ಹೊಸ ವರ್ಷಾಚರಣೆಗೆ ಜಾರಿಗೊಳಿಸಿದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ: ಮುಖ್ಯಮಂತ್ರಿ ಯಡಿಯೂರಪ್ಪ ಮನವಿ

|

Updated on: Dec 31, 2020 | 12:41 PM

ರೈತರ ಅನುಕೂಲಕ್ಕಾಗಿ.. ಅವರ ಆದಾಯ ದ್ವಿಗುಣಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಸುಧಾರಿತ ಕಾಯ್ದೆಗಳನ್ನು ಜಾರಿಗೊಳಿಸಿದೆ. ಆದರೆ ವಿಪಕ್ಷಗಳು ರೈತರ ದಾರಿ ತಪ್ಪಿಸುತ್ತಿವೆ. ಈ ಕಾಯ್ದೆಗಳು ಮಾರಕವಲ್ಲ ಎಂದು ಸಿಎಂ ಹೇಳಿದ್ದಾರೆ.

ಹೊಸ ವರ್ಷಾಚರಣೆಗೆ ಜಾರಿಗೊಳಿಸಿದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ: ಮುಖ್ಯಮಂತ್ರಿ ಯಡಿಯೂರಪ್ಪ ಮನವಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Follow us on

ಬೆಂಗಳೂರು: ಇಂದು ಮಧ್ಯಾಹ್ನ 12ಗಂಟೆಯಿಂದ ನಾಳೆ ಬೆಳಗ್ಗೆ 6ರವರೆಗೂ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಹೊಸ ವರ್ಷಾಚರಣೆ ವೇಳೆ ಕೊವಿಡ್​-19 ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಹೊಸ ವರ್ಷ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ತರಲಿ ಎಂದರು.

ಬಿಜೆಪಿಯದ್ದು ಉತ್ತಮ ಸಾಧನೆ
ಕರ್ನಾಟಕದಲ್ಲಿ ನಡೆದಿರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಶೇ. 60ರಷ್ಟು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ರಾಜ್ಯದ 5720 ಗ್ರಾ.ಪಂ.ಗಳ ಪೈಕಿ ಅತಿಹೆಚ್ಚು ಅಂದರೆ ಸುಮಾರು 3,800 ಗ್ರಾ. ಪಂ.ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದು ಅಭೂತಪೂರ್ವ ಸಾಧನೆ. ಇದು ಸಾಧ್ಯವಾಗಿದ್ದು ಸಾಮೂಹಿಕ ನೇತೃತ್ವದಿಂದ. ಕಾರ್ಯಕರ್ತರ ಶ್ರಮದಿಂದ ಎಂದು ಯಡಿಯೂರಪ್ಪ ಹೇಳಿದರು.

ಮೋದಿಯವರ ಸ್ಫೂರ್ತಿದಾಯಕ ನಾಯಕತ್ವ
ಇತ್ತೀಚೆಗೆ ನಡೆದ ಉಪಚುನಾವಣೆಗಳು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಗಿದ್ದು, ಪ್ರಧಾನಿ ಮೋದಿಯವರ ಸ್ಫೂರ್ತಿದಾಯಕ ನಾಯಕತ್ವದಿಂದ. 2019ರಲ್ಲಿ ನಡೆದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ 12 ಕ್ಷೇತ್ರಗಳನ್ನು ಗೆದ್ದಿದ್ದೇವೆ. ಸಾಂಕ್ರಾಮಿಕ ರೋಗದ ನಡುವೆಯೂ ಪ್ರಗತಿ ಚಕ್ರ ಸರಾಗವಾಗಿ ಮುನ್ನಡೆಯುವಂತೆ ನೋಡಿಕೊಳ್ಳುತ್ತಿದ್ದೇವೆ. ಕೊವಿಡ್-19 ರೋಗವನ್ನೂ ಪರಿಣಾಮಕಾರಿಯಾಗಿ ನಿಯಂತ್ರಿಸಲಾಗಿದೆ. ಎಲ್ಲ ಅಸಂಘಟಿತವ ವಲಯಗಳ ಹಿತಾಸಕ್ತಿಯನ್ನೂ ನಮ್ಮ ಸರ್ಕಾರ ಕಾಪಾಡಿದೆ ಎಂದು ತಿಳಿಸಿದರು.

ರೈತರ ಹಿತಕ್ಕಾಗಿ ಕೃಷಿ ಕಾಯ್ದೆಗಳು
ಇನ್ನು ರೈತರ ಅನುಕೂಲಕ್ಕಾಗಿ.. ಅವರ ಆದಾಯ ದ್ವಿಗುಣಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಸುಧಾರಿತ ಕಾಯ್ದೆಗಳನ್ನು ಜಾರಿಗೊಳಿಸಿದೆ. ಆದರೆ ವಿಪಕ್ಷಗಳು ರೈತರ ದಾರಿ ತಪ್ಪಿಸುತ್ತಿವೆ. ಈ ಕಾಯ್ದೆಗಳು ಮಾರಕವಲ್ಲ, ಕನಿಷ್ಠ ಬೆಂಬಲ ಬೆಲೆ (MSP) ಯಾವ ಕಾರಣಕ್ಕೂ ಮುಂದುವರಿಯುತ್ತದೆ.

ಅಮೆರಿಕ, ಚೀನಾದಂತಹ ಮುಂದುವರಿದ ದೇಶಗಳೊಂದಿಗೆ ಆರ್ಥಿಕ ಅಭಿವೃದ್ಧಿಯಲ್ಲಿ ಸ್ಪರ್ಧಿಸಬೇಕಾದರೆ ಇಂಥ ಹಲವು ಸುಧಾರಿತ ಕಾಯ್ದೆಗಳ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ಧರಣಿಯನ್ನು ನಿಲ್ಲಿಸಿ, ಮಾತುಕತೆ ಮೂಲಕ ಸಮಸ್ಯೆ ಪರಿಹಾರ ಮಾಡಿಕೊಳ್ಳಬೇಕು. ಕರ್ನಾಟಕದಲ್ಲೂ ಸಹ ಈ ಕಾಯ್ದೆಗಳ ಯಶಸ್ವಿ ಅನುಷ್ಠಾನಕ್ಕೆ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗ್ರಾ. ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವು; ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

Published On - 12:40 pm, Thu, 31 December 20