ಬಾಗಲಕೋಟೆ, ಜು.02: ಇಷ್ಟು ದಿನ ತಣ್ಣಗಾಗಿದ್ದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಹೌದು, ಮತ್ತೆ ಮೀಸಲಾತಿ ಹೋರಾಟಕ್ಕೆ ಬಸವ ಜಯಮೃತ್ಯುಂಜಯಶ್ರೀ(Basava Jaya Mrityunjaya Shree) ಸಜ್ಜಾಗಿದ್ದಾರೆ. ಈ ಕುರಿತು ಬಾಗಲಕೋಟೆ ಜಿಲ್ಲೆಯ ಇಳಕಲ್ನಲ್ಲಿ ಮಾತನಾಡಿದ ಶ್ರೀಗಳು, ‘ಮೀಸಲಾತಿಗೆ ಆಗ್ರಹಿಸಿ ನಾಳೆ(ಜು.03)ಯಿಂದ ಆಗ್ರಹ ಪತ್ರ ಚಳವಳಿ ಆರಂಭಿಸಲಿದ್ದೇವೆ. ಈ ಬಾರಿ ಶಾಸಕ ವಿನಯ್ ಕುಲಕರ್ಣಿ ಮನೆಯಿಂದಲೇ ಈ ಹೋರಾಟ ಶುರುವಾಗುತ್ತದೆ ಎಂದಿದ್ದಾರೆ.
ಇನ್ನು ನಮ್ಮ ಸಮುದಾಯದ(ಪಂಚಮಸಾಲಿ)20 ಜನ ಶಾಸಕರಿದ್ದಾರೆ. ಅವರೆಲ್ಲರ ಮನೆಗಳಿಗೆ ಹೋಗುತ್ತೇವೆ. ಅಧಿವೇಶನದಲ್ಲಿ ಮೀಸಲಾತಿ ಪರ, ಸಾಮಾಜಿಕ ನ್ಯಾಯದ ಪರ ಧ್ವನಿ ಎತ್ತಲು ಶಾಸಕರಿಗೆ ಮನವಿ ಮಾಡುತ್ತೇವೆ. ಹೀಗಾಗಿ ನಾಳೆಯಿಂದ ಪಂಚಮಸಾಲಿ ಸಮುದಾಯಕ್ಕೆ 2Aಮೀಸಲಾತಿಗಾಗಿ ಆಗ್ರಹಿಸಿ ಪತ್ರ ಚಳುವಳಿ ಮಾಡಲಿದ್ದೇವೆ ಎಂದು ಜಯಮೃತ್ಯುಂಜಯಶ್ರೀ ಹೇಳಿದರು.
ಇನ್ನು ಪಂಚಮಸಾಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಶ್ರೀಗಳು ಕಳೆದ ಮೂರು ವರ್ಷದಿಂದ ಹೋರಾಟ ನಡೆಸಿದ್ದಾರೆ. ಈ ಕುರಿತು ಕಳೆದ ಮೇ. 22 ರಂದು ಧಾರವಾಡದಲ್ಲಿ ಮಾತನಾಡಿದ್ದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು, ‘ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೂ ಹೋರಾಟ ಮುಂದುವರೆಸಲಾಗುವುದು ಎಂದಿದ್ದರು. ಅದರಂತೆ ಇದೀಗ ಮತ್ತೆ ಹೋರಾಟಕ್ಕೆ ಸಜ್ಜಾಗಿದ್ದು, ನಾಳೆಯಿಂದಲೇ ಪತ್ರ ಚಳುವಳಿ ಆರಂಭಿಸಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ