ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೈನಕಟ್ಟಿ ಗ್ರಾಮದ ಅರ್ಜುನ ಗಲಗಲಿ ಎಂಬ ರೈತ ತನ್ನ ಹೊಲದಲ್ಲಿ ಸಾವಯವ ಕೃಷಿ ಹಾಗೂ ಉಪಕಸುಬುಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ತಮ್ಮ 11 ಎಕರೆ ಹೊಲದಲ್ಲಿ ಕಬ್ಬು ಈರುಳ್ಳಿ, ಕೋತಂಬರಿ, ಮೆಂತೆ ಸೊಪ್ಪು ಬೆಳೆದಿದ್ದಾರೆ. ಇದೀಗ ಗೋಧಿ ಕೂಡ ಬಿತ್ತನೆ ಮಾಡಿದ್ದಾರೆ. ಆದರೆ ಇದರ ಜೊತೆಗೆ ಹೊಲದಲ್ಲಿ ಇವರು ಮಾಡಿದ ಉಪಕಸುಬು ಎಲ್ಲರ ಕಣ್ಣರಳಿಸುವಂತೆ ಮಾಡಿದೆ. ಇವರು ತಮ್ಮ ಹೊಲದಲ್ಲಿ ಜೇನನ್ನ ಕೂಡ ಸಾಕಿದ್ದಾರೆ. ಜೊತೆಗೆ ತೋಟದ ಮನೆಯ ಪಕ್ಕದಲ್ಲಿ ನೂರಕ್ಕೂ ಅಧಿಕ ಜವಾರಿ ಕೋಳಿ, 80 ಕ್ಕೂ ಹೆಚ್ಚು ಕುರಿಗಳನ್ನ ಸಾಕಿದ್ದಾರೆ. ಪ್ರತಿ ವರ್ಷ ಕೃಷಿ ಉಪಕಸುಬುಗಳ ಮೂಲಕ ಎಲ್ಲ ಖರ್ಚು ತೆಗೆದು ಸುಮಾರು 10 ಲಕ್ಷದವರೆಗೂ ಆದಾಯ ಗಳಿಸುತ್ತಿದ್ದಾರೆ.
ಅರ್ಜುನ್ ಗಲಗಲಿ ಓದಿದ್ದು ಬಿಎ, ಎಂಟು ವರ್ಷಗಳ ಕಾಲ ಕೃಷಿ ಇಲಾಖೆಯಲ್ಲಿ ತಾಂತ್ರಿಕ ವಿಭಾಗದಲ್ಲಿ ಗುತ್ತಿಗೆಯಾಧಾರದ ಮೇಲೆ ಕೆಲಸ ಮಾಡಿದ್ದರು. ಆಗ ಅಲ್ಲಿ ಕೃಷಿಯಲ್ಲಿ ಮಾಡಬಹುದಾದ ಕೆಲಸಗಳ ಬಗ್ಗೆ ಪ್ರಭಾವಿತರಾಗಿ ತಮ್ಮ 11 ಎಕರೆ ಹೊಲದಲ್ಲಿ ಕೃಷಿ ನಡೆಸಿದ್ದಾರೆ. ಮೂರು ಎಕರೆಯಲ್ಲಿ ಕಬ್ಬು ,ಏಳು ಎಕರೆಯಲ್ಲಿ ಈರುಳ್ಳಿ ಬೆಳೆದು ಫಸಲು ತೆಗೆದಿದ್ದಾರೆ. ಇದರ ಜೊತೆ ಕೋತಂಬರಿ, ಮೆಣಸಿನಗಿಡ, ಮೆಂತೆ ಸೊಪ್ಪನ್ನು ಬೆಳೆದಿದ್ದಾರೆ. ರಾಸಾಯನಿಕ ಗೊಬ್ಬರ ,ಹಾಗೂ ಕ್ರಿಮಿನಾಶಕ ಬಳಸದೆ ಸಾವಯುವ ಕೃಷಿ ಮಾಡುತ್ತಿದ್ದಾರೆ. ಸುತ್ತಮುತ್ತಲಿನ ರೈತರು ಇವರ ಹೊಲಗಳಿಗೆ ಭೇಟಿ ಕೊಟ್ಟು ಇವರಿಂದ ಸಲಹೆ ಪಡೆಯುತ್ತಿದ್ದಾರೆ.
ಒಟ್ನಲ್ಲಿ ಕೃಷಿಯಲ್ಲಿ ಲಾಭ ಇಲ್ಲ ಅನ್ನೋರಿಗೆ ಅರ್ಜುನ ಗಲಗಲಿ ಮಾದರಿಯಾಗಿದ್ದಾರೆ. ನಾವು ಕಷ್ಟು ಪಟ್ಟು ದುಡಿದ್ರೆ ಭೂಮಿ ತಾಯಿ ಯಾವತ್ತು ಕೈ ಬಿಡಲ್ಲ ಅನ್ನೋದಕ್ಕೆ ಇವರೇ ಸಾಕ್ಷಿ.
-ರವಿ ಮೂಕಿ
ಇದನ್ನೂ ಓದಿ: Crime News: ಮೈಸೂರು ಹೊರವಲಯದಲ್ಲಿ ಡಬಲ್ ಮರ್ಡರ್; ಮಗನಿಂದಲೇ ತಂದೆ ಮತ್ತು ತಂದೆಯ ಪ್ರೇಯಸಿ ಕೊಲೆ