ಬೆಂಗಳೂರು, ಮಾರ್ಚ್ 18: ಜೋರು ಸೌಂಡ್ ಇಟ್ಟು ಹಾಡು ಹಾಕಿದ್ದಕ್ಕೆ ಹಲ್ಲೆ (Assault)
ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಮೇಲೆ ಹಲ್ಲೆ ಮಾಡಿದ್ದವರ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹಲಸೂರು ಗೇಟ್ ಪೊಲೀಸ್ ಠಾಣೆಗೆ ಮುಖೇಶ್ ದೂರು ನೀಡಿದ್ದು, ದೂರಿನನ್ವಯ ಪೊಲೀಸರು FIR ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 506, 504, 149, 307, 323 ಹಾಗೂ 324ರಡಿ ಐವರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಮುಕೇಶ್ ಮೇಲೆ ಹಲ್ಲೆ ಮಾಡಿದ್ದ ಸುಲೇಮಾನ್, ತರುಣ್ ಶನವಾಜ್, ರೋಹಿತ್, ಡ್ಯಾನಿಶ್ ವಿರುದ್ಧ ಕೇಸ್ ದಾಖಲಿಸಿದ್ದು, ಐವರ ಪೈಕಿ ಮೂವರನ್ನು ಬಂಧಿಸಿದ್ದಾರೆ.
ಘಟನೆ ಸ್ಥಳಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿದ್ದಾರೆ. ಬಳಿಕ ಕುಟುಂಬಸ್ಥರ ಜೊತೆ ಮಾತುಕತೆ ಮಾಡಿದ್ದಾರೆ. ನಂತರ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದು, ‘ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವಾಗಿ ಜೋರಾಗಿ ಹಾಡು ಹಾಕಲು ಅವಕಾಶವಿಲ್ಲ ಎಂದು ತನ್ನ ಅಂಗಡಿಯಲ್ಲಿ ಭಜನೆ ನುಡಿಸುತ್ತಿದ್ದ ಹಿಂದೂ ಅಂಗಡಿಯವನ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ. ಇಂತಹ ಕೃತ್ಯಗಳಿಗೆ ಧೈರ್ಯ ತುಂಬಿರುವುದು ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದ ನೇರ ಪರಿಣಾಮವಾಗಿದೆ. ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರಿಗೆ ಜಾಮೀನು ನೀಡಲಾಗಿತ್ತು’ ಎಂದಿದ್ದಾರೆ.
ಇದನ್ನೂ ಓದಿ: ಜೋರು ಸೌಂಡ್ ಇಟ್ಟು ಅಂಗಡಿಯಲ್ಲಿ ಭಜನೆ ಹಾಡು ಹಾಕಿದ್ದಕ್ಕೆ ಹಲ್ಲೆ: ಮೂವರ ಬಂಧನ
‘ರಾಜಕೀಯ ಬೆಂಬಲ ದೊರೆತಿರುವುದರಿಂದ ಸಹಜವಾಗಿಯೇ ನಮ್ಮ ರಾಜ್ಯದಲ್ಲಿ ಹಿಂದೂಗಳ ವಿರುದ್ಧ ಇಂತಹ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ತಪ್ಪು ನಿದರ್ಶನ ನೀಡುವುದನ್ನು ಸಿಎಂ ನಿಲ್ಲಿಸಬೇಕು. ಈ ಪ್ರಕರಣದಲ್ಲಿ ದುಷ್ಕರ್ಮಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ’ ಎಂಬುದನ್ನು ರಾಜ್ಯಕ್ಕೆ ತಿಳಿಸುವಂತೆ ಆಗ್ರಹಿಸಿದ್ದಾರೆ.
ಮಸೀದಿಯಲ್ಲಿ ಪ್ರಾರ್ಥನೆ ಮಾಡುವಾಗ ಅಂಗಡಿಯಲ್ಲಿ ಜೋರು ಸೌಂಡ್ ಹಾಕಬೇಡ ಎಂದು ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಪರಸ್ಪರ ಗಲಾಟೆ ಮಾಡಲಾಗಿದೆ. ಯುವಕ ಮುಖೇಶ್ ಕೊರಳ ಪಟ್ಟಿಗೆ ಕೈಹಾಕಿ ಅಂಗಡಿಯಿಂದ ಹೊರಗೆ ಎಳೆದೊಯ್ದ ಗುಂಪು ಹಲ್ಲೆ ಮಾಡಿದ್ದಾರೆ. ಗ್ಯಾಂಗ್ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ ಆಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.