
ಬೆಂಗಳೂರು: ರಾಜ್ಯವು ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿರುವ ಮಧ್ಯೆಯೇ ಗುಜರಾತ್ (Gujrat) ಸಹಕಾರಿ ಹಾಲು ಮಾರಾಟ ಒಕ್ಕೂಟ ಅಮುಲ್ನ (Amul) ಹಾಲು, ಮೊಸರು ಪೊಟ್ಟಣಗಳು ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಮಾರುಕಟ್ಟೆ ಪ್ರವೇಶಿಸಲು ಅಣಿಯಾಗುತ್ತಿವೆ. ಈ ವಿಚಾರವಾಗಿ ಟ್ವೀಟ್ ಮೂಲಕ ಅಮುಲ್ ಮಾಹಿತಿ ನೀಡಿದ್ದು, ಕೆಂಗೇರಿಯಿಂದ ವೈಟ್ಫೀಲ್ಡ್ ವರೆಗೆ ಅಮುಲ್ ಉತ್ಪನ್ನಗಳು ಲಭ್ಯವಾಗಲಿವೆ ಎಂಬ ಅರ್ಥ ಬರುವ ಪೋಸ್ಟರ್ ಅನ್ನು ಹಂಚಿಕೊಂಡಿದೆ. ‘ಹಾಲು ಮತ್ತು ಮೊಸರಿನ ತಾಜಾತನದ ಹೊಸ ಅಲೆ ಬೆಂಗಳೂರಿಗೆ ಬರುತ್ತಿದೆ. ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ದೊರೆಯಲಿದೆ’ ಎಂದು #LaunchAlert ಹ್ಯಾಷ್ಟ್ಯಾಗ್ನೊಂದಿಗೆ ಅಮುಲ್ ಟ್ವೀಟ್ ಉಲ್ಲೇಖಿಸಿದೆ. ಅಮುಲ್ ಹಾಗೂ ಕೆಎಂಎಫ್ ವಿಲೀನಕ್ಕೆ ಸಂಬಂಧಿಸಿ ಇತ್ತೀಚೆಗೆ ಸೃಷ್ಟಿಯಾಗಿದ್ದ ವಿವಾದದ ಕಾವು ತಣ್ಣಗಾಗುತ್ತಿರುವ ಮಧ್ಯೆಯೇ, ರಾಜ್ಯದ ಅತಿದೊಡ್ಡ ಬ್ರ್ಯಾಂಡ್ಗೆ ಪೈಪೋಟಿ ನೀಡಲು ಅಮುಲ್ ಮುಂದಾಗುವ ವಿಚಾರ ಬಹಿರಂಗವಾಗಿದೆ.
ಬೆಂಗಳೂರಿನಲ್ಲಿ ಅಮುಲ್ ಹಾಲು, ಮೊಸರಿನ ದರ ಎಷ್ಟಿರಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಸದ್ಯ ಬೆಂಗಳೂರಿನ ಹಾಲು, ಮೊಸರು ಮಾರುಕಟ್ಟೆಯಲ್ಲಿ ನಂದಿನಿಯೇ ಸಿಂಹಪಾಲು ಹೊಂದಿದೆ. ಹೀಗಾಗಿ ಅಮುಲ್ ಯಾವ ರೀತಿಯ ಮಾರಾಟ ತಂತ್ರ ಅನುಸರಿಸಲಿದೆ ಎಂಬ ಕುತೂಹಲ ಸೃಷ್ಟಿಯಾಗಿದೆ.
A new wave of freshness with milk and curd is coming
to Bengaluru. More information coming soon. #LaunchAlert pic.twitter.com/q2SCGsmsFP— Amul.coop (@Amul_Coop) April 5, 2023
ಬೆಂಗಳೂರಿನ ಹಾಲು, ಮೊಸರು ಮಾರುಕಟ್ಟೆಯಲ್ಲಿ ನಂದಿನಿ ಶೇ 70ರಷ್ಟು ಪಾಲು ಹೊಂದಿದ್ದು, ಇದರ ನೆರಳಿನಲ್ಲೇ ಇತರ ಕಂಪನಿಗಳು ಮಾರಾಟ ಮಾಡುವಂತಿದೆ ಪರಿಸ್ಥಿತಿ. ಅಮುಲ್ನ ಪ್ರಮುಖ ಮಾರುಕಟ್ಟೆಗಳಾದ ಮುಂಬೈ, ದೆಹಲಿಗಳಲ್ಲಿ ಮಾರುಕಟ್ಟೆಯು ಉಚ್ಛ್ರಾಯ ಸ್ಥಿತಿ ತಲುಪಿದ್ದು, ಅಥವಾ ಇನ್ನಷ್ಟು ವಿಸ್ತರಿಸುವುದು ಸಾಧ್ಯವಿಲ್ಲದಿರುವ ಕಾರಣ ಅಮುಲ್ ಬೆಂಗಳೂರಿನತ್ತ ಮುಖ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಅಮುಲ್ ಜತೆ ನಂದಿನಿ ವಿಲೀನ ಎನ್ನುವ ಅಮಿತ್ ಶಾ ಹೇಳಿಕೆ ಸುದ್ದಿಗೆ ಸ್ಪಷ್ಟನೆ ನೀಡಿದ ಸಿಎಂ ಬೊಮ್ಮಾಯಿ
ಕಳೆದ ಡಿಸೆಂಬರ್ನಲ್ಲಿ ಮಂಡ್ಯದ ಗೆಜ್ಜಲಗೆರೆ ಮೆಗಾ ಡೇರಿ ಉದ್ಘಾಟನೆ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೆಎಂಎಫ್ ಮತ್ತು ಅಮುಲ್ ಜತೆಯಾಗಿ ಸಾಗಿದರೆ ಸಹಕಾರಿ ಕ್ಷೇತ್ರದಲ್ಲಿ ಅದ್ಭುತವಾದದ್ದನ್ನು ಸಾಧಿಸಬಹುದು ಎಂದು ಹೇಳಿದ್ದರು. ಇದನ್ನು ಕೆಎಂಎಫ್ ಮತ್ತು ಅಮುಲ್ ವಿಲೀನಗೊಳಿಸುವ ಹುನ್ನಾರ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಸಾಮಾಜಿಕ ಮಾಧ್ಯಮಗಳಲ್ಲಿ ಅಮಿತ್ ಶಾ ಹೇಳಿಕೆ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಅಭಿಯಾನಗಳೂ ನಡೆದಿದ್ದವು. ಆದರೆ, ನಂತರದಲ್ಲಿ ರಾಜ್ಯ ಬಿಜೆಪಿ ನಾಯಕರು, ಸಚಿವರು ಕೆಎಂಎಫ್ ಮತ್ತು ಅಮುಲ್ ವಿಲೀನಗೊಳಿಸುವ ಪ್ರಸ್ತಾವ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಕೆಎಂಎಫ್ ಮತ್ತು ಅಮುಲ್ ವಿಲೀನ ಆಗಲಿದೆ ಎಂಬ ಸುದ್ದಿಯನ್ನು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಲ್ಲಗಳೆದಿದ್ದರು. ವಿಲೀನದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲೂ ಹೇಳಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದರು.
ಗುಜರಾತ್ನ ಅಮುಲ್ ಕಂಪನಿಯೊಂದಿಗೆ, ಕರ್ನಾಟಕ ಹಾಲು ಒಕ್ಕೂಟವನ್ನು ವಿಲೀನ ಮಾಡುವ ವಿಚಾರವಾಗಿ ಯಾವುದೇ ರೀತಿಯಾದ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಕೂಡ ಇತ್ತೀಚೆಗೆ ಸ್ಪಷ್ಟಪಡಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಅಮುಲ್ ಹಾಲು, ಮೊಸರು ಬೆಂಗಳೂರಿನ ಮಾರುಕಟ್ಟೆ ಪ್ರವೇಶಿಸುವ ಮಾಹಿತಿ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ