ವಿಮಾನಗಳ ಹಾರಾಟದಲ್ಲಿ ವ್ಯತ್ಯಯ: ಪ್ರಯಾಣಿಕರ ಕ್ಷಮೆಯಾಚಿಸಿದ ಇಂಡಿಗೋ
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ಸ್ (FDTL), ಹವಾಮಾನ ಮತ್ತು ತಾಂತ್ರಿಕ ದೋಷಗಳಿಂದಾಗಿ 142 ಇಂಡಿಗೋ ವಿಮಾನಗಳು ರದ್ದಾಗಿವೆ ಅಥವಾ ವಿಳಂಬವಾಗಿವೆ. ಗ್ರಾಹಕರಿಗೆ ಆದ ತೊಂದರೆಗೆ ಇಂಡಿಗೋ ಸಂಸ್ಥೆ ಕ್ಷಮೆಯಾಚಿಸಿ, ಪರಿಹಾರ ಕ್ರಮಗಳನ್ನು ಘೋಷಿಸಿದೆ.

ಬೆಂಗಳೂರು, ಡಿಸೆಂಬರ್ 04: ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟದಲ್ಲಿ ಬುಧವಾರವೂ ಭಾರಿ ವ್ಯತ್ಯಯ ಉಂಟಾಗಿದೆ. ಒಟ್ಟು 142 ಇಂಡಿಗೋ ವಿಮಾನಗಳ ಸಂಚಾರದಲ್ಲಿ ಅಡಚಣೆ ಉಂಟಾಗಿದ್ದು, ಆ ಪೈಕಿ ಕೆಲವು ವಿಳಂಬವಾದರೆ ಇನ್ನು ಕೆಲವು ವಿಮಾನಗಳು ರದ್ದಾಗಿವೆ. ಕಳೆದ ತಿಂಗಳಿಂದ ಜಾರಿಯಾಗಿರುವ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ಸ್ ಹಿನ್ನೆಲೆ ಪೈಲಟ್‌ಗಳು ಮತ್ತು ಸಿಬ್ಬಂದಿ ಡ್ಯೂಟಿಗೆ ಹಾಜರಾಗದಿರುವುದೇ ಹೆಚ್ಚಿನ ವ್ಯತ್ಯಯಗಳಿಗೆ ಕಾರಣ ಎನ್ನಲಾಗಿದೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL)ನ ಮೂಲಗಳ ಪ್ರಕಾರ, ಇಂಡಿಗೋ ಸಂಸ್ಥೆಯ ಒಟ್ಟು 42 ವಿಮಾನಗಳು ರದ್ದುಗೊಂಡಿವೆ. ಬೆಂಗಳೂರಿಗೆ ಬರಬೇಕಾಗಿದ್ದ ಒಂದು ವಿಮಾನದ ಮಾರ್ಗ ಬದಲಾಯಿಸಲಾಗಿದೆ. ಇನ್ನು, ಪೈಲಟ್‌ಗಳು ಕರ್ತವ್ಯಕ್ಕೆ ಹಾಜರಾಗದೆ ಇರುವ ಬಗ್ಗೆ ವರದಿಗಳು ಹರಿದಾಡುತ್ತಿದ್ದಂತೆ, ಇಂಡಿಗೋ ಸಂಸ್ಥೆ ಪ್ರಕಟಣೆ ಹೊರಡಿಸಿದೆ. ಕಳೆದ ಎರಡು ದಿನಗಳಿಂದ ಇಂಡಿಗೋ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಪ್ರಯಾಣಿಕರಿಗೆ ಉಂಟಾದ ಅಸೌಕರ್ಯಕ್ಕೆ ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿದೆ.
ಇದನ್ನೂ ಓದಿ: ಇಂಡಿಗೋ ವಿಮಾನ ಸಂಚಾರದಲ್ಲಿ ವ್ಯತ್ಯಯದಿಂದ ಪ್ರಯಾಣಿಕರ ಪರದಾಟ
ಅನಿರೀಕ್ಷಿತ ಕಾರ್ಯಾಚರಣಾ ಸವಾಲುಗಳು, ಸಣ್ಣ ತಾಂತ್ರಿಕ ದೋಷ, ಚಳಿಗಾಲದ ವೇಳಾಪಟ್ಟಿ ಬದಲಾವಣೆ, ಹವಾಮಾನ ವೈಪರೀತ್ಯ, ವಿಮಾನಯಾನ ವ್ಯವಸ್ಥೆಯ ಹೆಚ್ಚಿದ ವಾಹನ ದಟ್ಟಣೆ ಮತ್ತು ನವೀಕರಿಸಿದ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ ಜಾರಿ ಸೇರಿ ಕೆಲ ವಿಷಯಗಳು ನಮ್ಮ ವಿಮಾನಗಳ ಕಾರ್ಯಾಚರಣೆಯ ಮೇಲೆ ಪ್ರಭಾವ ಬೀರಿವೆ. ಅರ್ಹ ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡಲಾಗುತ್ತದೆ ಅಥವಾ ಪರ್ಯಾಯ ವಿಮಾನಗಳನ್ನು ಒದಗಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಏರ್ ಇಂಡಿಯಾ ವಿಮಾನಗಳ ಸಂಚಾರದಲ್ಲೂ ವ್ಯತ್ಯಯ
ಮಾಹಿತಿ ಪ್ರಕಾರ, ಬುಧವಾರ ಏರ್ ಇಂಡಿಯಾ ಎಕ್ಸ್ಪ್ರೆಸ್ನ 38 ವಿಮಾನಗಳ ಹಾರಾಟದಲ್ಲೂ ವ್ಯತ್ಯಯವಾಗಿದೆ. ವಿಮಾನದಲ್ಲಿ ಕೆಲ ಸಮಸ್ಯೆಗಳನ್ನು ಸಿಬ್ಬಂದಿ ಗಮನಿಸಿದ ಕಾರಣ ಮಂಗಳವಾರ ಮೂರು ವಿಮಾನಗಳು ಒಂದು ಗಂಟೆಗೂ ಹೆಚ್ಚು ತಡವಾಗಿ ಸಂಚರಿಸಿದ್ದವು. ವಿಮಾನಗಳನ್ನು ಗೇಟ್‌ಗೆ ಹಿಂದಕ್ಕೆ ಕರೆಸಿ ನಿರ್ವಹಣಾ ಸಿಬ್ಬಂದಿ ಪರಿಶೀಲನೆ ನಡೆಸಿ, ಬಳಿಕ ಸಂಚಾರಕ್ಕೆ ಅನುಮತಿ ನೀಡಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:36 am, Thu, 4 December 25




