ವಿಜಯಪುರ ಸೇರಿದಂತೆ ರಾಜ್ಯದ ಕೆಲವು ವಸತಿ ಶಾಲೆಗಳ (Residential Schools) ಪ್ರವೇಶ ದ್ವಾರದಲ್ಲಿ ಬರೆಯಲಾಗಿದ್ದ, ‘ಜ್ಞಾನ ದೇಗುಲವಿದು, ಕೈಮುಗಿದು ಒಳಗೆ ಬಾ’ ಎಂಬ ಸಾಲನ್ನು ಬದಲಾಯಿಸಿ, ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ ಎಂದು ಮಾಡಿರುವುದು ರಾಜ್ಯದಾದ್ಯಂತ ಇಂದು (ಸೋಮವಾರ) ರಾಜಕೀಯ ಕೋಲಾಹಲಕ್ಕೆ ಕಾರಣವಾಯಿತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ (Karnataka Congress Government), ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಘೋಷವಾಕ್ಯವನ್ನು ಮೊದಲಿದ್ದಂತೆಯೇ ಬರೆಯಿಸಿತು. ಆದಾಗ್ಯೂ, ಘೋಷವಾಕ್ಯ ಬದಲಾವಣೆಯನ್ನು ಶಿಕ್ಷಣ ಸಚಿವರು ಸೇರಿದಂತೆ ಆಡಳಿತ ಪಕ್ಷದ ನಾಯಕರು ಸಮರ್ಥಿಸಿಕೊಂಡರು. ಘೋಷ ವಾಕ್ಯ ಬದಲಾಯಿಸಿದರೂ ನಾವು ಕುವೆಂಪು (Kuvempu) ಅವರ ಆಶಯದಂತೆಯೇ ನಡೆಯುತ್ತೇವೆ ಎಂದು ಅವರು ಹೇಳಿದರು.
ಡಿಸಿಎಂ ಡಿಕೆ ಶಿವಕುಮಾರ್ ಸಹ ಆ ಬಗ್ಗೆ ಪ್ರತಿಕ್ರಿಯಿಸಿ, ನಾವು ಕುವೆಂಪು ಅವರ ಆಚಾರ-ವಿಚಾರಗಳನ್ನೇ ಪ್ರಚಾರ ಮಾಡುತ್ತಿದ್ದೇವೆ. ‘ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೇ’ ಅಂತ ಹೇಳಿ, ‘ಸರ್ವಜನಾಂಗದ ಶಾಂತಿಯ ತೋಟ’ ಎಂದು ನಾವು ಕಾಂಗ್ರೆಸ್ನವರು ಪ್ರತಿದಿನ ಕುವೆಂಪು ಅವರ ಆಚಾರ-ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಹಾಗಾದರೆ, ಕುವೆಂಪು ಅವರು ‘ಕೈಮುಗಿದು ಒಳಗೆ ಬಾ’ ಕವನವನ್ನು ರಚಿಸಿದ್ದು ಯಾವಾಗ? ಅದರ ಸಾಹಿತ್ಯವೇನು? ಆ ಹಾಡು ಏನನ್ನು ಧ್ವನಿಸುತ್ತದೆ? ಇತ್ಯಾದಿ ವಿವರಗಳನ್ನು ತಿಳಿಯುವ ಪ್ರಯತ್ನ ಇಲ್ಲಿದೆ.
ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ
ಗಂಟೆಗಳ ದನಿಯಿಲ್ಲ ಜಾಗಟೆಗಳಿಲ್ಲಿಲ್ಲ
ಕರ್ಪೂರದಾರತಿಯ ಜ್ಯೋತಿಯಿಲ್ಲ
ಭಗವಂತನಾನಂದ ರೂಪಗೊಂಡಿಹುದಿಲ್ಲಿ
ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ
ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ
ಬಾದರಾಯಣನಂತೆ ಭಾರತವ ಹಾಡುತಿಹುದಿಲ್ಲಿ
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ
ಮೂರ್ಛೆಯಲಿ ಮೈಮರೆತು ತೇಲುವುದು ಭೂಭಾರವಿಲ್ಲಿ
‘ಸೋಮನಾಥಪುರ ದೇವಾಲಯ’ವನ್ನು ನೋಡಿದ ಕುವೆಂಪು ಅವರು 1928ರಲ್ಲಿ ‘ಕೈಮುಗಿದು ಒಳಗೆ ಬಾ’ ಹಾಡನ್ನು ಬರೆದಿದ್ದರು. ಈ ಕವನದಲ್ಲಿ ‘ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ’ ಎಂದು ಕುವೆಂಪು ಕರೆ ಕೊಡುವುದು, ಈ ದೇವಸ್ಥಾನ ತನ್ನ ಶಿಲ್ಪ ವೈಭವದಿಂದ ‘ಕಲೆಯಬಲೆ’ಯಂತೆ ಇದೆ ಎನ್ನುವ ಕಾರಣಕ್ಕೆ ಮಾತ್ರ ಅಲ್ಲ; ಅದಕ್ಕೂ ಮಿಗಿಲಾಗಿ, ‘ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪೂರದಾರತಿಯ ಜ್ಯೋತಿಯಿಲ್ಲ’ ಎನ್ನುವ ಕಾರಣಕ್ಕೆ ಎಂದು ಈ ಹಿಂದೊಮ್ಮೆ ಖ್ಯಾತ ಸಾಹಿತಿ ಜಿಎಸ್ ಶಿವರುದ್ರಪ್ಪನವರು ವಿವರಿಸಿದ್ದರು.
ಶಿವರುದ್ರಪ್ಪನವರ ಪ್ರಕಾರ ಗಂಟೆಗಳ ದನಿ, ಜಾಗಟೆಯ ಮೊಳಗು, ಕರ್ಪೂರದಾರತಿ ಇವೆಲ್ಲ ಪೂಜಾರಿ ಅಥವಾ ಪುರೋಹಿತನಿದ್ದಾನೆ ಎಂಬುದಕ್ಕೆ ಸಂಕೇತ. ಆದರೆ ಈ ದೇಗುಲದಲ್ಲಿ ಪೂಜಾರಿ ಅಥವಾ ಪುರೋಹಿತ ಇಲ್ಲ. ಹಾಗಾದ ಕಾರಣ ಗಂಟೆಗಳ ದನಿಯಾಗಲೀ, ಜಾಗಟೆಯ ಸದ್ದಾಗಲೀ ಕರ್ಪೂರದಾರತಿಯಾಗಲೀ ಇಲ್ಲ ಎಂಬುದನ್ನು ಕವನದಲ್ಲಿ ಕುವೆಂಪು ಹೇಳಿದ್ದಾರೆ.
ಇದನ್ನೂ ಓದಿ: ವಿಜಯಪುರ: ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಕವಿತೆಯ ಬರಹ ಬದಲಾವಣೆ! ಚರ್ಚೆಗೆ ಗ್ರಾಸವಾಯ್ತು ಸರ್ಕಾರದ ನಡೆ
ಸೋಮನಾಥಪುರದ ಈ ದೇವಾಲಯ ಮತ್ತು ಮೂರ್ತಿ ಪರಕೀಯರ ದಾಳಿಯಿಂದ ಭಗ್ನವಾಗಿರುವುದರಿಂದ ಅಲ್ಲಿ ಯಾವ ಪೂಜೆಯೂ ಇಲ್ಲ. ಹೀಗಾದುದರಿಂದ ಪೂಜೆಯೂ ಇಲ್ಲದ, ಪೂಜಾರಿಯೂ ಇಲ್ಲದ, ಆದರೆ ತನ್ನ ಶಿಲ್ಪಕಲಾವೈಭವದಿಂದ ‘ಭಗವಂತನಾನಂದ ಮೂರ್ತಿ’ಗೊಂಡಂತಿರುವ ಈ ದೇವಸ್ಥಾನಕ್ಕೆ ಕುವೆಂಪು ಯಾತ್ರಿಕರನ್ನು ಕರೆಯುತ್ತಾರೆ ಎಂದು ಶಿವರುದ್ರಪ್ಪ ಕವನವನ್ನು ವಿಶ್ಲೇಷಿಸಿದ್ದರು.
(ಮಾಹಿತಿ: ವಿವಿಧ ಮೂಲಗಳಿಂದ)
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Mon, 19 February 24