ಆನೆಕಲ್: ಕೊರೊನಾ ಎರಡನೇ ಅಲೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಹೀಗಿರುವಾಗಲೇ ಆನೆಕಲ್ ಗ್ರಾಮದಲ್ಲಿ ಜಾನುವಾರುಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಬಡ ಜನತೆಗೆ ಸಂಕಷ್ಟ ಎದುರಾಗಿದೆ. ಜಾನುವಾರುಗಳಲ್ಲಿ ಕೂಡ ಸಂಕ್ರಾಮಿಕ ರೋಗ ಕಾಣಿಸಿಕೊಂಡಿದ್ದು, ಒಂದರ ಮೇಲೆ ಒಂದರಂತೆ ಈ ಕಾಯಿಲೆ ಜಾನುವಾರುಗಳ ಪ್ರಾಣ ಬಲಿ ಪಡೆಯುತ್ತಿದೆ. ಬೆಂಗಳೂರು ಹೊರವಲಯ ಬನ್ನೇರುಘಟ್ಟ ಅರಣ್ಯದಂಚಿನ ಗ್ರಾಮವಾದ ಹಕ್ಕಿಪಿಕ್ಕಿ ಕಾಲೋನಿಯ ಜಾನುವಾರುಗಳಲ್ಲಿ ಕಾಲುಬಾಯಿ ರೋಗ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ತಲ್ಲಣ ಮೂಡಿಸಿದೆ.
ಹಕ್ಕಿಪಿಕ್ಕಿ ಕಾಲೋನಿ ಗ್ರಾಮದಲ್ಲಿ ಮೂವತ್ತಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರ ನಡುವೆ ಗ್ರಾಮದ ಹಸು, ಕುರಿ, ಮೇಕೆಗಳಲ್ಲಿ ಕಾಲು ಬಾಯಿ ರೋಗ ಕಾಣಿಸಿಕೊಂಡಿದೆ. ಕಾಲು ಬಾಯಿ ರೋಗದಿಂದ ಹತ್ತಕ್ಕೂ ಅಧಿಕ ದನಗಳು ಸಾವನ್ನಪ್ಪಿದ್ದು, ಇಪ್ಪತ್ತಕ್ಕೂ ಅಧಿಕ ದನಗಳು ಕಾಲುಬಾಯಿ ರೋಗಕ್ಕೆ ತುತ್ತಾಗಿ ಜರ್ಜರಿತವಾಗಿವೆ. ಆದರೆ ರೋಗ ಪೀಡಿತ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ಜತೆಗೆ ಈ ರೋಗದಿಂದಾಗಿ ಜಾನುವಾರುಗಳನ್ನೇ ನಂಬಿಕೊಂಡು ಬದುಕುತ್ತಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಹೀಗಾಗಿ ಈ ಕೂಡಲೆ ಸರಕಾರ ಈ ಕುರಿತು ಎಚ್ಚೆತ್ತುಕೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಜಾನುವಾರುಗಳಲ್ಲಿ ಕಂಡು ಬರುವ ಕಾಲುಬಾಯಿ ರೋಗ ಸಾಂಕ್ರಾಮಿಕ ರೋಗವಾಗಿದೆ. ಈ ರೋಗ ಬಂದರೆ ಸಾಮಾನ್ಯವಾಗಿ ಜಾನುವಾರುಗಳು ಆಹಾರ ನಿಲ್ಲಿಸುತ್ತವೆ. ಜತೆಗೆ ಅವುಗಳ ಕಾಲಿನ ಗೊರಸು ಕೊಳೆಯುತ್ತದೆ. ಈ ಲಕ್ಷಣಗಳು ಇದೀಗ ಗ್ರಾಮದ ಬಹುತೇಕ ರಾಸುಗಳಲ್ಲಿ ಕಾಣಿಸಿದ್ದು. ಅವುಗಳನ್ನ ಕಳೆದುಕೊಳುವ ಬೀತಿಯಲ್ಲಿ ಗ್ರಾಮಸ್ಥರು ಇದ್ದಾರೆ. ಅದರಲ್ಲೂ ಹಕ್ಕಿಪಿಕ್ಕಿ ಕಾಲೋನಿ ವಾಸಿಗಳು ತಮ್ಮ ಜಾನುವಾರುಗಳನ್ನು ಮೇಯಿಸಲು ಬನ್ನೇರುಘಟ್ಟ ಅರಣ್ಯ ಆಸುಪಾಸಿನಲ್ಲಿ ಬಿಡುತ್ತಾರೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳಿಗೆ ಈ ಸೋಂಕು ಹರಡುವ ಭೀತಿ ಸಹ ಇದ್ದು, ಈ ಮಾರಕ ಕಾಲುಬಾಯಿ ರೋಗ ಕಾಡು ಪ್ರಾಣಿಗಳಿಗೆ ತಗುಲಿದರೆ ವನ್ಯಜೀವಿಗಳನ್ನು ರಕ್ಷಣೆ ಮಾಡುವುದು ಕಷ್ಟವಾಗಲಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಸ್ಯಾಹಾರಿ ಸಫಾರಿ ಸಜ ಹಕ್ಕಿಪಿಕ್ಕಿ ಕಾಲೋನಿಗೆ ಹೊಂದಿಕೊಂಡಂತೆ ಇದ್ದು, ಒಂದು ವೇಳೆ ಸಸ್ಯಹಾರಿ ಸಫಾರಿಗೆ ಕಾಲುಬಾಯಿ ರೋಗ ಹರಡಿದರೆ ಅಪರೂಪದ ವನ್ಯಜೀವಿಗಳು ಬಲಿಯಾಗುವ ಸಾದ್ಯತೆ ಇದೆ. ಹಾಗಾಗಿ ಕೂಡಲೇ ಪಶುವೈದ್ಯರು ಕಾಲುಬಾಯಿ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಜನರನ್ನು ತಲ್ಲಣಗೊಳಿಸಿದ್ದು, ಇದೀಗ ಕಾಲುಬಾಯಿ ರೋಗ ಕಾಣಿಸಿಕೊಂಡು ಜಾನುವಾರುಗಳಿಗೆ ಮಾರಕವಾಗಿದೆ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕಾಲುಬಾಯಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಚಿಕಿತ್ಸೆ ಒದಗಿಸಬೇಕಿದೆ.
ಇದನ್ನೂ ಓದಿ:
ಬಹಿರಂಗವಾಯ್ತು ಆಶ್ಚರ್ಯಕರ ಸಂಗತಿ; ಕೊರೊನಾ ಸೋಂಕು ಪತ್ತೆ ಹಚ್ಚಬಲ್ಲದು ನಾಯಿ