ಬಾಗಲಕೋಟೆ: ದೇಶದಲ್ಲಿ ಹೋಳಿ ಹಬ್ಬಕ್ಕೆ(Holi festival) ಅದರದೇ ವಿಶೇಷ ಸ್ಥಾನ ಇದೆ. ಕೋಲ್ಕತ್ತಾ ಹೊರತು ಪಡಿಸಿದರೆ ಅತೀ ಹೆಚ್ಚು ಹೋಳಿ ರಂಗೇರುವುದು ಕರ್ನಾಟಕದಲ್ಲಿಯೇ. ಅದು ಕೂಡಾ ಉತ್ತರ ಕರ್ನಾಟಕದ ಬಾಗಲಕೋಟೆ ನಗರದಲ್ಲಿ. ಕೋಲ್ಕತ್ತಾ ಬಳಿಕ ಹೋಳಿಹಬ್ಬಕ್ಕೆ ಅತೀ ಹೆಚ್ಚು ಪ್ರಸಿದ್ಧಿ ಪಡೆದಿದೆ. ಅಂದರೆ ಅದು ಬಾಗಲಕೋಟೆ. ಹೀಗಾಗಿ ಬಾಗಲಕೋಟೆ ಹೋಳಿಹಬ್ಬಕ್ಕೆ ಸರ್ಕಾರ ಸ್ಥಾನಮಾನ ನೀಡಿ, ಪ್ರೋತ್ಸಾಹ ಮಾಡಬೇಕೆಂಬುದು ಬಹುದಿನ ಬೇಡಿಕೆ ಆಗಿತ್ತು. ಬಾಗಲಕೋಟೆಯ ಜನರ ಬೇಡಿಕೆಯನ್ನು ಸರ್ಕಾರ(State government) ಪೂರೈಸಿದ್ದು, ಈ ಬಾರಿ ಬಾಗಲಕೋಟೆ ಹೋಳಿ(Holi) ಮತ್ತಷ್ಟು ರಂಗೇರುವ ಲಕ್ಷಣ ಗೋಚರಿಸುತ್ತಿವೆ.
ಕೊಲ್ಕತ್ತಾ ನಗರವನ್ನು ಹೊರತುಪಡಿಸಿದರೆ ದೇಶದಲ್ಲೇ ಅತಿಹೆಚ್ಚು ಹೋಳಿಯಾಡುವ 2ನೇ ನಗರ ಎಂಬ ಹೆಗ್ಗಳಿಕೆಯನ್ನ ನಮ್ಮ ಕನ್ನಡ ನಾಡಿನ ಬಾಗಲಕೋಟೆ ನಗರ ಹೊಂದಿದೆ. ಸುಮಾರು ಐದು ದಿನಗಳ ಕಾಲ ಬಾಗಲಕೋಟೆ ನಗರದಲ್ಲಿ ಹೋಳಿಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಹೀಗಾಗಿ ನಮ್ಮ ನಾಡಿನ ಸಾಂಸ್ಕೃತಿಕ ಬಿಂಬದಂತಿದ್ದ ಬಾಗಲಕೋಟೆ ಹೋಳಿಹಬ್ಬವನ್ನು ಸರ್ಕಾರ ಉತ್ತೇಜಿಸಬೇಕು ಎನ್ನುವುದು ಇಲ್ಲಿನ ಜನರ ಆಗ್ರಹ ಆಗಿತ್ತು. ಬಾಗಲಕೋಟೆ ಹೋಳಿಗೆ ಸಾಂಸ್ಕ್ರತಿಕ ಮಾನ್ಯತೆ ನೀಡಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಇದರ ಮೊದಲೆ ಹೆಜ್ಜೆ ಎಂಬಂತೆ ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಬಾಗಲಕೋಟೆ ಪ್ರಸಿದ್ಧ ಹೋಳಿಹಬ್ಬಕ್ಕೆ 10 ಲಕ್ಷ ರೂಪಾಯಿ ಬಿಡುಗಡೆ ಮಾಡುವ ಮೂಲಕ ಉತ್ತೇಜನ ಕೊಟ್ಟಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಡಾ. ಕೆ. ರಾಜೇಂದ್ರ ಹೇಳಿದ್ದಾರೆ.
ಪ್ರತಿವರ್ಷ ಬಾಗಲಕೋಟೆ ಹೋಳಿಗೆ ರಾಜ್ಯದ ನಾನಾ ಕಡೆಗಳಿಂದ ಜನ ಹರಿದು ಬರುತ್ತಾರೆ. ಕಳೆದೆರಡು ವರ್ಷಗಳಿಂದ ಕೊವಿಡ್ ನಿಯಮಾನುಸಾರ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡ ಕಾರಣ ಹೋಳಿ ಹಬ್ಬವನ್ನು ಸರಿಯಾಗಿ ಆಚರಣೆ ಮಾಡಲು ಅಗಲಿಲ್ಲ. ಬಾಗಲಕೋಟೆ ಜನ ಹೋಳಿ ಮಿಸ್ ಮಾಡಿಕೊಂಡ ಅನುಭವದಲ್ಲಿದ್ದರು. ಇನ್ನು ಐತಿಹಾಸಿಕ ಹೋಳಿ ಹಬ್ಬವನ್ನು ಯಾವುದೇ ಕಾರಣಕ್ಕೂ ಅಳಿವಿನಂಚಿಗೆ ತಳ್ಳಬಾರದು ಎಂಬ ಹಿನ್ನೆಲೆ, ಈ ಸಾರಿ ಬಾಗಲಕೋಟೆ ಹೋಳಿ ಹಬ್ಬವನ್ನು ಉತ್ತೇಜಿಸಲು ಸರ್ಕಾರ 10 ಲಕ್ಷ ರೂಪಾಯಿ ಹಣವನ್ನು ನೀಡಿದ್ದು, ಬಾಗಲಕೋಟೆ ಹೋಳಿಹಬ್ಬದ ಅಭಿಮಾನಿಗಳಿಗೆ ಉತ್ಸಾಹ ಇಮ್ಮಡಿ ಮಾಡಿದೆ.
ಈ ಬಾರಿ ಬಾಗಲಕೋಟೆ ಹೋಳಿಹಬ್ಬ ಇದೇ ಮಾರ್ಚ್ 17 ರಿಂದ 21 ರವರೆಗೆ ನಡೆಯಲಿದೆ. ಮೂರು ದಿನ ಹಳೆ ಬಾಗಲಕೋಟೆ ನಗರದಲ್ಲಿ ಬಣ್ಣದ ಬಂಡಿಗಳ ಮೂಲಕ ಸಂಚರಿಸಿ ಹೋಳಿ ಆಚರಿಸಲಾಗುತ್ತದೆ. ಇನ್ನೆರಡು ದಿನ ವಿದ್ಯಾಗಿರಿ ಹಾಗೂ ನವನಗರದಲ್ಲಿ ಹೋಳಿ ಹಬ್ಬ ಆಚರಣೆ ಮಾಡೋದಕ್ಕೆ ಬಾಗಲಕೋಟೆ ಹೋಳಿಹಬ್ಬ ಆಚರಣಾ ಸಮಿತಿ ನಿರ್ಧಾರ ಮಾಡಿದೆ. ರಾಜ್ಯ ಸರ್ಕಾರ ಹೋಳಿಹಬ್ಬಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ನೀಡಿರುವ ಹಣದಿಂದ ಫುಲ್ ಖುಷಿ ಆಗಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಹೋಳಿಪದ, ಸೋಗಿನಬಂಡಿ, ಯುವಕರಿಗೆ ಹೋಳಿ ಟಿ ಶರ್ಟ್, ಹಲಗೆ ಮೇಳ ಸೇರಿದಂತೆ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗುವುದು. ಉತ್ರಮ ಪ್ರದರ್ಶನ ನೀಡಿದವರಿಗೆ ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದ್ದಾರೆ ಎಂದು ಹೋಳಿ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಬಳೇಶ್ವರ ದುಡಗುಂಟಿ ತಿಳಿಸಿದ್ದಾರೆ.
ವರದಿ: ರವಿ ಮೂಕಿ
7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್; ಹೋಳಿ ಹಬ್ಬಕ್ಕೆ ಮತ್ತೆ ವೇತನ ಹೆಚ್ಚಳ ಸಾಧ್ಯತೆ