ಎಲ್ಲೆಂದರಲ್ಲಿ ಕಸ ಎಸೆಯುತ್ತೀರಾ ಜೋಕೆ: ನಿಮ್ಮ ಮನೆ ಬಾಗಿಲಲ್ಲೇ ಸುರಿಯಬಹುದು ರಾಶಿ ರಾಶಿ ತ್ಯಾಜ್ಯ!
ಸಾಕಷ್ಟು ಜನ ಜಾಗೃತಿ ಬಳಿಕವೂ ಬೆಂಗಳೂರು ನಗರದಲ್ಲಿ ಖುಷಿ ಬಂದಂತೆ ಕಸ ಎಸೆದು ಹೋಗುವ ಪ್ರಕರಣಗಳು ನಿಂತಿಲ್ಲ. ಹೀಗಾಗಿ ಈ ವಿಚಾರದಲ್ಲಿ ಒಂದಿಷ್ಟು ಕಠಿಣ ಕ್ರಮಗಳನ್ನ ಕೈಗೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ. ಕಸ ಎಸೆಯುವವರ ಮನೆ ಬಾಗಿಲಲ್ಲೇ ಲೋಡ್ಗಟ್ಟಲೆ ಕಸ ಸುರಿಯಲು ತೀರ್ಮಾನಿಸಿದೆ. ಜೊತೆಗೆ ದಂಡವನ್ನೂ ವಿಧಿಸಲಿದೆ.

ಬೆಂಗಳೂರು, ಅಕ್ಟೋಬರ್ 26: ಎಲ್ಲೆಂದರಲ್ಲಿ ಕಸ ಎಸೆಯೋ ಅಭ್ಯಾಸ ಬೆಳೆಸಿಕೊಂಡಿದ್ದೀರಾ? ಹಾಗಿದ್ದಾರೆ ನಿಮ್ಮ ಮನೆ ಮುಂದೆಯೇ ಇನ್ನು ಲೋಡ್ಗಟ್ಟಲೆ ಕಸ ಬಂದು ಬೀಳಲಿದೆ. ಹೌದು, ಸಾಕಷ್ಟು ಜನಜಾಗೃತಿ ಬಳಿಕವೂ ಹಲವು ಮಂದಿ ತಮಗೆ ಖುಷಿ ಬಂದಲ್ಲಿ ಕಸ ಎಸೆದು ಹೋಗುವ ಅಭ್ಯಾಸ ಮುಂದುವರಿಸಿದ್ದಾರೆ. ಇಂತಹ ಪ್ರಕರಣಗಳ ಕಡಿವಾಣಕ್ಕೆ ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇಂತಹದ್ದೊಂದು ಕಠಿಣ ಕ್ರಮಕ್ಕೆ ಮುಂದಾಗಿದೆ. ಕಸ ಎಸೆಯುವವರ ಮನೆ ಮುಂದೆಯೇ ಕಸ ಸುರಿಯುವ ಜೊತೆಗೆ ದಂಡ ವಿಧಿಸಲು ತೀರ್ಮಾನಿಸಿದೆ.
ಕಸ ಎಸೆದು ಹೋಗುವುದನ್ನು ಮೊದಲು ಮಾರ್ಷಲ್ಗಳು ವಿಡಿಯೋ ಮಾಡಿಕೊಳ್ಳಲಿದ್ದಾರೆ. ಆ ಬಳಿಕ ಅಂತವರ ಮನೆಗಳನ್ನು ಶೀಘ್ರ ಪತ್ತೆಮಾಡಿ ಅವರ ಮನೆ ಮುಂದೆಯೇ ಕಸ ಸುರಿಯಲಾಗುತ್ತೆ. ಇಷ್ಟೇ ಅಲ್ಲ, ಮನೆ ಮುಂದೆ ಸರಿಯಲಾದ ಕಸದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲೂ ತೀರ್ಮಾನಿಸಲಾಗಿದ್ದು, ಆ ಮೂಲಕ ಕಸ ಎಸೆಯುವವರನ್ನು ಜಗಜ್ಜಾಹೀರಗೊಳಿಸಲು ಜಿಬಿಎ ಮುಂದಾಗಿದೆ. ವಿಂಗಡಣೆ ಮಾಡದ ತ್ಯಾಜ್ಯ, ಪ್ಲ್ಯಾಸ್ಟಿಕ್ ಮತ್ತು ಬಾಕ್ಸ್ಗಳನ್ನ ಎಸೆದು ಹೋಗುವವರ ವಿಡಿಯೋಗಳನ್ನ ದಾಖಲಿಸುವ ಕೆಲಸ ಈಗಾಗಲೇ ಆರಂಭವಾಗಿದ್ದು, ಕಳೆದ ಒಂದು ವಾರದಿಂದ ಈ ಬಗ್ಗೆ ಮಾರ್ಷಲ್ಗಳು ಕಾರ್ಯನಿರತರಾಗಿದ್ದಾರೆ. ಕಸ ಎಸೆದು ಹೋಗುವವರ ಮನೆಗಳನ್ನ ಸ್ಥಳೀಯ ಪೊಲೀಸರ ಜೊತೆಗೆ ಮಾರ್ಷಲ್ಗಳು ತಲುಪಲಿದ್ದು, ಅವರ ಮನೆ ಬಾಗಿಲಲ್ಲೇ ಕಸದ ಲೋಡ್ ಅನ್ನು ಹಾಕಲಾಗುತ್ತೆ. ಇದರ ಜೊತೆಗೆ ದಂಡವನ್ನೂ ವಿಧಿಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ಸ್ಲೋಚ್ ಹ್ಯಾಟ್ಗೆ ಕೊಕ್: ಅ 28ರಿಂದಲೇ ಕರ್ನಾಟಕ ಪೊಲೀಸರ ಕೈಸೇರಲಿವೆ ಹೊಸ ಟೋಪಿ
2-10 ಸಾವಿರ ರೂ.ವರೆಗೆ ದಂಡ
ಮನೆಮುಂದೆ ಸುರಿಯಲಾದ ಕಸವನ್ನ ಕೆಲ ಗಂಟೆಗಳ ಬಳಿಕ ತೆರವು ಮಾಡಲಾಗುತ್ತದೆ. ಆದರೆ 2 ರಿಂದ 10 ಸಾವಿರ ರೂಪಾಯಿಗಳ ವರೆಗಿನ ದಂಡವನ್ನು ಎಲ್ಲೆಂದರಲ್ಲಿ ಕಸ ಹಾಕುವವರು ಪಾವತಿಸಬೇಕು. ಈ ಬಗ್ಗೆ ತಕರಾರು, ವಾದ ಮಾಡುವಂತೆಯೂ ಇಲ್ಲ. ನಾವು ಕಸ ಎಸೆದಿಲ್ಲ ಎಂದರೂ ಮಾರ್ಷಲ್ ಗಳು ಅದಾಗಲೇ ಸೆರೆ ಹಿಡಿದ ನೀವು ಕಸ ಎಸೆಯುವ ವಿಡಿಯೋ ತೋರಿಸಲಿದ್ದಾರೆ. ಜನ ಜಾಗೃತಿ ಕೆಲಸಗಳ ಮೂಲಕ ನಗರದಲ್ಲಿದ್ದ 869 ಬ್ಲ್ಯಾಕ್ ಸ್ಪಾಟ್ಗಳನ್ನ 150ಕ್ಕೆ ಇಳಿಸುವಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ ಈಗಾಗಲೇ ಸಫಲವಾಗಿದೆ. ಈ ನಡುವೆ ನಗರವನ್ನು ಸ್ವಚ್ಛವಾಗಿ ಇರಿಸುವಂತೆ ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಕೂಡ ಸೂಚನೆ ನೀಡಿದ್ದಾರೆ. ಹೀಗಾಗಿ ಕಸ ಎಸೆಯುವವರ ವಿರುದ್ಧ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ಎಂದು BSWML ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕರೀಗೌಡ ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:20 am, Sun, 26 October 25




