ಬಿಜೆಪಿ ಪ್ರತ್ಯೇಕ ಬಣಕ್ಕೆ ದೆಹಲೀಲಿ ಅಮಿತ್ ಶಾ ಹೇಳಿದ್ದೇನು? ಕುಮಾರ್ ಬಂಗಾರಪ್ಪ ಏನಂದ್ರು ನೋಡಿ

ಬಿಜೆಪಿ ಪ್ರತ್ಯೇಕ ಬಣ ದೆಹಲಿಗೆ ತೆರಳಿ ಹೈಕಮಾಂಡ್​​ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಆ ಬಗ್ಗೆ ಕುಮಾರ್ ಬಂಗಾರಪ್ಪ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ಕರ್ನಾಟಕ ಬಿಜೆಪಿಗೆ ಅಮಿತ್ ಶಾ ಅವರ ಸೂಚನೆ ಏನಿತ್ತು ಎಂಬುದನ್ನು ತಿಳಿಸಿದ್ದಾರೆ. ಈ ಮಧ್ಯೆ, ರಾಜ್ಯಾಧ್ಯಕ್ಷರ ಬದಲಾವಣೆಗೂ ಭಿನ್ನರ ಬಣ ಹೈಕಮಾಂಡ್​​ಗೆ ದೂರು ನೀಡಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಪ್ರತ್ಯೇಕ ಬಣಕ್ಕೆ ದೆಹಲೀಲಿ ಅಮಿತ್ ಶಾ ಹೇಳಿದ್ದೇನು? ಕುಮಾರ್ ಬಂಗಾರಪ್ಪ ಏನಂದ್ರು ನೋಡಿ
ಕುಮಾರ್ ಬಂಗಾರಪ್ಪ
Updated By: Ganapathi Sharma

Updated on: Dec 04, 2025 | 11:48 AM

ನವದೆಹಲಿ, ಡಿಸೆಂಬರ್ 4: ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ತಂಗಿರುವ ಕರ್ನಾಟಕ (Karnataka) ಬಿಜೆಪಿ (BJP) ಪ್ರತ್ಯೇಕ ಬಣದ ನಾಯಕರು ಹೈಕಮಾಂಡ್‌ ನಾಯಕರನ್ನು ಭೇಟಿಯಾಗಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್, ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ, ಡಾ. ಸುಧಾಕರ್‌ ಸೇರಿ ಹಲವಾರು ನಾಯಕರನ್ನು ಪ್ರತ್ಯೇಕ ಬಣದವರು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಹೈಕಮಾಂಡ್‌ಗೆ ಗಂಭೀರ ದೂರುಗಳನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ವಿಜಯೇಂದ್ರ ವಿರುದ್ಧ ಬಿಜೆಪಿ ಪ್ರತ್ಯೇಕ ಬಣದ ನಾಯಕರ ದೂರುಗಳೇನು?

ವಿಜಯೇಂದ್ರ ಪಕ್ಷದ ಹೋರಾಟಗಳನ್ನು ಸಮರ್ಪಕವಾಗಿ ನಡೆಸುತ್ತಿಲ್ಲ. ರಾಜ್ಯದ ಪ್ರಸಕ್ತ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸಂಘಟನೆ ಬಲಪಡಿಸುವಲ್ಲಿ ವಿಫಲರಾಗಿದ್ದಾರೆ. ಮಾಧ್ಯಮ ಹೇಳಿಕೆಗಳ ಮಟ್ಟಕ್ಕೆ ಮಾತ್ರ ಸೀಮಿತವಾಗಿದ್ದಾರೆ ಎಂದು ರೆಬೆಲ್‌ ತಂಡ ಹೈಕಮಾಂಡ್ ನಾಯಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದೆ ಎನ್ನಲಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಂತರಿಕ ಸಂಘರ್ಷ, ಸಿಎಂ ಬದಲಾವಣೆ ಗೊಂದಲ, ಕಬ್ಬು ಬೆಳೆಗಾರರ ಸಮಸ್ಯೆ, ಮೆಕ್ಕೆಜೋಳ ಸಮಸ್ಯೆ ಇತ್ಯಾದಿ ಪ್ರಮುಖ ಸಮಸ್ಯೆಗಳ ವಿರುದ್ಧ ರಾಜ್ಯ ಘಟಕ ಸಮರ್ಪಕ ಹೋರಾಟ ನಡೆಸಿಲ್ಲ ಎಂದು ಪ್ರತ್ಯೇಕ ಬಣದ ನಾಯಕರು ಹೇಳಿದ್ದಾರೆ.

ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಅಧ್ಯಕ್ಷರ ಬದಲಾವಣೆ ಅನಿವಾರ್ಯ ಎಂದು ಹೈಕಮಾಂಡ್‌ಗೆ ಆಗ್ರಹಿಸಿರುವ ಪ್ರತ್ಯೇಕ ಬಣದ ನಾಯಕರು, ಪಕ್ಷದ ಭವಿಷ್ಯಕ್ಕೆ ಹೊಸ ರಣತಂತ್ರ ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಅಮಿತ್ ಶಾ ಸೂಚನೆ ಬಗ್ಗೆ ಕುಮಾರ್ ಬಂಗಾರಪ್ಪ ಹೇಳಿದ್ದೇನು?


ರಾಜ್ಯಾಧ್ಯಕ್ಷರ ಬದಲಾವಣೆ ಹೋರಾಟದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರತ್ಯೇಕ ಬಣದ ನಾಯಕ ಕುಮಾರ್ ಬಂಗಾರಪ್ಪ, ಅದು ಕಳೆದ ಒಂದೂವರೆ ವರ್ಷದಿಂದ ನಡೆಯುತ್ತಿದೆ. ಅದರ ಬಗ್ಗೆ ಪದೇಪದೆ ಮಾತಾಡುವ ಕೆಲಸಕ್ಕೆ ಹೋಗಿಲ್ಲ. ನಾವು ಪ್ರಸ್ತುತ ರಾಜಕೀಯದತ್ತ ಗಮನ ಹರಿಸುತ್ತಿದ್ದೇವೆ ಎಂದಿದ್ದಾರೆ.

ಸಂಘಟನೆಯನ್ನು ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಬಲಪಡಿಸಬೇಕು ಎಂದು ಅಮಿತ್ ಶಾ ಸೂಚನೆ ಇದೆ. ನಿಮ್ಮ ಬೂತ್ ಅನ್ನು ಬಲಪಡಿಸಿ, ನಿಮ್ಮ ಮಂಡಲವನ್ನು ಸಿದ್ಧಪಡಿಸಿಕೊಳ್ಳಿ. ರಾಷ್ಟ್ರ ನಿರ್ಮಾಣಕ್ಕೆ ಮಂಡಲ ಮತ್ತು ಬೂತ್ ಮುಖ್ಯವೇ ಹೊರತು, ರಾಷ್ಟ್ರದ ರಾಜಕಾರಣವಲ್ಲ ಎಂದು ಶಾ ಹೇಳಿರುವುದಾಗಿ ಕುಮಾರ್ ಬಂಗಾರಪ್ಪ ಉಲ್ಲೇಖಿಸಿದ್ದಾರೆ. ಪಕ್ಷವು ಇದೇ ತತ್ವವನ್ನು ಅನುಸರಿಸುತ್ತಿದ್ದು, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಕಾರ್ಪೊರೇಷನ್ ಚುನಾವಣೆಗಳಿಗೆ ಬೂತ್ ಮಟ್ಟದಲ್ಲಿ ಸಿದ್ಧತೆ ನಡೆಸುತ್ತಿದೆ ಎಂದಿದ್ದಾರೆ.

ಮುಂದಿನ ಚುನಾವಣೆಗೆ 224 ಕ್ಷೇತ್ರಗಳನ್ನು ಸಿದ್ಧಪಡಿಸಲು ಸರಿಸುಮಾರು 300 ದಿನಗಳು ಮಾತ್ರ ಲಭ್ಯವಿವೆ. ಈ ಕಡಿಮೆ ಅವಧಿಯಲ್ಲಿ ಸಂಪೂರ್ಣ ಸಿದ್ಧತೆಯನ್ನು ಮಾಡುವತ್ತ ಗಮನ ಹರಿಸಲಾಗಿದೆ ಎಂದು ಕುಮಾರ್ ಬಂಗಾರಪ್ಪ ವಿವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ