ಬಾಗಲಕೋಟೆ: ಬೇಸಿಗೆ ಕಾಲ. ಹೆಸರು ಕೇಳಿದಾಕ್ಷಣ ಸೆಕೆ ಶುರು. ಸುಡು ಬಿಸಿಲಿಗೆ ಹೊರ ಹೋಗಲು ಸಾಧ್ಯವೇ ಇಲ್ಲ. ಹೊರ ಹೋದಾಗ ಮರ-ಗಿಡಗಳ ತಂಪು ಎಲ್ಲಿ ಕಾಣಿಸುತ್ತದೆ ಅಲ್ಲಿ ಸ್ವಲ್ಪ ಮರದಡಿಯಲ್ಲಿ ಕೂತು ಹೋಗೋಣ ಅನಿಸುತ್ತದೆ. ಈಗೆಲ್ಲಾ ರಸ್ತೆಯಂಚಿನಲ್ಲಿ ಮರಗಿಡಗಳೇ ಕಾಣಸಿಗುತ್ತಿಲ್ಲ. ಅದರಲ್ಲೂ ಪ್ರಾಣಿ, ಪಕ್ಷಿಗಳಿಗೆ ತಮ್ಮ ಗೂಡುಕಟ್ಟುವ ಜಾಗವೇ ಇಲ್ಲದಂತಾಗಿದೆ. ಈ ಬಿಸಿಲಿಗೆ ಅವುಗಳು ಎಲ್ಲಿಗೆ ಹೋಗಬೇಕು? ಇವುಗಳನ್ನೆಲ್ಲ ಗಮನಿಸಿದ ವ್ಯಕ್ತಿಯೋರ್ವರು 30-40 ಕಿಲೋಮೀಟರ್ಗಳಷ್ಟು ಮರಗಳಿಗೆ ಪ್ರತಿನಿತ್ಯವೂ ನೀರುಣಿಸುತ್ತಾರೆ. ಬಾದಾಮಿ ಪಟ್ಟಣದ ಸುತ್ತಮುತ್ತಲಿನ ಗಿಡ ಮರಗಳೆಲ್ಲ ಬಿಸಿಲಿನ ಮಧ್ಯವೂ ಹಚ್ಚ ಹಸಿರಿನಿಂದ ಕೂಡಿವೆ.
ರಮೇಶ್ ಹಾದಿಮನಿ ಓರ್ವ ಉದ್ಯಮಿ. ಜೊತೆಗೆ ಪರಿಸರ ಪ್ರೇಮಿಯೂ ಹೌದು. ಹಾಗಾಗಿ ಗಿಡ ಮರಗಳಿಗೆ ನೀರುಣಿಸುತ್ತಾ ಅವುಗಳ ಏಳಿಗೆಯಲ್ಲಿ ತಮ್ಮ ಸಂತೋಷವನ್ನು ಕಾಣುತ್ತಿದ್ದಾರೆ. ಹೊರಗಡೆ ಮನೆ ಬಿಟ್ಟು ಹೊರಬಾರದ ರೀತಿ ಕಡು ಬಿಸಿಲಿದೆ. ಮರ-ಗಿಡಗಳೆಲ್ಲ ಬಾಡಿ ಹೋಗುತ್ತವೆ. ಹಾಗಿದ್ದಾಗ ಜನರಿಗೆ, ಪ್ರಾಣಿ-ಪಕ್ಷಿಗಳಿಗೆ ತೊಂದರೆಯಾಗಬಾರದು. ಗಿರ-ಮರಗಳು ಸೊರಗಬಾರದು ಎಂಬ ಕಾರಣಕ್ಕೆ ನಿತ್ಯವೂ ನೀರುಣಿಸುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ರಮೇಶ್ ದಿನವೂ ಒಂದು ಟ್ಯಾಂಕರ್ ನೀರನ್ನು ಗಿಡಗಳಿಗಾಗಿ ಮೀಸಲಿಟ್ಟಿದ್ದಾರೆ.
ರಮೇಶ್ ಹಾದಿಮನಿ ಅರಣ್ಯ ಇಲಾಖೆಯವರು ನೆಟ್ಟ ಎಲ್ಲ ಗಿಡಗಳನ್ನು ನಿತ್ಯ ನೀರುಣಿಸಿ ಬದುಕಿಸಿದ್ದಾರೆ. ಅರಣ್ಯ ಇಲಾಖೆಯವರು ಎಷ್ಟೇ ಗಿಡ ನೆಡಲಿ ಅವುಗಳಿಗೆ ನೀರುಣಿಸುತ್ತೇನೆ ಎಂದು ಪಣ ತೊಟ್ಟಿದ್ದಾರೆ. ಇವರ ಕಾರ್ಯಕ್ಕೆ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ. ಉದ್ಯಮಿಯಲ್ಲಿ ಓರ್ವ ಪರಿಸರ ಪ್ರೇಮಿ ಇರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಒಟ್ಟಾರೆ ಬಿಸಿಲು, ಬಿಸಿಲಿನ ಬೇಗೆಯಲ್ಲಿ ಜನರಿಗೆ ನೀರಿಲ್ಲದ ವೇಳೆ. ಈ ವ್ಯಕ್ತಿ ಗಿಡಗಳ ದಾಹ ನೀಗಿಸಲು ಪಣತೊಟ್ಟು ನಿಂತಿದ್ದಾರೆ. ಇವರ ಪರಿಸರ ಪ್ರೇಮ, ಗಿಡಗಳಿಗೆ ಜೀವಜಲ ನೀಡಿ ಗಿಡಗಳ ಜೀವ ಕಾಯುವ ಕಾರ್ಯ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.
ಬೇಸಿಗೆ ಕಾಲ ಶುರುವಾದಾಗ ಸುತ್ತಲಿರುವ ಗಿಡಮರಗಳು ಬಾಡುತ್ತವೆ. ಅವುಗಳಿಗೆ ನೀರಿನ ಅವಶ್ಯಕತೆ ಇದೆ. ಆದ್ದರಿಂದ ನಾನು ಪ್ರತಿನಿತ್ಯ ಮರಗಿಡಗಳಿಗೆ ನೀರುಣಿಸುತ್ತೇನೆ. ಬೆಳಿಗ್ಗೆ ಸಂಜೆ ಪ್ರತಿ ನಿತ್ಯ ಗಿಡಗಳಿಗೆ 4 ವರ್ಷದಿಂದ ನೀರು ಹಾಕುತ್ತಿದ್ದೇನೆ. ಇಲ್ಲಿಯವರೆಗೆ 10 ಸಾವಿರಕ್ಕೂ ಹೆಚ್ಚು ಗಿಡಗಳಿಗೆ ನೀರು ನೀಡುತ್ತಿದ್ದೇನೆ. ಅರಣ್ಯ ಇಲಾಖೆ ಗಿಡಗಳನ್ನು ನೆಡುತ್ತಿದ್ದಂತೆ ನಾನು ಅವುಗಳಿಗೆ ನೀರುಣಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ಇದರಲ್ಲಿ ನನಗೆ ಖುಷಿ ಇದೆ ಎಂದು ಪರಿಸರ ಪ್ರೇಮಿ ರಮೇಶ್ ಹಾದಿಮನಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅರಣ್ಯ ಇಲಾಖೆಯವರು ಗಿಡಗಳನ್ನು ನೆಟ್ಟಿರುತ್ತಾರೆ. ಆದರೆ ಅದಕ್ಕೆ ಪೋಷಕಾಂಶಗಳು ಸಿಗುತ್ತಿರಲಿಲ್ಲ. ಆದರೆ ರಮೇಶ್ ಅವರು, ಪ್ರತಿ ದಿನ ನೀರು, ಗೊಬ್ಬರವನ್ನು ನೀಡುತ್ತಾರೆ. ತಮ್ಮ ಸ್ವಂತ ಹಣ ವ್ಯಯಿಸುತ್ತಿದ್ದಾರೆ. ರಸ್ತೆಯ ಪಕ್ಕದಲ್ಲಿರುವ ರಸ್ತೆಯ ಪಕ್ಕದ ಗಿಡ ಮರಗಳನ್ನು ಪ್ರೀತಿಯಿಂದ ಆರೈಸುತ್ತಾರೆ. ಗಿಡ ರಕ್ಷಣೆಗೆ ಬಿಡುವಿನ ಸಮಯದಲ್ಲಿ ಊರಿನವರು ಕೈಜೋಡಿಸಿದರೆ ರಮೇಶ್ ಅವರಿಗೂ ಇನ್ನೂ ಹೆಚ್ಚಿನ ಉತ್ಸಾಹ ಮೂಡುತ್ತದೆ. ಪರಿಸರವೂ ಚೆನ್ನಾಗಿರುತ್ತದೆ. ಹಳ್ಳಿಯಲ್ಲಿ ಉತ್ತಮ ವಾತಾವಣೆ ಸಿಗುತ್ತದೆ ಎಂದು ಗ್ರಾಮಸ್ಥ ಇಷ್ಟಲಿಂಗ ನರೇಗಲ್ ಅಯಭಿಪ್ರಾ ಪಟ್ಟಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಹಸಿರು ಮಾನವೀಯತೆ; ರಸ್ತೆ ಬದಿಯಲ್ಲಿ ಒಣಗಿ ಹೋಗುತ್ತಿದ್ದ ಗಿಡಗಳಿಗೆ ನೀರುಣಿಸಿದ ದ್ವಾರಕಾಮಯಿ ಟ್ರಸ್ಟ್ ಸದಸ್ಯರು
(Bagalkot Environmentalist Ramesh pours water to 10 thousand plants daily)