
ಬೆಂಗಳೂರು, ಜುಲೈ 9: ಕರ್ನಾಟಕದಾದ್ಯಂತ ಅನ್ನಭಾಗ್ಯ (Anna Bhagya) ಅಕ್ಕಿ ಪೂರೈಕೆ ಮಾಡಿದ ಲಾರಿ ಮಾಲೀಕರಿಗೆ ಕಳೆದ ಐದು ತಿಂಗಳಿನಿಂದ ಬಿಡುಗಡೆ ಮಾಡಬೇಕಿದ್ದ 260 ಕೋಟಿ ರೂ.ನಷ್ಟು ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಲಾರಿ ಮಾಲೀಕರ ಸಂಘ ಸೋಮವಾರದಿಂದ ಮುಷ್ಕರ ಆರಂಭಿಸಿತ್ತು. ಈ ಬಗ್ಗೆ ‘ಟಿವಿ9’ ನಿರಂತರವಾಗಿ ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ, ಎರಡು ದಿನಗಳಲ್ಲಿ ಹಣ ಸಂದಾಯ ಮಾಡುತ್ತೇವೆಂದು ಭರವಸೆ ನೀಡಿದ್ದರು. ಆದರೆ ಇದರಿಂದ ತೃಪ್ತರಾಗದ ಲಾರಿ ಮಾಲೀಕರು ನಮ್ಮ ಬ್ಯಾಂಕ್ ಅಕೌಂಟ್ಗೆ ಹಣ ಸಂದಾಯ ಆಗುವವರೆಗೂ ಮುಷ್ಕರ ವಾಪಸ್ಸು ಪಡೆಯಲ್ಲ ಎಂದು ಪಟ್ಟು ಹಿಡಿದು ಮುಷ್ಕರ ಮುಂದುವರಿಸಿದ್ದರು.
ಲಾರಿ ಮುಷ್ಕರದ ಕಾರಣ ಮಂಗಳವಾರ ಸಹ ಗೋದಾಮುಗಳಿಂದ ಸೊಸೈಟಿಗೆ ಹೋಗಬೇಕಿದ್ದ ಅಕ್ಕಿ ಮೂಟೆಗಳು ಪೂರೈಕೆ ಆಗಿರಲಿಲ್ಲ. ಇದರಿಂದ ಬಡವರು ದೊಡ್ಡ ಮಟ್ಟದಲ್ಲಿ ಸಮಸ್ಯೆ ಎದುರಿಸಲಿದ್ದಾರೆ ಎಂದು ತಿಳಿದುಕೊಂಡ ಸರ್ಕಾರ ಕೂಡಲೇ ಲಾರಿ ಮಾಲೀಕರಿಗೆ ಬಿಡುಗಡೆ ಮಾಡಬೇಕಿದ್ದ 260 ಕೋಟಿ ರೂ. ಹಣದಲ್ಲಿ 244.22 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಂಡಿದೆ. ಹಣ ಬಿಡುಗಡೆಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ರಾಜ್ಯ ಲಾರಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಜಿ.ಆರ್. ಷಣ್ಮುಗಪ್ಪ, ಮುಷ್ಕರ ಕೈಬಿಟ್ಟು ಅಕ್ಕಿ ಲೋಡ್ಗಳನ್ನು ಸೊಸೈಟಗಳಿಗೆ ಪೂರೈಕೆ ಮಾಡಲು ಲಾರಿ ಮಾಲೀಕರಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಅನ್ನಭಾಗ್ಯ ಆಹಾರ ಧಾನ್ಯ ಸಾಗಾಟ ಬಂದ್: ಸಾಗಾಣಿಕೆ ವೆಚ್ಚ 250 ಕೋಟಿ ರೂ. ಬಾಕಿ ಕೊಡದ ಸರ್ಕಾರ
ಒಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ ನಾಲ್ಕೈದು ತಿಂಗಳಿನಿಂದ ಅನ್ನಭಾಗ್ಯ ಅಕ್ಕಿ ಲೋಡ್, ಅನ್ಲೋಡ್ ಮಾಡಿದ್ದ ಲಾರಿ ಮಾಲೀಕರಿಗೆ ಕೊನೆಗೂ ಹಣ ಬಿಡುಗಡೆ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದು, ಲಾರಿ ಮಾಲೀಕರ ಅಕೌಂಟ್ಗೆ ಹಣ ಯಾವಾಗ ಜಮೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.