AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್ ಜಿಲ್ಲೆಯ ಅಮರೇಶ್ವರ ಜಾತ್ರೆಯಲ್ಲಿ ಗಮನ ಸೆಳೆದ ಪಶು ಪ್ರದರ್ಶನ

ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ವಿವಿಧ ರಾಸುಗಳು ಬಂದು ಸೇರಿದ್ದವು. ರಾಸುಗಳ ಮೈ ತೊಳೆದು ವಿವಿಧ ಅಲಂಕಾರಿ ಗೊಂಡೆಗಳನ್ನು ಹಾಕಿ ರೈತರು ತಮ್ಮ ಪಶುಗಳ ಜೊತೆಗೆ ಪ್ರದರ್ಶನದಲ್ಲಿ ಭಾಗವಹಿಸಿದರು.

ಬೀದರ್ ಜಿಲ್ಲೆಯ ಅಮರೇಶ್ವರ ಜಾತ್ರೆಯಲ್ಲಿ ಗಮನ ಸೆಳೆದ ಪಶು ಪ್ರದರ್ಶನ
ಬೀದರ್​ನಲ್ಲಿ ಜಾನುವಾರು ಪ್ರದರ್ಶನ
preethi shettigar
|

Updated on: Mar 15, 2021 | 7:09 PM

Share

ಬೀದರ್: ರೈತರ ಜೀವನಾಡಿ ಎಂದೇ ಪರಿಗಣಿಸಲಾಗುವ ಹತ್ತಾರು ಜಾತಿಯ ಪಶುಗಳು ಒಂದೇ ಕಡೆ ನೋಡಲು ಸಿಕ್ಕರೆ ಅದಕ್ಕಿಂತ ಆನಂದ ಪಡುವ ವಿಚಾರ ಬೇರೆ ಇಲ್ಲ. ಈ ರೀತಿಯ ಅವಕಾಶವೊಂದು ಲಭ್ಯವಾಗಿದ್ದು, ಬೀದರ್ ಜಿಲ್ಲೆ ಔರಾದ್​ನ ಅಮರೇಶ್ವರ ಜಾತ್ರೆಯಲ್ಲಿ. ಇಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿದ್ದ ಪಶುಗಳಿದ್ದು, ಕೆಲವೊಂದು ಆಕಾರದಲ್ಲಿ ಅಜಾನುಬಾಹುವಾಗಿದ್ದರೆ, ಮತ್ತೆ ಕೆಲವು ಕಣ್ಣು ಕುಕ್ಕುವಂತಹ ಬಿಳಿ ಬಣ್ಣದ ಜಾನುವಾರುಗಳಿದ್ದವು.

ಕರ್ನಾಟಕದ ಕಿರೀಟ, ಗಡಿ ತಾಲೂಕು ಔರಾದ್​ನಲ್ಲಿ ಸುಪ್ರಸಿದ್ಧ ಅಮರೇಶ್ವರ ಉದ್ಭವ ಲಿಂಗ ಜಾತ್ರೆಯ ನಿಮಿತ್ತವಾಗಿ ಉತ್ತಮ ತಳಿಯ ಜಾನುವಾರು ಪ್ರದರ್ಶನವನ್ನ ಹಮ್ಮಿಕೊಳ್ಳಲಾಗಿತ್ತು. ನಗರದ ಎಪಿಎಂಸಿ ಜಾನುವಾರು ಮಾರುಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಜಾನುವಾರು ಜಾತ್ರೆ ಎಲ್ಲರ ಗಮನ ಸೆಳೆದಿದ್ದು, ಜಾತ್ರೆಯಲ್ಲಿ ಜರ್ಸಿ, ದೇವಣಿ, ಎಚ್‌.ಎಫ್‌, ಕಿಲಾರಿ, ಹಳ್ಳಿಕಾರ್ ತಳಿಯ ಹಸುಗಳು, ಜವಾರಿ ಎಮ್ಮೆ, ಗೌಳೇರ ಎಮ್ಮೆ, ಮೂರ್ರಾ ಜಾತಿಯ ಎಮ್ಮೆಗಳು ಹೆಚ್ಚಾಗಿ ಕಂಡು ಬಂದವು. ಸುಮಾರು ಹತ್ತಾರು ತಳಿಯ ಇನ್ನೂರಕ್ಕೂ ಹೆಚ್ಚು ಜಾನುವಾರು ಪ್ರದರ್ಶನದಲ್ಲಿ ಭಾಗವಹಿಸಿ ಗಮನ ಸೆಳೆದವು.

ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ವಿವಿಧ ಬಗೆಯ ರಾಸುಗಳು ಬಂದು ಸೇರಿದ್ದವು. ರಾಸುಗಳ ಮೈ ತೊಳೆದು ವಿವಿಧ ಅಲಂಕಾರಿ ಗೊಂಡೆಗಳನ್ನು ಹಾಕಿ ರೈತರು ತಮ್ಮ ಪಶುಗಳ ಜೊತೆಗೆ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಇದರ ಜೊತೆಗೆ ಉತ್ತಮ ರೀತಿಯಲ್ಲಿ ಪೋಷಣೆ ಮಾಡಿದ ರಾಸುಗಳಿಗೆ ಬಹುಮಾನವನ್ನು ಕೂಡ ಇಲ್ಲಿ ನೀಡಲಾಯಿತು.

cow show

ವಿವಿಧ ತಳಿಯ ಜಾನುವಾರಿಗಳು

ಜಾನುವಾರು ಸಾಕಾಣಿಕೆಗೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ ಪ್ರತಿ ವರ್ಷ ಜಾನುವಾರು ಪ್ರದರ್ಶನವನ್ನ ಇಲ್ಲಿ ಮಾಡಲಾಗುತ್ತದೆ. ಇಲ್ಲಿ ಭಾಗವಹಿಸಿದ ರೈತರಿಗೆ ಸೂಕ್ತ ಸಹಾಯವನ್ನು ಮಾಡಲಾಗುತ್ತದೆ ಎಂದು ಪಶು ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಹೇಳಿದ್ದಾರೆ.

cow show

ದೇಸಿ ತಳಿಯ ಎಮ್ಮೆ

ರೈತ ಸಮೂಹವನ್ನು ಹೈನುಗಾರಿಕೆಯತ್ತ ಸೆಳೆಯುವ ಉದ್ದೇಶದಿಂದ ಆಯೋಜಿಸಲಾಗಿದ್ದ ಜಾತ್ರೆಯಲ್ಲಿ ಹತ್ತಾರು ಬಗೆಯ ತಳಿಗಳ ಜಾನುವಾರು ಪ್ರದರ್ಶನಕ್ಕೆ ಲಭ್ಯವಿದ್ದವು. ಇನ್ನು ಅತ್ಯಧಿಕ ಪ್ರಮಾಣದಲ್ಲಿ ಹಾಲು ಕರೆಯುವ ಎಚ್‌ಎಫ್,‌ ಜರ್ಸಿ ಆಕಳು ಪ್ರದರ್ಶನ ಇಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು. ಒಂದು ಬಾರಿಗೆ 5 ರಿಂದ 6 ಲೀಟರ್ ಹಾಲು ಕೊಡುವ ಜಾನುವಾರುಗಳು ಇಲ್ಲಿ ಭಾಗವಹಿಸಿದ್ದವು. ಇಂತಹ ತಳಿಯನ್ನು ನೋಡಲು ಸಾಕಷ್ಟು ಜನರು ರೈತರು ಬಂದು ನೋಡಿ ಅವುಗಳ ಮಾಹಿತಿಯನ್ನ ಪಡೆದುಕೊಂಡಿದ್ದು, ವಿಶೇಷವಾಗಿತ್ತು.

cow show

ಅಮರೇಶ್ವರ ಉದ್ಭವ ಲಿಂಗ ಜಾತ್ರೆಯಲ್ಲಿ ಪಶು ಪ್ರದರ್ಶನ

ಆಹಾರ, ಪರಿಸರ, ರೋಗ ಹತೋಟಿ ಸೇರಿದಂತೆ ಇನ್ನಿತರ ಮಾಹಿತಿಯನ್ನು ಈ ಪ್ರದರ್ಶನದಲ್ಲಿ ನೀಡಲಾಯಿತು. ಇನ್ನು ಈ ಪ್ರದರ್ಶನದಲ್ಲಿ ಬೀದರ್​ನ ದೇಶಿ ತಳಿ ಎಂದೇ ಪ್ರಸಿದ್ಧಿ ಪಡೆದಿರುವ ದೇವಣಿ ತಳಿಗಳು ನೋಡಲು ದೈತ್ಯವಾದ ದೇಹ ಸುಂದರವಾದ ಆಕಾರ ಹೊಂದಿದ್ದು ಹಾಲು ಕೊಡಲು ಹಾಗೂ ರೈತರ ಹೊಲದಲ್ಲಿ ಉಳುಮೆ ಮಾಡಲು ಸಹ ಹೇಳಿ ಮಾಡಿಸಿದವುಗಳಾಗಿದ್ದು, ಎಲ್ಲರ ಗಮನ ಸೆಳೆದವು.

cow show

ಬಣ್ಣ ಬಣ್ಣದ ಉಡುಗೆ ತೊಟ್ಟ ಜಾನುವಾರುಗಳು

ಒಟ್ಟಾರೆಯಾಗಿ ಪ್ರತಿ ವರ್ಷ ನಡೆಯುವ ಈ ಜಾನುವಾರು ಪ್ರದರ್ಶನದಲ್ಲಿ ಭಾಗವಹಿಸುವ ಉದ್ದೇಶದಿಂದಲೇ ಕೆಲವು ರೈತರು ಜಾನುವಾರುಗಳನ್ನು ಉತ್ತಮವಾಗಿ ಬೆಳೆಸಿರುತ್ತಾರೆ. ಹೀಗಾಗಿ ಅಂತಹ ಜಾನುವಾರುಗಳನ್ನ ನೋಡಲೆಂದೇ ಜಿಲ್ಲೆಯ ನಾನಾ ಭಾಗದಿಂದ ರೈತರು ಆಗಮಿಸುತ್ತಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ರಾಜ್ಯ ಮಟ್ಟದ ಜೋಡಿ ಹಸುಗಳ ಗಾಡಿ ಓಟದ ಸ್ಪರ್ಧೆ: ಭಾಗವಹಿಸಿದವು 80 ಜೋಡಿ ಹಸುಗಳು