ದೇಶದ ಮೊಬೈಲ್ ಉತ್ಪಾದನೆಯಲ್ಲಿ ಗಣನೀಯ ಪ್ರಗತಿ: ಟಾಟಾ ಐಫೋನ್ ಘಟಕಕ್ಕೆ ಭೇಟಿ ನೀಡಿದ ಬಳಿಕ ಅಶ್ವಿನಿ ವೈಷ್ಣವ್ ಮಾಹಿತಿ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೊಸೂರಿನಲ್ಲಿರುವ ಟಾಟಾ ಐಫೋನ್ ಘಟಕಕ್ಕೆ ಸೋಮವಾರ ಸಂಜೆ ಭೇಟಿ ನೀಡಿದರು. ಬಳಿಕ ಮಾತನಾಡಿ, ಭಾರತದಲ್ಲಿ ಬಳಕೆಯಾಗುವ ಶೇಕಡ 99.2 ರಷ್ಟು ಮೊಬೈಲ್ ಫೋನ್‌ಗಳು ದೇಶದಲ್ಲಿಯೇ ತಯಾರಿಸಲ್ಪಟ್ಟಿದೆ ಎಂದರು.
ಬೆಂಗಳೂರು, ನವೆಂಬರ್ 27: ದೇಶದಲ್ಲಿ ಉಪಯೋಗಿಸಲ್ಪಡುವ ಶೇ 99 ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ಸ್ಥಳೀಯವಾಗಿ ತಯಾರಿಸಲ್ಪಡುತ್ತಿವೆ. ದೇಶದ ಮೊಬೈಲ್ ಉತ್ಪಾದನಾ ಉದ್ಯಮವು 44 ಶತಕೋಟಿ ಡಾಲರ್ ಮೌಲ್ಯವನ್ನು ದಾಟಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಹೇಳಿದರು. ಹೊಸೂರಿನಲ್ಲಿರುವ (Hosur) ಟಾಟಾ ಐಫೋನ್ ಘಟಕಕ್ಕೆ (iPhone plant) ಭೇಟಿ ನೀಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತವು ಎಲೆಕ್ಟ್ರಾನಿಕ್ಸ್ ಉತ್ಪಾದನೆ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯ ಕುರಿತು ಮಾಹಿತಿ ನೀಡಿದರು.
ಈ ಮಧ್ಯೆ ವಿರೋಧ ಪಕ್ಷದ ನಾಯಕರ ವಿರುದ್ಧವೂ ಅವರು ವಾಗ್ದಾಳಿ ನಡೆಸಿದರು. ಕೆಲವು ವಿರೋಧ ಪಕ್ಷದ ನಾಯಕರು ಇನ್ನೂ ಕೂಡ ದೇಶದಲ್ಲಿ ಬಳಸುವ ಮೊಬೈಲ್ ಫೋನ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದೇ ಭಾವಿಸಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಪ್ರತಿಪಕ್ಷದ ಕೆಲವು ದೊಡ್ಡ ನಾಯಕರು ಮೊಬೈಲ್ ಫೋನ್ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಭಾವಿಸಿದ್ದಾರೆ. ಇಂದು ಭಾರತದಲ್ಲಿ ಬಳಕೆಯಾಗುವ ಶೇಕಡ 99.2 ರಷ್ಟು ಮೊಬೈಲ್ ಫೋನ್‌ಗಳು ದೇಶದಲ್ಲಿಯೇ ತಯಾರಿಸಲ್ಪಟ್ಟಿದೆ ಎಂಬುದು ಅವರಿಗೆ ಗೊತ್ತಿಲ್ಲ ಎಂದು ವೈಷ್ಣವ್ ಹೇಳಿದರು.
ದೇಶದ ಮೊಬೈಲ್ ಉತ್ಪಾದನಾ ಉದ್ಯಮವು 44 ಶತಕೋಟಿ ಡಾಲರ್ ಮೌಲ್ಯ ದಾಟಿದೆ. ಇಷ್ಟೇ ಅಲ್ಲದೆ, ಮೌಲ್ಯದ ಏರಿಕೆ ಸರಪಳಿಯಲ್ಲಿಯೂ ಏರಿಕೆ ಕಂಡುಬರುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಪ್ರಸ್ತುತ, ದೇಶದಲ್ಲಿ ಅನೇಕ ಉತ್ಪಾದನಾ ಘಟಕಗಳಿವೆ. ಭಾರತವು 2025-26ರ ವೇಳೆಗೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಲ್ಲಿ 300 ಬಿಲಿಯನ್ ಡಾಲರ್ ಮೌಲ್ಯದ ಉತ್ಪಾದನೆಯ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಸಾಧನ ತಯಾರಕರನ್ನು ಪ್ರೋತ್ಸಾಹಿಸಲು ಉತ್ಪಾದನಾ ಆಧಾರಿತ ಭತ್ಯೆ (PLI) ಯೋಜನೆಗಳ ಮೂಲಕ ಉದಾರ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಚೀನಾವನ್ನು ಮೀರಿ ದೇಶದ ಉತ್ಪಾದನಾ ಸಾಮರ್ಥ್ಯ ಮುನ್ನುಗ್ಗುತ್ತಿದೆ ಎಂದು ವೈಷ್ಣವ್ ಹೇಳಿದರು.
ಕಳೆದ ವರ್ಷ ಆ್ಯಪಲ್ ಭಾರತದಲ್ಲಿ ತನ್ನ ಪ್ರಮುಖ ಐಫೋನ್ ಸಾಧನಗಳ ಸ್ಥಳೀಯ ಉತ್ಪಾದನೆಯನ್ನು ತೀವ್ರವಾಗಿ ಹೆಚ್ಚಿಸಿದೆ. ಕ್ಯುಪರ್ಟಿನೋ ಟೆಕ್ ದೈತ್ಯ ಭಾರತದಲ್ಲಿ ಉತ್ಪಾದನೆಯನ್ನು ಮುಂದಿನ 4-5 ವರ್ಷಗಳಲ್ಲಿ 40 ಬಿಲಿಯನ್ ಡಾಲರ್ಗೆ ಹೆಚ್ಚಿಸಲು ಯೋಜಿಸಿದೆ. ಕಂಪನಿಯು ಕಳೆದ ಆರ್ಥಿಕ ವರ್ಷದಲ್ಲಿ 7 ಬಿಲಿಯನ್ ಉತ್ಪಾದನೆಯ ಗಡಿಯನ್ನು ದಾಟಿತ್ತು ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಫಾಕ್ಸ್‌ಕಾನ್, ವೇದಾಂತ ಮೇಕ್ ಇನ್ ಇಂಡಿಯಾ ಯೋಜನೆಗೆ ಬದ್ಧ: ಸಚಿವ ಅಶ್ವಿನಿ ವೈಷ್ಣವ್
ಕಳೆದ 9.5 ವರ್ಷಗಳಲ್ಲಿ ನಾವು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಲ್ಲಿ ರಫ್ತು ಬೆಳವಣಿಗೆಗೆ ಕಾರಣವಾಗುವ ಮಟ್ಟವನ್ನು ತಲುಪಿದ್ದೇವೆ. ನಮ್ಮ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿಯೂ ಉತ್ತಮ ಪ್ರಗತಿಯಾಗಿದೆ. ಚಿಪ್ಗಳನ್ನು ತಯಾರಿಸಲು ಘಟಕಗಳ ನಿರ್ಮಾಣವು ಉತ್ತಮವಾಗಿ ಸಾಗುತ್ತಿದೆ ಎಂದು ಸಚಿವರು ಹೇಳಿದರು.
ಇತ್ತೀಚೆಗಷ್ಟೇ ಗೂಗಲ್ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ತಯಾರಿಸಲು ಯೋಜಿಸಿರುವುದಾಗಿ ಘೋಷಿಸಿತ್ತು. ಇದು ಜಾಗತಿಕ ಉತ್ಪಾದನಾ ಕೇಂದ್ರವಾಗಬೇಕೆಂಬ ದೇಶದ ಮಹತ್ವಾಕಾಂಕ್ಷೆಗಳಿಗೆ ದೊಡ್ಡ ಉತ್ತೇಜನವನ್ನು ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ