ಗೊಬ್ಬರ ಅಭಾವ ನಡುವೆ ರೈತರಿಗೆ ಮತ್ತೊಂದು ಆಘಾತ: ಯೂರಿಯಾ ಜತೆ ನ್ಯಾನೋ ಡಿಎಪಿ ಖರೀದಿ ಕಡ್ಡಾಯ

ಗೊಬ್ಬರಕ್ಕಾಗಿ ರೈತರು ಸಿಡಿದೆದ್ದಿದ್ದಾರೆ. ನ್ಯಾಯಬೆಲೆ ಅಂಗಡಿ ಬಳಿ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಮಣ್ಣು ತಿಂದು ಆಕ್ರೋಶ, ರಸ್ತೆ ತಡೆದು ರೋಷಾಗ್ನಿ ತೋರಿಸಿದ್ದಾರೆ. ರಾಜ್ಯದಲ್ಲಿ ರಸಗೊಬ್ಬರ ಗಲಾಟೆ ದೊಡ್ಡ ಕಿಚ್ಚು ಹೊತ್ತಿಸಿದೆ. ಇದರ ನಡುವೆ ನ್ಯಾನೋ ಯೂರಿಯಾ ಡಿಎಪಿ ಖರೀದಿ ಕಡ್ಡಾಯ ಮಾಡಿರುವುದು ರೈತರನ್ನು ಮತ್ತಷ್ಟು ಕೆರಳಿಸಿದೆ.

ಗೊಬ್ಬರ ಅಭಾವ ನಡುವೆ ರೈತರಿಗೆ ಮತ್ತೊಂದು ಆಘಾತ: ಯೂರಿಯಾ ಜತೆ ನ್ಯಾನೋ ಡಿಎಪಿ ಖರೀದಿ ಕಡ್ಡಾಯ
ಗೊಬ್ಬರ ಅಭಾವ ನಡುವೆ ರೈತರಿಗೆ ಮತ್ತೊಂದು ಆಘಾತ
Updated By: Ganapathi Sharma

Updated on: Jul 29, 2025 | 7:05 AM

ಬೆಂಗಳೂರು, ಜುಲೈ 29: ಕರ್ನಾಟಕದಲ್ಲಿ (Karnataka) ಯೂರಿಯಾ (Urea) ಗೊಬ್ಬರಕ್ಕಾಗಿ (Fertilizer Shortage) ರೈತರು ಪರದಾಡುತ್ತಿದ್ದಾರೆ. ಬಾಗಲಕೋಟೆಯಲ್ಲಿ‌ ಬೆಳಿಗ್ಗೆಯಿಂದ ಸಂಜೆ ವರೆಗೆ ರೈತರು ಸರದಿ ಸಾಲಿನಲ್ಲಿ ನಿಂತರೂ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಗೊಬ್ಬರ ಅಂಗಡಿ ಮಾಲೀಕರು ನ್ಯಾನೊ ಡಿಎಪಿ, ನ್ಯಾನೊ ಯೂರಿಯಾ ತೆಗೆದುಕೊಂಡರೆ ಮಾತ್ರ ಯೂರಿಯಾ ಕೊಡುವುದಾಗಿ ಹೇಳುತ್ತಿದ್ದಾರೆ‌. 1 ಚೀಲ ಯೂರಿಯಾ ಗೊಬ್ಬರಕ್ಕೆ 250 ರಿಂದ 300 ರೂ. ಕೊಟ್ಟು ಖರೀದಿಸುವುದಲ್ಲದೇ, ಹೆಚ್ಚುವರಿ ಆಗಿ 600 ರೂ. ಕೊಟ್ಟು ನ್ಯಾನೋ ಡಿಎಪಿ ಖರೀದಿಸುವ ಪರಿಸ್ಥಿತಿ ಬಂದಿದೆ. ಗೊಬ್ಬರದ ಅಂಗಡಿ ಮಾಲೀಕರ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.

ನ್ಯಾನೋ ಡಿಎಪಿ ಖರೀದಿ ಕಡ್ಡಾಯದಿಂದ ಸಂಕಷ್ಟ

ದಾವಣಗೆರೆ ಜಿಲ್ಲೆಯಲ್ಲಿ ಯೂರಿಯಾ ಖರೀದಿಸಿದರೆ ನ್ಯಾನೋ ಯೂರಿಯಾ ಖರೀದಿ ಕಡ್ಡಯ ಎನ್ನಲಾಗಿದೆ. 1 ಲಕ್ಷ ರೂ. ಮೊತ್ತದ ಯೂರಿಯಾ ಖರೀದಿ ಮಾಡಿದರೆ 90 ಸಾವಿರ ರೂಪಾಯಿ ಮೊತ್ತದ ನ್ಯಾನೋ ಯೂರಿಯವನ್ನು ಕೊಂಡುಕೊಳ್ಳಬೇಕಿದೆ. ಸರ್ಕಾರದ ನಿಯಮಕ್ಕೆ ರೈತರು ಮಾತ್ರವಲ್ಲ ಜಗಳೂರಲ್ಲಿ ಗೊಬ್ಬರದ ಅಂಗಡಿ ಮಾಲೀಕರು ಕೂಡ ಕಂಗಾಲಾಗಿದ್ದಾರೆ.

ಬಾಗಲಕೋಟೆಯಲ್ಲಿ ಈ ವರ್ಷ ಹೀಗಿದೆ ಬಿತ್ತನೆ

ಮತ್ತೊಂದೆಡೆ ಬಾಗಲಕೋಟೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ 3,19,907 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಮಾಡಲಾಗಿದೆ. ಅದರಲ್ಲಿ ಮಕ್ಕೆಜೋಳ 82 ಸಾವಿರ ಹೆಕ್ಟೇರ್, ಕಬ್ಬು 1,37,500 ಹೆಕ್ಟರ್, ಹೆಸರು 15 ಸಾವಿರ ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸದ್ಯ ಯೂರಿಯಾ 6,313 ಟನ್ ಲಭ್ಯವಿದೆ. ಜಿಲ್ಲೆಗೆ ಜುಲೈ ಅಂತ್ಯದ ವರೆಗೆ 30,750 ಮೆಟ್ರಿಕ್ ಟನ್ ಅವಶ್ಯಕತೆ ಇತ್ತು. ಪೂರೈಕೆ ಆಗಿದ್ದು 48,842 ಮೆಟ್ರಿಕ್ ಟನ್, 42,530 ಮೆಟ್ರಿಕ್ ಟನ್ ಮಾರಾಟ ಆಗಿದೆ.

ಬಿತ್ತನೆ ಪ್ರಮಾಣ ಹೆಚ್ಚು, ಬೇಡಿಕೆಯೂ ಹೆಚ್ಚು

ಈ ಬಾರಿ ಬಿತ್ತನೆ ಪ್ರಮಾಣ ಹೆಚ್ಚಾಗಿದೆ. ಮೆಕ್ಕೆಜೋಳ ಹೆಚ್ಚು ಬೆಳೆದಿದ್ದಾರೆ. ಇದರಿಂದ ಯೂರಿಯಾಗೆ ಹೆಚ್ಚು ಬೇಡಿಕೆ ಇದೆ. ಯೂರಿಯಾ ಗೊಬ್ಬರ ಕೊರತೆ ಇರುವುದು ನಿಜ. ಕೆಲವರು ರೈತರಿಗೆ ಹೆಚ್ಚುವರಿ ಗೊಬ್ಬರ ತೆಗೆದುಕೊಳ್ಳಲು ಒತ್ತಾಯ ಮಾಡಿರಬಹುದು. ಆದರೆ ನಾವು ಯೂರಿಯಾ ಜೊತೆ ಹೆಚ್ಚುವರಿಯಾಗಿ ನ್ಯಾನೋ ಡಿಎಪಿ ಹಾಕುವಂತೆ ಮನವಿ ಮಾಡುತ್ತಿದ್ದೇವೆ. ಇದರಿಂದ ಭೂಮಿ ಹಾಳಾಗುವುದಿಲ್ಲ, ಹೆಚ್ಚು ಯೂರಿಯಾ ಹಾಕಿದರೆ ಭೂಮಿ ಹಾಳಾಗುತ್ತದೆ ಎಂದು‌ ಮನವೊಲಿಕೆ ಮಾಡುತ್ತಿದ್​ದೇವೆ.
ರೈತರು ಒಪ್ಪಿದರೆ ಕೊಡುತ್ತಿದ್ದೇವೆ. ಬೇಡ ಎಂದವರಿಗೆ ಒತ್ತಾಯ ಮಾಡಿಲ್ಲ. ಬೇಡ ಎಂದವರಿಗೂ ಯೂರಿಯಾ ಗೊಬ್ಬರ ಕೊಡುತ್ತಿದ್ದೇವೆ. ಇಷ್ಟೊಂದು ಪ್ರಮಾಣದಲ್ಲಿ ಯೂರಿಯಾ ಕೊರತೆ ಸಮಸ್ಯೆ ಆಗಿರುವುದು ಇದೇ ಮೊದಲು. ಯೂರಿಯಾ ಕೊರತೆ ಒಂದು ಭಾಗ ನಿಜ. ಆದರೆ ರೈತರು ಭೂಮಿ ಫಲವತ್ತತೆ ಹಿನ್ನೆಲೆ ಬೇರೆ ಗೊಬ್ಬರ ಕೂಡ ಬಳಸಬೇಕು. ಹೆಚ್ಚು ಯೂರಿಯಾ ಹಾಕಬೇಡಿ ಎಂದು ಬಾಗಲಕೋಟೆ ಜಿಲ್ಲೆಯಲ್ಲಿ ಗೊಬ್ಬರ ಅಂಗಡಿ ಮಾಲೀಕರು ಹೇಳಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿ ಚಳುವಳಿ ಮಾಡುವ ಬದಲು ಕೇಂದ್ರದಿಂದ ರಾಜ್ಯಕ್ಕೆ ಯೂರಿಯಾ ಬಿಡುಗಡೆ ಮಾಡಿಸಲಿ: ಸಿದ್ದರಾಮಯ್ಯ

ಒಟ್ಟಿನಲ್ಲಿ, ರಾಜ್ಯದಲ್ಲಿ ಯೂರಿಯಾ ಗೊಬ್ಬರ ಸಿಗದೇ ಮಣ್ಣಿನ ಮಕ್ಕಳು ಗಲಿಬಿಲಿಗೊಂಡಿದ್ದಾರೆ. ಬಿತ್ತನೆ ಮಾಡಿರುವ ಬೆಳೆ ಕಳೆದುಕೊಳ್ಳುವ ಆತಂಕ ಶುರುವಾಗಿದೆ. ಇದೀಗ ನ್ಯಾನೋ ಡಿಎಪಿ ಖರೀದಿ ಕಡ್ಡಾಯ ಎನ್ನುತ್ತಿರುವುದು ರೈತರನ್ನು ಮತ್ತಷ್ಟು ಕಂಗೆಡಿಸಿದೆ.

ವರದಿ: ರವಿ ಮೂಕಿ ಬಾಗಲಕೋಟೆ, ಬಜವರಾಜ್ ದೊಡ್ಮನಿ ದಾವಣಗೆರೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ