್ದು, ಉಳಿದ ಇಬ್ಬರು ಆನ್ಲೈನ್​ನಲ್ಲಿ ಅರ್ಜಿ ಸಲ್ಲಿಸುತ್ತಿದ್ದರು. ಮತಗಳ್ಳತನದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT), 6,018 ಅರ್ಜಿಗಳಿಗೆ ಲಾಗಿನ್ ಐಡಿಗಳನ್ನು ರಚಿಸಲು ದೇಶಾದ್ಯಂತದ ಸಮಾಜದ ದುರ್ಬಲ ವರ್ಗಗಳ ಜನರ 75 ಮೊಬೈಲ್ ಫೋನ್ ಸಂಖ್ಯೆಗಳನ್ನು ದುಷ್ಕರ್ಮಿಗಳು ಬಳಸಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ ಆಳಂದ ಮತಗಳವು ಕೇಸ್, SIT ತನಿಖೆಗೆ ಸ್ಫೋಟಕ ತಿರುವು: ಮತಪಟ್ಟಿಯಿಂದ ಹೆಸರು ತೆಗೆಯಲು ಡೀಲ್, ರಹಸ್ಯ ಬಯಲು

ಆರೋಪಿಗಳು 75 ಮೊಬೈಲ್ ಫೋನ್​ಗಳನ್ನು ಹ್ಯಾಕ್ ಮಾಡಿದ್ದಾರೆಯೇ ಎಂಬ ಶಂಕೆ

ಒನ್ ಟೈಮ್ ಪಾಸ್ವರ್ಡ್​ (OTP) ಇಲ್ಲದೇ ವೆಬ್ ಸೈಟ್ಗೆ ಲಾಗಿನ್ ಆಗುವುದು ಸಾಧ್ಯವಿರದ ಕಾರಣ ಈ ಎಲ್ಲಾ ಮೊಬೈಲ್ಗಳಿಂದ ವೆಬ್ಸೈಟ್ ಲಾಗಿನ್ ಆಗಲು ಹೇಗೆ ಸಾಧ್ಯವಾಯಿತು ಎಂಬುದರ ಕುರಿತು SIT ತನಿಖೆ ನಡೆಯುತ್ತಲೇ ಇದೆ. ಲಾಜಿಸ್ಟಿಕ್ಸ್‌ನಲ್ಲಿ ಅವರಿಗೆ ಸಹಾಯ ಮಾಡುವ ಜನರ ಜಾಲ ಇದ್ದಿರಬಹುದು, ಪ್ರತಿಯೊಂದು ಲಾಗಿನ್ ಅನ್ನು OTP ಬಳಸಿಯೇ ರಚಿಸಲಾಗಿದೆ. ಅವರು 75 ಮೊಬೈಲ್ ಫೋನ್‌ಗಳನ್ನು ಹ್ಯಾಕ್ ಮಾಡಿದ್ದಾರೆಯೇ ಎಂಬೆಲ್ಲಾ ಸಾಧ್ಯತೆಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಅಕ್ರಮ್, ನದೀಮ್ ಮತ್ತು ಮುಷ್ತಾಕ್​ರನ್ನು ಎಸ್‌ಐಟಿ ವಿಚಾರಣೆಗೆ ಒಳಪಡಿಸಿದ್ದು, ದುಬೈನಲ್ಲಿರುವ ಅಶ್ಫಾಕ್ನನ್ನು ವಿಚಾರಣೆಗಾಗಿ ವಾಪಸ್ ಕರೆತರಲು ಯೋಚಿಸುತ್ತಿದೆ. 2023 ರಲ್ಲಿ ಆಳಂದದಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧರಿಸಿ ಕಲಬುರಗಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದರು. ಇದೇ ಪ್ರಕರಣದ ವಿಚಾರಣೆಯ ನಂತರ ಅಶ್ಫಾಕ್ ದುಬೈಗೆ ತೆರಳಿದ್ದ ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಇಸಿಐ ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ