ರಾಯಚೂರು, ಜ.22: ಅಯೋಧ್ಯೆ ರಾಮ ಮಂದಿರ (Ayodhya Ram Mandir) ಲೋಕಾರ್ಪಣೆ ಹಾಗೂ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಇಂದು ದೇಶಾದ್ಯಂತ ರಾಜ ಜ್ಯೋತಿ (Ram Jyothi) ಬೆಳಗಿಸಿ ಪ್ರಭು ಶ್ರೀರಾಮನನ್ನು ಮನೆಗೆ ಆಹ್ವಾನಿಸಲಾಗುತ್ತಿದೆ. ಕರ್ನಾಟಕದಲ್ಲಿ ಪ್ರತಿ ಹಿಂದೂವಿನ ಮನೆಮನೆಗಳಲ್ಲೂ ದೀಪಗಳನ್ನು ಬೆಳಗಿಸಲಾಗುತ್ತಿದೆ. ಸಾರ್ವಜನಿಕ ಸ್ಥಳ, ರಸ್ತೆ ಬದಿ, ದೇವಸ್ಥಾನ, ಮಠ, ಮಂದಿರಗಳಲ್ಲೂ ದೀಪಗಳನ್ನು ಬೆಳಗಿಸಲಾಗಿದೆ.
ರಾಯಚೂರಿನ ಮಂತ್ರಾಲಯದ ರಾಯರ ಮಠದಲ್ಲಿ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ದೀಪೋತ್ಸವ ಆಚರಿಸಲಾಯಿತು. ಮಠದ ಪ್ರಾಂಗಣದಲ್ಲಿ ಶ್ರೀಗಳು ದೀಪ ಬೆಳಗಿಸಿದರು. ಮಂತ್ರಾಲಯದ ದೀಪೋತ್ಸವದಲ್ಲಿ ನೂರಾರು ಭಕ್ತರು ಭಾಗಿಯಾಗಿ ಸಂಭ್ರಮಿಸಿದರು.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ರಾಮ ಜ್ಯೋತಿ ಬೆಳಗಿದ ಮೋದಿ
ಅಲ್ಲದೆ, ರಾಯಚೂರಿನ ಶ್ರೀರಾಮನಗರದ ಕೋದಂಡರಾಮ ದೇವಾಲಯದಲ್ಲೂ ದೀಪೋತ್ಸವ ಆಚರಿಸಲಾಯಿತು. ಐದು ಸಾವಿರಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಿ ರಾಮೋತ್ಸವ ಆಚರಣೆ ಮಾಡಲಾಯಿತು. ಇದೇ ವೇಳೆ ದೇವಸ್ಥಾನದ ಆಡಳಿತ ಮಂಡಳಿಯಿಂದ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಕೋದಂಡರಾಮ ದೇಗುಲದಲ್ಲಿ ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ರಾಮನ ಬಂಟ ಹನುಮನ ಜನ್ಮಸ್ಥಳದಲ್ಲೂ ದಿಪೋತ್ಸವ ಆಚರಿಸಲಾಯಿತು. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಅರುಣಾ ಲಕ್ಷ್ಮಿ ನೇತೃತ್ವದಲ್ಲಿ ಕೊಪ್ಪಳ ಜಿಲ್ಲೆಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಸಾವಿರಾರು ದೀಪಗಳನ್ನ ಬೆಳಗಿಸಿ ದೀಪೋತ್ಸವ ಆಚರಿಸಲಾಯಿತು. ಬೆಟ್ಟದ ಕೆಳಗೆ ಇರುವ ಆಂಜನೇಯ ಮೂರ್ತಿಗೆ ದೀಪ ಬೆಳಗಿಸಿ ರೆಡ್ಡಿ ದಂಪತಿ ದೀಪೋತ್ಸವ ಆಚರಿಸಿದರು.
ರಾಮಮಂದಿರ ಪ್ರತಿಷ್ಠಾಪನೆ ಪ್ರಯುಕ್ತ ಶಿವಮೊಗ್ಗದ ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನದ ಬಳಿ ತುಂಗಾ ನದಿಯಲ್ಲಿ ಅದ್ದೂರಿಯಾಗಿ ತುಂಗಾ ಆರತಿ ನಡೆಯಿತು. ಮಾಧವ ದೇವರ ದೇವಸ್ಥಾನದ ಉತ್ಸವದ ಜೊತೆಗೆ ತುಂಗಾ ನದಿಯ ಎರಡೂ ತಟದಲ್ಲಿ ಆರತಿ ಬೆಳಗಲಾಯಿತು. ತುಂಗಾ ಆರತಿ ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಸಾವಿರಾರು ಭಕ್ತರು ಭಾಗಿಯಾದರು.
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಂಭ್ರಮ ಹಿನ್ನೆಲೆ ಗದಗ ನಗರದಲ್ಲಿರುವ ಐತಿಹಾಸಿಕ ವೀರನಾರಾಯಣ ದೇವಾಲಯದಲ್ಲಿ ಅದ್ಧೂರಿ ದೀಪೋತ್ಸವ ಆಚರಿಸಲಾಯಿತು. ರಾಮಭಕ್ತರು 1001 ದೀಪಗಳನ್ನು ಬೆಳಗಿದರು. ದೀಪೋತ್ಸವದಲ್ಲಿ ಸಾವಿರಾರು ಮಹಿಳೆಯರು ಭಾಗಿಯಾದರು. ಶ್ರೀರಾಮನ ಪಲ್ಲಕ್ಕಿ ಉತ್ಸವವೂ ನಡೆಸುವುದರ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ದೇವಸ್ಥಾನ ಆವರಣದಲ್ಲಿ ಇರುವ ಶ್ರೀರಾಮನ ಮೂರ್ತಿ ಎದುರು ಭಕ್ತರು ಫೋಟೋ ತೆಗೆಸಿಕೊಂಡರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ