AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಳಂದ ಮತಗಳವು ಕೇಸ್, SIT ತನಿಖೆಗೆ ಸ್ಫೋಟಕ ತಿರುವು: ಮತಪಟ್ಟಿಯಿಂದ ಹೆಸರು ತೆಗೆಯಲು ಡೀಲ್, ರಹಸ್ಯ ಬಯಲು

ಕರ್ನಾಟಕ ಹಾಗೂ ದೇಶ ಮಟ್ಟದ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ ಮತಗಳ್ಳತನ ಆರೋಪ ಪ್ರಕರಣಕ್ಕೆ ಈಗ ದೊಡ್ಡ ತಿರುವು ದೊರೆತಿದೆ. ಆಳಂದ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಅಕ್ರಮಗಳ ಬಗ್ಗೆ ಎಸ್​ಐಟಿ ತನಿಖೆ ಚುರುಕುಗೊಂಡಿದ್ದು, ಮಹತ್ವದ ಮಾಹಿತಿ ಕಲೆಹಾಕಿದೆ. ಏನದು ಎಂಬ ಮಾಹಿತಿ ಇಲ್ಲಿದೆ.

ಆಳಂದ ಮತಗಳವು ಕೇಸ್, SIT ತನಿಖೆಗೆ ಸ್ಫೋಟಕ ತಿರುವು: ಮತಪಟ್ಟಿಯಿಂದ ಹೆಸರು ತೆಗೆಯಲು ಡೀಲ್, ರಹಸ್ಯ ಬಯಲು
ಸಾಂದರ್ಭಿಕ ಚಿತ್ರ
Ganapathi Sharma
|

Updated on: Oct 24, 2025 | 6:34 AM

Share

ಬೆಂಗಳೂರು, ಅಕ್ಟೋಬರ್ 24: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಸಿಡಿಸಿದ್ದ ಮತಗಳವು (Vote Theft) ಆರೋಪದ ಬಾಂಬ್, ರಾಜಕೀಯ ವಲಯದಲ್ಲಿ ಬಾರಿ ಸದ್ದು ಮಾಡಿತ್ತು. ಆಳಂದ (Aland) ವಿಧಾನಸಭಾ ಕ್ಷೇತ್ರದ ‘ವೋಟ್ ಚೋರಿ’ ಕೇಸ್‌ ತನಿಖೆ ಕೈಗೆತ್ತಿಕೊಂಡಿರುವ ಎಸ್​ಐಟಿ ಹಲವು ಸ್ಫೋಟಕ ವಿಚಾರಗಳನ್ನು ಬಯಲು ಮಾಡಿದೆ. ಮತದಾರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲು 6,018 ನಕಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಪ್ರಾಥಮಿಕ ತನಿಖೆ ವೇಳೆ, ಪ್ರತಿ ಹೆಸರು ಕೈ ಬಿಡಲು ಹಾಕಲಾಗಿದ್ದ ಒಂದು ಅರ್ಜಿಗೆ, ಡೇಟಾ ಸೆಂಟರ್‌ಗೆ 80 ರೂಪಾಯಿ ಪಾವತಿಯಾಗಿತ್ತು ಎಂಬ ವಿಚಾರ ಬಯಲಾಗಿದೆ.

4.8 ಲಕ್ಷ ರೂ. ಪಡೆದಿದ್ದ ಡೇಟಾ ಸೆಂಟರ್: ಅರ್ಜಿಗಳ ಸಲ್ಲಿಕೆಯಲ್ಲಿ ಸ್ಥಳೀಯ ಮೊಹಮ್ಮದ್ ಅಶ್ಫಾಕ್ ಶಾಮೀಲು

2023ರಲ್ಲಿ ಅಳಂದದಲ್ಲಿ ಮತಪಟ್ಟಿ ಹೆಸರು ತೆಗೆಯಲು 6,018 ಅರ್ಜಿಗಳ ಸಲ್ಲಿಕೆಯಾಗಿದ್ದವು. ಕಲಬುರಗಿ ಡೇಟಾ ಸೆಂಟರ್​ನಿಂದ 75 ಮೊಬೈಲ್ ನಂಬರ್​ಗಳನ್ನು ಬಳಸಿಕೊಂಡು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಡೇಟಾ ಸೆಂಟರ್​ನವನು ಪ್ರತಿ ಅರ್ಜಿಗೂ 80 ರೂ.ನಂತೆ 4.8 ಲಕ್ಷ ರೂ. ಪಡೆದಿದ್ದ. ಅರ್ಜಿಗಳ ಸಲ್ಲಿಕೆಯಲ್ಲಿ ಸ್ಥಳೀಯ ಮೊಹಮ್ಮದ್ ಅಶ್ಫಾಕ್ ಭಾಗಿಯಾಗಿದ್ದ. ಪ್ರಸ್ತುತ ಆರೋಪಿ ಮೊಹಮ್ಮದ್ ಅಶ್ಫಾಕ್ ದುಬೈನಲ್ಲಿದ್ದು, ತನಿಖೆ ಮುಂದುವರಿದಿದೆ.

ಬಿಜೆಪಿ ನಾಯಕರಿಂದಲೇ ಅಕ್ರಮ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

SIT ತನಿಖೆಯಲ್ಲಿನ ಸ್ಫೋಟಕ ಅಂಶಗಳು ಬಯಲಾಗಿದ್ದೇ ತಡ, ಸಚಿವ ಪ್ರಿಯಾಂಕ್ ಖರ್ಗೆ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಆಳಂದ ಮತಗಳ್ಳತನದ ಬಗ್ಗೆ ನಾವು ಹೇಳುತ್ತಿರುವುದನ್ನೇ ಎಸ್​ಐಟಿ ತನಿಖೆಯಲ್ಲಿ ದೃಢಪಡಿಸಿದೆ. ಎಲ್ಲಾ ತನಿಖೆಗಳು ಈಗ ಬಿಜೆಪಿ ನಾಯಕರು ಮತ್ತು ಅವರ ಸಹಚರರಿಂದ ನಡೆದ ಅಕ್ರಮವನ್ನು ಸೂಚಿಸುತ್ತವೆ. ಬಿಜೆಪಿಯ ವೋಟ್ ಚೋರಿ ಪ್ಲೇಬುಕ್‌ನ ಪ್ರತಿಯೊಂದು ಕೊಳಕು ತಂತ್ರ ಮತ್ತು ಕಾರ್ಯವೈಖರಿಯನ್ನು ಒಂದೊಂದಾಗಿ ಬಹಿರಂಗಪಡಿಸಲಾಗುವುದು. ಇದರ ಹಿಂದಿನ ಪ್ರತಿಯೊಬ್ಬ ವ್ಯಕ್ತಿಯನ್ನ ಹೊಣೆಗಾರರನ್ನಾಗಿ ಮಾಡಿ ಜೈಲಿನ ಹಿಂದೆ ಹಾಕಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: Votevibe Survey: ಮತಕಳವು ಬಗ್ಗೆ ರಾಹುಲ್​ ಗಾಂಧಿ ಗಂಭೀರ ಆರೋಪಕ್ಕೆ ಜನರು ಪ್ರತಿಕ್ರಿಯಿಸಿದ್ಹೇಗೆ?

ಸದ್ಯ ಪ್ರಮುಖ ಆರೋಪಿ ಮೊಹಮ್ಮದ್ ಅಶ್ಫಾಕ್ ಸೇರಿ ಮೂವರು ದುಬೈನಲ್ಲಿದ್ದು, ಅವರ ಬಂಧನದ ಬಳಿಕ ಮತ್ತಷ್ಟು ಸತ್ಯಾಸತ್ಯತೆ ಬಯಲಾಗಲಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ