ಭಿಕ್ಷುಕರಿಗೆ ಕೊವಿಡ್​ ಕೇರ್​ ಸೆಂಟರ್; ಕೊರೊನಾ ಕಾಲದಲ್ಲಿ ಮಾನವೀಯತೆ ಮೆರೆದ ಉಡುಪಿಯ ಅನ್ಸಾರ್ ಅಹಮದ್

|

Updated on: May 24, 2021 | 8:58 AM

ಅನ್ಸರ್ ಅವರು ಉಡುಪಿ ನಗರದಲ್ಲಿರುವ ಬಹುತೇಕ ಭಿಕ್ಷುಕರನ್ನು, ಮನವೊಲಿಸಿ ಕೊವಿಡ್ ಪರೀಕ್ಷೆಗೆ ಒಳಪಡಿಸಿದ್ದಾರೆ. ಸುಮಾರು 70 ಜನರು ಪರೀಕ್ಷೆ ಮಾಡಿಸಿಕೊಂಡಿದ್ದು, ಇದರಲ್ಲಿ 12 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಇವರನ್ನು ಅನ್ಸಾರ್ ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ಕೊವಿಡ್ ಕೇರ್​ ಸೆಂಟರ್ ಮಾಡಿ ಅಲ್ಲೇ ಚಿಕಿತ್ಸೆಗೆ ಅವಕಾಶ ಮಾಡಿದ್ದಾರೆ.

ಭಿಕ್ಷುಕರಿಗೆ ಕೊವಿಡ್​ ಕೇರ್​ ಸೆಂಟರ್; ಕೊರೊನಾ ಕಾಲದಲ್ಲಿ ಮಾನವೀಯತೆ ಮೆರೆದ ಉಡುಪಿಯ ಅನ್ಸಾರ್ ಅಹಮದ್
ಭಿಕ್ಷುಕರಿಗೆ ಕೊವಿಡ್​ ಕೇರ್​ ಸೆಂಟರ್
Follow us on

ಉಡುಪಿ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸಾವು- ನೋವಿನ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸಾಕಷ್ಟು ಮುನ್ನೇಚ್ಚರಿಕೆಯ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದ್ದು, ಲಾಕ್​ಡೌನ್​ ಘೋಷಣೆ ಮಾಡಿದೆ. ಆದರೆ ಬಡವರು ಇದರಿಂದಾಗಿ ಆತಂಕಕ್ಕೆ ಸಿಲುಕಿದ್ದಾರೆ. ಹೀಗಾಗಿ ಹಲವಾರು ಸಂಘ, ಸಂಸ್ಥೆಗಳು ಬಡಜನರ ನೆರವಿಗೆ ನಿಂತಿದ್ದು, ಸಹಾಯ ಹಸ್ತ ನೀಡುತ್ತಿವೆ. ಇನ್ನು ಸೋಂಕಿತರಿಗೆ ನೆರವು ನೀಡುತ್ತಿರುವ ಹಲವು ಯೋಜನೆಗಳು ಕೂಡ ಇದೆ. ಈ ಮಧ್ಯೆ ಉಡುಪಿಯ ವ್ಯಕ್ತಿಯೊಬ್ಬರು ಸ್ವಲ್ಪ ಭಿನ್ನವಾಗಿ ಯೋಚಿಸಿದ್ದು, ಭಿಕ್ಷುಕರ ನೆರವಿಗೆ ನಿಂತಿದ್ದಾರೆ.

ಉಡುಪಿಯ ಅನ್ಸಾರ್ ಅಹಮದ್, ಕೆಲ ದಿನಗಳ ಹಿಂದೆ ಅಸಹಾಯಕರು ಮತ್ತು ನಿರ್ಗತಿಕರಿಗೆ ಊಟ ನೀಡುವ ಮೂಲಕ ಸುದ್ದಿ ಆಗಿದ್ದರು. ಇವರು ಈಗ ಮತ್ತೊಂದು ಮಹತ್ವದ ಕೆಲಸ ಮಾಡಿದ್ದಾರೆ. ಅನ್ಸಾರ್ ಅಹಮದ್ ತಮ್ಮ ಗೆಳೆಯರ ಸಹಾಯದಿಂದ ಹಣವನ್ನು ಹೊಂದಿಸಿ, ಮನೆಮಠ ಇಲ್ಲದೆ ರಸ್ತೆಯಲ್ಲಿ ಜೀವನ ಕಳೆಯುವ ನಿರ್ಗತಿಕರಿಗೆ ಊಟವನ್ನು ಹಂಚುತ್ತಾರೆ, ಹೀಗೆ ಹಂಚುವ ಸಮಯದಲ್ಲಿ ಕೆಲವರು ಅನಾರೋಗ್ಯದಿಂದ ಪೀಡಿತರಾಗಿರುವುದು ಅನ್ಸಾರ್ ಅವರ ಗಮನಕ್ಕೆ ಬಂದಿದೆ.

ಕೂಡಲೇ ಅನ್ಸರ್ ಅವರು ಉಡುಪಿ ನಗರದಲ್ಲಿರುವ ಬಹುತೇಕ ಭಿಕ್ಷುಕರನ್ನು, ಮನವೊಲಿಸಿ ಕೊವಿಡ್ ಪರೀಕ್ಷೆಗೆ ಒಳಪಡಿಸಿದ್ದಾರೆ. ಸುಮಾರು 70 ಜನರು ಪರೀಕ್ಷೆ ಮಾಡಿಸಿಕೊಂಡಿದ್ದು, ಇದರಲ್ಲಿ 12 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಇವರನ್ನು ಅನ್ಸಾರ್ ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ಕೊವಿಡ್ ಕೇರ್​ ಸೆಂಟರ್ ಮಾಡಿ ಅಲ್ಲೇ ಚಿಕಿತ್ಸೆಗೆ ಅವಕಾಶ ಮಾಡಿದ್ದಾರೆ.

ಈ ಭಿಕ್ಷುಕರು ಮತ್ತು ನಿರ್ಗತಿಕರು ಬಸ್ಸು ನಿಲ್ದಾಣ ಪರಿಸರದಲ್ಲಿ ನಿತ್ಯವೂ ಓಡಾಡುವುದರಿಂದ ಇವರಿಗೆ ಇರುವ ಸೋಂಕು ನೂರಾರು ಜನರಿಗೆ ಹರಡುವ ಸಾಧ್ಯತೆ ಇದೆ. ಅಲ್ಲದೆ ಮಾಸ್ಕ್​, ಸ್ಯಾನಿಟೈಸರ್ ಮುಂತಾದ ಯಾವುದೇ ಮುಂಜಾಗ್ರತಾ ಕ್ರಮವನ್ನು ಕೂಡ ಇವರು ಪಾಲಿಸುವುದಿಲ್ಲ. ಸಾರ್ವಜನಿಕ ಸ್ಥಳದಲ್ಲೇ ಇವರು ಓಡಾಟ ಮಾಡುವುದರಿಂದ ಇವರಿಂದ ಇನ್ನೊಬ್ಬರಿಗೆ ರೋಗ ಹರಡಬಾರದು ಎಂದು ಈ ಕೆಲಸವನ್ನು ಮಾಡಲಾಗಿದೆ ಎಂದು ಸಮಾಜ ಸೇವಕ ಅನ್ಸರ್ ಅಹಮದ್ ತಿಳಿಸಿದ್ದಾರೆ.

ಇದಲ್ಲದೆ ಬಸ್​ ನಿಲ್ದಾಣದ ಪರಿಸರದಲ್ಲಿ ಮಲಗುವ ನಿರಾಶ್ರಿತರಿಗೆ ಲಾಕ್​ಡೌನ್​ನಿಂದಾಗಿ ಪೊಲೀಸರ ಕಿರಿಕಿರಿಯೂ ಇದೆ. ಇದಕ್ಕಾಗಿ ಶಾಲೆಯಲ್ಲೇ ಅವರನ್ನು ಉಳಿಸಿಕೊಂಡು ಅವರಿಗೆ ಮೂರು ಹೊತ್ತು ಊಟೋಪಚಾರ ನೀಡುತ್ತಿದ್ದಾರೆ. ಇದರ ಜೊತೆಗೆ ಟೂತ್ ಬ್ರಶ್, ಟವೆಲ್, ಸಾಬೂನು, ಮೆಡಿಸಿನ್ ಮಾಸ್ಕ್, ಸ್ಯಾನಿಟೈಸರ್ ಮೊದಲಾದ ದಿನಪಯೋಗಿ ವಸ್ತುಗಳನ್ನು ಕೂಡ ತನ್ನ ಫೌಂಡೇಶನ್ ವತಿಯಿಂದ ಒದಗಿಸಿದ್ದಾರೆ. ಇಲ್ಲಿ ಆಶ್ರಯ ಪಡೆದಿರುವವರಲ್ಲಿ ನಾನಾ ವಿಧದ ಜನರಿದ್ದಾರೆ. ಹಳ್ಳಿಗಳಿಂದ ಪೇಟೆಗೆ ಬಂದು ಲಾಕ್​ಡೌನ್​ನಿಂದಾಗಿ ಹಳ್ಳಿಗೆ ಮರಳಲಾಗದೆ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದವರು ಈ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಒಟ್ಟಿನಲ್ಲಿ ಎಲ್ಲಾ ಕೆಲಸವನ್ನು ಸರ್ಕಾರ ಮಾಡಬೇಕು ಎನ್ನುವುದನ್ನು ಬಿಟ್ಟು, ನಮ್ಮ ಕೈಲಾದ ಮಟ್ಟಿಗೆ ನಾವೇ ವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗೋಣ ಎಂಬ ಮಹತ್ವದ ಸಂದೇಶವನ್ನು ಅನ್ಸಾರ್ ಅಹಮದ್ ಸಮಾಜಕ್ಕೆ ನೀಡಿದ್ದಾರೆ.

ಇದನ್ನೂ ಓದಿ:

ಕೊರೊನಾ ಕಾಲದಲ್ಲಿ ನೆರವಿಗೆ ನಿಂತ ಮಾಲೂರಿನ ಮಾರಿಕಾಂಭ; ನಿರ್ಗತಿಕರಿಗೆ ಮೂರು ಹೊತ್ತಿನ ಊಟ ನೀಡಿ ಸಹಾಯ

ಬಿಗ್​ ಬಾಸ್​ನಿಂದ ಹೊರಬಂದು ನುಡಿದಂತೆ ನಡೆದ ಶುಭಾ ಪೂಂಜಾ; ಬಡವರಿಗೆ ಫುಡ್​ ಕಿಟ್​ ನೀಡಿದ ನಟಿ