ಬಾಗಲಕೋಟೆ: ಬಾಗಲಕೋಟೆಯ ನವನಗರದ ನಿವಾಸಿ ವೆಂಕಪ್ಪ ಸಂಬಾಜಿ ಸುಗತೇಕರ್(Venkappa Sambaji Sugatekar) ಗೆ ಡಿ.1 ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿಯಲ್ಲಿ ನಡೆಯುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ(Karnataka Folklore university)ದ 7ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ನ್ನು ನೀಡಲಿದ್ದಾರೆ. 79 ವರ್ಷದ ವೆಂಕಪ್ಪ ಸುಗತೇಕರ್ ಅವರು ಕಳೆದ ಏಳು ದಶಕಗಳಿಂದ ಗೊಂದಲಿಗರ ಒಂದು ಸಾವಿರಕ್ಕೂ ಅಧಿಕ ಹಾಡು ಹಾಡಿದ್ದಾರೆ. ಇದರ ಜೊತೆಗೆ 150 ಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ.
ಮೂಲತಃ ಬಾಗಲಕೋಟೆ ನಿವಾಸಿಯಾಗಿರುವ ವೆಂಕಪ್ಪ ಸಂಬಾಜಿ ಸುಗತೇಕರ್ ಅವರು ಗೊಂದಳಿ ಪದ ಕಟ್ಟುವಲ್ಲಿ ನಿಸ್ಸಿಮರು. ವಂಶಪಾರಂಪರಿಕವಾಗಿ ಬಂದಿರುವ ಗೊಂದಳಿ ವೃತ್ತಿಯನ್ನು ಕಳೆದ 70 ವರ್ಷಗಳಿಂದ ಮಾಡುತ್ತಿದ್ದಾರೆ. ಇದೀಗ ವೆಂಕಪ್ಪರಿಗೆ ಗೌರವ ಡಾಕ್ಟರೇಟ್ ಸಂದಿದೆ. ಹೀಗಾಗಿ ವೆಂಕಪ್ಪನವರ ಮನೆಯಲ್ಲಿ ಸಂಭ್ರಮ ಹೆಚ್ಚುವಂತೆ ಮಾಡಿದೆ. ಇಡೀ ಕುಟುಂಬಸ್ಥರು ವೆಂಕಪ್ಪರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ.ತಮ್ಮ 79 ನೇ ವಯಸ್ಸಿನಲ್ಲೂ ವೆಂಕಪ್ಪನವರು ಹಾಡುವುದಕ್ಕೆ ನಿಂತರೆ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತಾರೆ. ದಾಸರ ಪದ, ಸಂತ ಶಿಶುನಾಳರ ಪದ, ವಚನ ಸಾಹಿತ್ಯ, ದೇವಿಯ ಪದಗಳು ಹೀಗೆ ಹಲವು ಪ್ರಕಾರದ ಹಾಡುಗಳನ್ನು ಗೊಂದಳಿ ಪದದ ಶೈಲಿ ಮೂಲಕ ಹಾಡಿ ಸಮಾಜದಲ್ಲಿನ ಗೊಂದಲಗಳನ್ನು ಹಾಡಿನ ಮೂಲಕ ವಿವರಿಸುತ್ತಾರೆ. 70 ವರ್ಷಗಳನ್ನು ಸವೆಸಿದ ವೆಂಕಪ್ಪನವರಿಗೆ ಈಗಾಗಲೇ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಸಂದಿದ್ದವು. ಇದೀಗ ಆ ಸಾಲಿಗೆ ಗೌರವ ಡಾಕ್ಟರೇಟ್ ಪದವಿ ಸೇರಿದ್ದು ವೆಂಕಪ್ಪನವರ ಕುಟುಂಬದಲ್ಲಿ ಹಬ್ಬದ ಕಳೆ ಕಟ್ಟಿದೆ.
ಇದನ್ನೂ ಓದಿ:187 ನಾಣ್ಯಗಳನ್ನು ನುಂಗಿದ ಭೂಪ: ಬೆಚ್ಚಿಬಿದ್ದ ಬಾಗಲಕೋಟೆ ವೈದ್ಯರು
ವಿಶೇಷ ಅಂದರೆ ವೆಂಕಪ್ಪನವರು ಶಾಲೆಗೆ ಹೋಗಿಲ್ಲ ಎನ್ನುವುದು. ಬಡ ಕುಟುಂಬದಲ್ಲಿ ಬೆಳೆದ ವೆಂಕಪ್ಪನವರಿಗೆ ಗೊಂದಳಿ ಪದ ತಮ್ಮ ತಂದೆ ಮತ್ತು ತಾತನಿಂದ ಬಂದ ಬಳುವಳಿಯಾಗಿದೆ. ಹೀಗಾಗಿ ಓದಲು, ಬರೆಯಲು ಬಾರದ ವೆಂಕಪ್ಪನವರಿಗೆ ಜ್ಞಾಪಕ ಶಕ್ತಿಯೇ ಆಧಾರವಾಗಿದ್ದು, ಸಾವಿರಕ್ಕೂ ಅಧಿಕ ಹಾಡುಗಳನ್ನು ಚಾಚು ತಪ್ಪದೇ ಬಾಯಿ ಪಾಟದ ಮೂಲಕವೇ ಹಾಡಿ ಎಲ್ಲರ ಮೆಚ್ಚುಗೆ ಗಳಿಸುತ್ತಾರೆ. ಆಕಾಶವಾಣಿ, ದೂರದರ್ಶನ ಸೇರಿದಂತೆ ರಾಜ್ಯ, ಹೊರರಾಜ್ಯಗಳಲ್ಲೂ ಕಾರ್ಯಕ್ರಮ ನೀಡಿರುವ ಶ್ರೇಯ ಇವರಿಗೆ ಸಲ್ಲುತ್ತದೆ.
ಇದು ಕೇವಲ ವೆಂಕಪ್ಪನವರ ಕಾಲಕ್ಕೆ ಮುಗಿಯದೇ ಅವರ ಮಕ್ಕಳು, ಮೊಮ್ಮಕ್ಕಳಿಗೂ ವಿಸ್ತರಿಸಿದ್ದು ವಿಶೇಷವಾಗಿದೆ. ಅವರ ಮಕ್ಕಳು ಸಹ ಪದವಿಧರರಿದ್ದರೂ ಸರ್ಕಾರಿ ಕೆಲಸಕ್ಕಿಂತ ಮೂಲ ಗೊಂದಳಿ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡು, ತಂದೆಯ ಜೊತೆಗೆ ತಮ್ಮ ಪರಂಪರೆಯನ್ನು ಮುಂದುವರೆಸಿದ್ದಾರೆ. ಸದ್ಯ ತಮ್ಮ ತಂದೆಗೆ ಡಾಕ್ಟರೇಟ್ ಪದವಿ ಸಂದಿದೆ. ಅವರು ಬಾಲ್ಯದಿಂದಲೇ ಈ ವೃತ್ತಿಯಲ್ಲಿದ್ದಾರೆ. ಸರ್ಕಾರ ನಮ್ಮ ವೃತ್ತಿಗೆ ಖಾಯಂ ಕೆಲಸ ನೀಡಬೇಕು. ಕೇವಲ ಕಾರ್ಯಕ್ರಮ ಇದ್ದಾಗ ಮಾತ್ರ ನಮಗೆ ಕೆಲಸ ಇರುತ್ತದೆ. ಕಾರ್ಯಕ್ರಮ ಇಲ್ಲವಾದರೆ ನಾವು ಖಾಲಿ ಇರುವ ಸ್ಥಿತಿ ಇದೆ ಎನ್ನುತ್ತಾರೆ. ನಮ್ಮ ತಂದೆಗೆ ಕೇಂದ್ರ ಸರ್ಕಾರದ ಪದ್ಮಶ್ರೀ ಸಿಕ್ಕಿದರೆ ನಮಗೆ ಇನ್ನಷ್ಟು ಸಾರ್ಥಕತೆ ಸಿಕ್ಕಂತಾಗುತ್ತದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಬಾಗಲಕೋಟೆ: ವೃದ್ಧನ ಹೊಟ್ಟೆಯಲ್ಲಿದ್ದ 187 ಕಾಯಿನ್ಗಳನ್ನು ಹೊರತೆಗೆದ HSK ಆಸ್ಪತ್ರೆ ವೈದ್ಯರು
ಒಟ್ಟಿನಲ್ಲಿ ಒಂದು ದಿನವು ಶಾಲೆಗೆ ಹೋಗದೇ, ಪಾಠ ಕೇಳದೇ, ಎಂಬಿಬಿಎಸ್ ಸಹ ಓದದೇ, ತಮ್ಮ ವಂಶಪಾರಂಪರಿಕವಾಗಿ ಬಂದ ವೃತ್ತಿಯನ್ನೇ ಗೌರವಿಸಿ, ಶ್ರದ್ಧಾ ಭಕ್ತಿಯಿಂದ ಕಳೆದ 70 ವರ್ಷಗಳಿಂದ ಮುತ್ತಿನಂತ ಹಾಡು ಕಟ್ಟಿ, ಜನರನ್ನು ರಂಜಿಸುತ್ತಾ ಬಂದಿದ್ದ ಬಾಗಲಕೋಟೆಯ ಪ್ರಸಿದ್ಧ ಗೊಂದಳಿ ಹಾಡುಗಾರ ವೆಂಕಪ್ಪರಿಗೆ ಇದೀಗ ಗೌರವ ಡಾಕ್ಟರೇಟ್ ನೀಡಿದ್ದು ಬಾಗಲಕೋಟೆ ಜಿಲ್ಲೆಗೆ ಹೆಮ್ಮೆ ಹೆಚ್ಚುವಂತಾಗಿದೆ.
ವರದಿ: ರವಿಮೂಕಿ ಟಿವಿ 9 ಬಾಗಲಕೋಟೆ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ