ದಾನ ಕೊಟ್ಟ ವಸ್ತು ಬಗ್ಗೆ ಎಂದಿಗೂ ನೆನಪಿಡುವುದಿಲ್ಲ, ಎಲ್ಲಿಯೂ ಮಾತಾಡಲ್ಲ: ಪಂಚಮಸಾಲಿ ಸ್ವಾಮೀಜಿ ಹೇಳಿಕೆಗೆ ಮುರುಗೇಶ್ ನಿರಾಣಿ ಪ್ರತಿಕ್ರಿಯೆ

ನನ್ನ ಹೆಸರು ಹಾಳು ಮಾಡುವ ಉದ್ದೇಶದಿಂದ ಯಾರೋ ಈ ರೀತಿಯ ಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ನನ್ನನ್ನು ಹೊಣೆಗಾರನನ್ನಾಗಿಸಬಾರದು ಎಂದು ಮುರುಗೇಶ್ ನಿರಾಣಿ ವಿನಂತಿಸಿದ್ದಾರೆ.

ದಾನ ಕೊಟ್ಟ ವಸ್ತು ಬಗ್ಗೆ ಎಂದಿಗೂ ನೆನಪಿಡುವುದಿಲ್ಲ, ಎಲ್ಲಿಯೂ ಮಾತಾಡಲ್ಲ: ಪಂಚಮಸಾಲಿ ಸ್ವಾಮೀಜಿ ಹೇಳಿಕೆಗೆ ಮುರುಗೇಶ್ ನಿರಾಣಿ ಪ್ರತಿಕ್ರಿಯೆ
ಸಚಿವ ಮುರುಗೇಶ್ ನಿರಾಣಿ ಮತ್ತು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 03, 2022 | 8:19 PM

ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ (Murugesh Nirani) ದಾನವಾಗಿ ಕೊಟ್ಟ ವಸ್ತುಗಳನ್ನು ವಾಪಸ್ ಕೊಡುತ್ತೇವೆ ಎಂಬ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ (Basava Jaya Mrutyunjaya Swamiji) ಹೇಳಿಕೆಯಿಂದ ಮನಸ್ಸಿಗೆ ನೋವಾಗಿದೆ ಎಂದು ಮುರುಗೇಶ್ ನಿರಾಣಿ ಪ್ರತಿಕ್ರಿಯಿಸಿದ್ದಾರೆ. ಪಂಚಮಸಾಲಿ ಶ್ರೀಗಳ ಮೇಲೆ ನನಗೆ ಪೂಜ್ಯ ಭಾವನೆ ಇದೆ. ನಾನು ಕೊಟ್ಟ ದಾನದ ಬಗ್ಗೆ ಯಾವತ್ತೂ ಎಲ್ಲಿಯೂ ಹೇಳಿಲ್ಲ. ಮುಂದೆಯೂ ಹೇಳುವುದಿಲ್ಲ. ಅಂಥ ಜಾಯಮಾನ ನಮ್ಮದಲ್ಲ. ನಾವು ಬಲಗೈಯಿಂದ ಕೊಟ್ಟ ದಾನವು ಎಡಗೈಗೆ ಗೊತ್ತಿರುವುದಿಲ್ಲ. ನಮ್ಮ ಹೆಸರು ಹಾಳು ಮಾಡಲು ಇಂಥ ಅಪಪ್ರಚಾರ ಮಾಡುತ್ತಿದ್ದಾರೆ. ಇಂಥ ಪ್ರಚಾರಗಳ ಬಗ್ಗೆ ಪೂರ್ವಾಪರ ಖಚಿತಪಡಿಸಿಕೊಳ್ಳದೆ ಮಾತನಾಡಬಾರದು ಎಂದು ಅವರು ಸಲಹೆ ಮಾಡಿದರು.

ನಮಗೆ ಪಂಚಮಸಾಲಿ ಮತ್ತು ಅನ್ಯ ಸಮುದಾಯದ ಸ್ವಾಮೀಜಿಗಳ ಬಗ್ಗೆ ಅಪಾರ ಗೌರವವಿದೆ. ನಮ್ಮ ಪೂರ್ವಜರ ಕಾಲದಿಂದಲೂ ಮಠ ಮಾನ್ಯಗಳಿಗೆ, ದೇಗುಲಗಳಿಗೆ ಸಾಧುಗಳಿಗೆ ನಮ್ಮ ‌ಕೈಲಾದಷ್ಟು ಸಹಾಯ ಮಾಡುತ್ತಿದ್ದೇವೆ. ಕೊಟ್ಟ ದಾನಧರ್ಮದ ಬಗ್ಗೆ ನೆನಪು ಸಹ ಇರುವುದಿಲ್ಲ. ನಾಡಿನ ಎಲ್ಲ ಪರಂಪರೆಯ ಸಂತ ಮಹಾಂತ ಮಠಾಧೀಶರುಗಳ ಸಾಮಿಪ್ಯ ದೊರೆತಿರುವುದು ನಮ್ಮ ಸೌಭಾಗ್ಯ ಎಂದೇ ಭಾವಿಸಿದ್ದೇವೆ ಎಂದರು.

ಬಸವಾದಿ ಶರಣರ ಅನುಯಾಯಿಗಳಾದ ನಾವು ಎಂದಿಗೂ ಮಾಡಿದ ಸೇವೆ ದಾನಧರ್ಮದ ಬಗ್ಗೆ ನೆನಪು ಕೂಡ ಇಟ್ಟುಕೊಂಡಿಲ್ಲ. ನಾನು ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗೋದಕ್ಕೆ ಎಲ್ಲ ಸಮಾಜದವರ, ಎಲ್ಲ ಸ್ವಾಮೀಜಿಗಳ ಆಶೀರ್ವಾದ ಇದೆ. ಲಿಂಗಾಯತ, ವೀರಶೈವ ಲಿಂಗಾಯತ, ಲಿಂಗಾಯತ ಉಪಪಂಗಡಗಳು ಹಾಗೂ ಇತರೆ ಎಲ್ಲ ಸಮಾಜದ ಜನರ, ಪೂಜ್ಯರ ಆಶೀರ್ವಾದ ಮತ್ತು ಅವರ ಋಣ ನಮ್ಮ ಮೇಲಿದೆ. ಅದಕ್ಕಾಗಿ ಹಗಲು ರಾತ್ರಿ ಎನ್ನದೆ ಕೆಲಸ ಮಾಡಲು ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಗ್ಗೆಯೂ ಸಾಕಷ್ಟು ಗೌರವ ಇದೆ. ಅವರು ನಮ್ಮ ಪೂಜ್ಯರು. ಅವರ ಬಗ್ಗೆ ನಮ್ಮ ಅಭಿಮಾನ, ಗೌರವ ಮತ್ತು ಪೂಜ್ಯ ಭಾವನೆ ಸದಾ ಮುಂದುವರೆಯುತ್ತದೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಈ ವಿಚಾರಗಳು ಹಾದಿಬೀದಿ ರಂಪಾಟವಾಗದೆ, ಮಾದ್ಯಮಗಳಿಗೆ ಆಹಾರವಾಗದೇ ಇಲ್ಲಿಯೇ ಮುಕ್ತಾಯವಾಗಲಿ ಎಂದು ವಿನಂತಿಸಿದರು.

ನನ್ನ ಹೆಸರು ಹಾಳು ಮಾಡುವ ಉದ್ದೇಶದಿಂದ ಯಾರೋ ಈ ರೀತಿಯ ಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ನನ್ನನ್ನು ಹೊಣೆಗಾರನನ್ನಾಗಿಸಬಾರದು. ಪಂಚಮಸಾಲಿ ಸ್ವಾಮೀಜಿಗಳು ಸಮಾಜಕ್ಕೆ ಮೀಸಲಾತಿ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರ ಹೋರಾಟಕ್ಕೆ ಸದಾ ನಮ್ಮ ಬೆಂಬಲವಿದೆ. ಸ್ವಾಮೀಜಿಯವರಿಗೆ ನಮ‌್ಮ ಕಡೆಯಿಂದ ಕೊಟ್ಟ ದಾನದ ಬಗ್ಗೆ ಬೇರೆ ಯಾರಾದರೂ ಮಾತಾಡಿದರೆ ಅದನ್ನು ನನ್ನ ಮೇಲೆ ಹೊರಿಸಬಾರದು, ಯಾವುದೇ ವಿಚಾರವನ್ನು ಖಚಿತಪಡಿಸಿಕೊಳ್ಳದೆ ಬಹಿರಂಗವಾಗಿ ಮಾತಾಡಬಾರದು ಎಂದು ವಿನಂತಿಸಿದರು.

ಹಾಸನ ಕಾರ್ಖಾನೆಗೆ ನಿರಾಣಿ ಭೇಟಿ ಹಾಸನ: ನಗರದ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ಮುರುಗೇಶ್ ನಿರಾಣಿ ಶಾಸಕ ಪ್ರೀತಂ ಗೌಡ ಅವರೊಂದಿಗೆ ಹಾಸನದ ಹಿಮತ್​ಸಿಂಗ್​ಕಾ ಸಿಡೆ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿದರು. ಬೃಹತ್ ಕೈಗಾರಿಗೆ ಕಾರ್ಯನಿರ್ವಾಹಣೆಯನ್ನು ವೀಕ್ಷಿಸಿ, ವಿವರ ಪಡೆದುಕೊಂಡರು.

ಇದನ್ನೂ ಓದಿ: ಸಚಿವ ನಿರಾಣಿ ಹೆಸರಲ್ಲಿ ಶ್ರೀಪೀಠಕ್ಕೆ ಕೊಟ್ಟ ವಸ್ತುಗಳನ್ನು ವಾಪಸ್ ಕೊಡಲು ನಿರ್ಣಯ: ಬಸವ ಜಯಮೃತ್ಯುಂಜಯಶ್ರೀ

ಇದನ್ನೂ ಓದಿ: ಪಂಚಮಸಾಲಿ 3ನೇ ಪೀಠವಾದರೆ ತಪ್ಪೇನಲ್ಲ, ಇದಕ್ಕೂ ನನಗೂ ಸಂಬಂಧವಿಲ್ಲ; ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada