ಬೆಂಗಳೂರು, (ಡಿಸೆಂಬರ್ 07): ದಂಪತಿ ಪರಸ್ಪರ ಸಮ್ಮತಿಯ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ ಸಹ ಹಿಂದೂ ವಿವಾಹ ಕಾಯ್ದೆ(hindu marriage act) ಸೆಕ್ಷನ್ 13ಬಿ ಪ್ರಕಾರ 18 ತಿಂಗಳು ಕಾಯಬೇಕು. ಹೌದು…ಇದೇ ರೀತಿ ಪ್ರಕರಣವೊಂದರ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್(Karnataka High Court), ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13ಬಿ ಅನ್ವಯ ದಂಪತಿ 18 ತಿಂಗಳ ಬಳಿಕವೇ ವಿಚ್ಚೇದನ ಪಡೆದುಕೊಳ್ಳಬಹುದು ಎಂದು ಆದೇಶಿಸಿದೆ.
ದಂಪತಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಮಾಡಿರುವ ನ್ಯಾಯಮೂರ್ತಿ ಕೆಎಸ್ ಮುದುಗಲ್ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್ ಅವರಿದ್ದ ವಿಭಾಗೀಯ ಪೀಠ, ದಂಪತಿಗೆ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರಕ್ಕೆ ತೆರಳುವಂತೆ ನಿರ್ದೇಶನ ನೀಡಿದೆ. ಅಲ್ಲದೇ ಮಧ್ಯಸ್ಥಿಕೆ ಕೇಂದ್ರವು ವಿಚಾರಣಾ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಬೇಕು. ಆ ವರದಿ ಆಧರಿಸಿ ವಿಚಾರಣಾ ನ್ಯಾಯಾಲಯವು ಕಾನೂನು ಪ್ರಕಾರ ವಿಚ್ಛೇದನ ಅರ್ಜಿಯನ್ನು ಇತ್ಯರ್ಥಪಡಿಸಬಹುದು ಎಂದು ತಿಳಿಸಿದೆ.
ಅರ್ಜಿದಾರ ದಂಪತಿ 2020ರ ನವೆಂಬರ್ 27ರಂದು ಮದುವೆಯಾಗಿದ್ದರು. ಆದ್ರೆ ಕೆಲ ಕಾರಣಾಂತರಗಳಿಂದ ದಂಪತಿ 2021ರ ಸೆಪ್ಟಂಬರ್‌ನಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಅಲ್ಲದೇ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿವಾಹ ವಿಚ್ಚೇದನ ಪಡೆದುಕೊಳ್ಳುವುದಾಗಿ ಅರ್ಜಿ ಸಲ್ಲಿಸಿದ್ದರು. ದಂಪತಿ ಪರಸ್ಪರ ಒಪ್ಪಿಗೆ ಮೇಲೆ ವಿಚ್ಛೇಧನ ಪಡೆಯುವುದಾಗಿ ಹೇಳಿದ್ದರು. ಆದರೆ ನ್ಯಾಯಾಲಯ ಮತ್ತೆ ಒಂದುಗೂಡುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ಮಾಡಿ ಎಂದು ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ವರ್ಗಾಯಿಸಿದ್ದರು.
ಮಧ್ಯಸ್ಥಿಕೆದಾರರು ಇಬ್ಬರ ನಡುವೆ ಸಹಮತ ಮೂಡಿಸಿ ಮತ್ತೆ ಒಗ್ಗೂಡಿಸಲು ಪ್ರಯತ್ನಿಸಿದರಾದರೂ ಅದು ಫಲ ನೀಡಲಿಲ್ಲ, ಇಬ್ಬರೂ ಮಧ್ಯಸ್ಥಿಗೆ ಗೈರು ಹಾಜರಾಗಿದ್ದರು. ಹಾಗಾಗಿ ಮಧ್ಯಸ್ಥಿಕೆ ಕೇಂದ್ರ ವರದಿಯನ್ನು ಸಲ್ಲಿಸಿತ್ತು. ಅದನ್ನು ಆಧರಿಸಿ ವಿಚಾರಣಾ ನ್ಯಾಯಾಲಯ, ದಂಪತಿಗೆ ಈ ಪ್ರಕರಣವನ್ನು ಮುನ್ನಡೆಸಲು ಆಸಕ್ತಿ ಇಲ್ಲಎಂದು ದಾಖಲಿಸಿ ಕೇಸ್ ವಜಾ ಮಾಡಿತ್ತು. ಅದನ್ನು ಪ್ರಶ್ನಿಸಿ ಇಬ್ಬರೂ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ