ಸಚಿವ ಸಿ.ಸಿ ಪಾಟೀಲ್ ಸ್ವಕ್ಷೇತ್ರದಲ್ಲೂ ಎದುರಾಗಿದೆ ಸಮಸ್ಯೆ, ಕೊರೊನಾಗಿಂತ ಬೇರೆ ಕಾಯಿಲೆಯಿಂದ ಸಾಯುತ್ತಿದ್ದಾರೆ ಜನ
ಗದಗ ಜಿಲ್ಲೆಯ ಕದಡಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಜನರಿಗೆ ಕೊರೊನಾ ತಗುಲಿದ್ದು ಗ್ರಾಮದಲ್ಲಿ 10 ದಿನದಲ್ಲಿ 10ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿಗೆ ಗ್ರಾಮದ ಐವರು ಬಲಿಯಾಗಿದ್ದಾರೆ. ಕೆಮ್ಮು, ನೆಗಡಿ, ಇತರೆ ಕಾಯಿಲೆಯಿಂದ 6 ಜನರು ಮೃತಪಟ್ಟಿದ್ದಾರೆ.
ಗದಗ: ರಾಜ್ಯ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಪ್ರತಿನಿಧಿಸುವ ಬಳ್ಳಾರಿ ಕ್ಷೇತ್ರದ ಮನ್ನೇಕೋಟೆ ಗ್ರಾಮದಲ್ಲಿ 25 ದಿನದಲ್ಲಿ 15 ಜನರು ಮೃತಪಟ್ಟಿದ್ದರು. ಅಲ್ಲದೆ 15 ಜನರ ಪೈಕಿ ಐವರು ಮಾತ್ರ ಕೊರೊನಾ ಸೋಂಕಿಗೆ ಬಲಿಯಾಗಿದ್ದು ಇತರೆ ಕಾಯಿಲೆಯಿಂದ 10 ಗ್ರಾಮಸ್ಥರು ಮೃತಪಟ್ಟಿರುವ ವಿದ್ಯಮಾನ ನಡೆದಿದೆ. ಈಗ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಗದಗ ಜಿಲ್ಲೆಯ ಕದಡಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಜನರಿಗೆ ಕೊರೊನಾ ತಗುಲಿದ್ದು ಗ್ರಾಮದಲ್ಲಿ 10 ದಿನದಲ್ಲಿ 10ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿಗೆ ಗ್ರಾಮದ ಐವರು ಬಲಿಯಾಗಿದ್ದಾರೆ. ಕೆಮ್ಮು, ನೆಗಡಿ, ಇತರೆ ಕಾಯಿಲೆಯಿಂದ 6 ಜನರು ಮೃತಪಟ್ಟಿದ್ದಾರೆ.
ಗದಗ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ಸ್ವಕ್ಷೇತ್ರದ ಜನರಲ್ಲೂ ಈಗ ಇದೇ ರೀತಿಯ ಸಮಸ್ಯೆ ಎದುರಾಗಿದೆ. ಗದಗ ತಾಲೂಕಿನ ಕದಡಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ನಮ್ಮೂರಿಗೆ ಯಾವ ಅಧಿಕಾರಿಗಳೂ ಭೇಟಿ ಕೊಡುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಮ್ಮನ್ನು ಮುಟ್ಟುತ್ತಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ, ಪಿಡಿಒ, ಅಧಿಕಾರಿಗಳ ವಿರುದ್ಧ ಜನ ಕಿಡಿಕಾರಿದ್ದಾರೆ.
ಆಸ್ಪತ್ರೆಗೆ ಹೋದ್ರೆ ನಮ್ಮನ್ನ ಭಿಕ್ಷುಕರಂತೆ ಕಾಣ್ತಾರೆ: ಗ್ರಾಮಸ್ಥರು ಕೆಂಡಾಮಂಡಲ ನಮ್ಮ ಗ್ರಾಮದಲ್ಲಿ ಟೆಸ್ಟ್ ಮಾಡಿದ್ರೆ ಶೇಕಡಾ 80 ರಷ್ಟು ಪಾಸಿಟಿವ್ ಕೇಸ್ ಪತ್ತೆಯಾಗುತ್ತವೆ. ನಾಯಿಗೆ ಬಿಸ್ಕೆಟ್ ಹಾಕಿದಂತೆ ಎರಡು ಗುಳಿಗಿ ಒಗೀತಾರೇ ಸರ್ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಗ್ರಾಮದಲ್ಲಿ ಸಾಕಷ್ಟು ಜನ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಟೆಸ್ಟ್ ಮಾಡಿಸಿಕೊಳ್ಳಿ ಅಂತ ಎಷ್ಟೇ ಹೇಳಿದ್ರೂ ಜನ ಕೇಳ್ತಾಯಿಲ್ಲ. ಪೊಲೀಸ್, ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಬಂದು ಜನರ ಟೆಸ್ಟ್ಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ನಮ್ಮ ಊರು ಡೇಂಜರ್ ಜೋನ್ನಲ್ಲಿದೆ. ನಮ್ಮೂರಿಗೆ ಯಾರೂ ಬರ್ತಿಲ್ಲ. ನಿತ್ಯವೂ ಜನ ಸಾಯುತ್ತಿದ್ದಾರೆ. ಪಿಡಿಓ ಕೂಡ ಊರಲ್ಲಿ ಇರಲ್ಲ. ಸಾವು ಆದ್ರೂ ಊರಿಗೆ ಬರಲ್ಲ ಅಂತ ಪಿಡಿಓ ಜೋತಿ ವಿರುದ್ಧ ಗ್ರಾಮಸ್ಥರು ಗರಂ ಆಗಿದ್ದಾರೆ. ಪರಿಸ್ಥಿತಿ ಕೈಮೀರುತಿದ್ದರೂ ನಮ್ಮೂರಿಗೆ ತಹಶೀಲ್ದಾರ್, ಆರೋಗ್ಯ, ಪೊಲೀಸ್ ಅಧಿಕಾರಿಗಳು ಯಾರೂ ಕಾಲಿಟ್ಟಿಲ್ಲ. ಆಸ್ಪತ್ರೆಗೆ ಹೋದ್ರೆ ನಮ್ಮನ್ನ ಭಿಕ್ಷುಕರಂತೆ ಕಾಣ್ತಾರೆ ಅಂತ ಗ್ರಾಮಸ್ಥರು ಕೆಂಡಾಮಂಡಲರಾಗಿದ್ದಾರೆ.
ಇದನ್ನೂ ಓದಿ: ಬಿ.ಶ್ರೀರಾಮುಲು ಪ್ರತಿನಿಧಿಸುವ ಕ್ಷೇತ್ರದಲ್ಲಿ ಇದೆಂತಾ ಸಮಸ್ಯೆ, ಕೊರೊನಾಗಿಂತ ಈ ಕಾಯಿಲೆಗೆ ಮೃತಪಟ್ಟವರೇ ಹೆಚ್ಚು
Published On - 10:05 am, Mon, 24 May 21